ಮಡಿಕೇರಿ, ಸೆ. 19: ದಕ್ಷಿಣ ಕನ್ನಡ ಹಾಗೂ ಕೊಡಗು ಜಿಲ್ಲೆಯ ಜನರ ಹಾಗೂ ಗೋವುಗಳ ಸಂಕಷ್ಟ ನಿವಾರಣೆಗೆ ಹವ್ಯಕ ಮಹಾಮಂಡಲ, ಕಾಮದುಘಾ ಹಾಗೂ ಅಖಿಲ ಹವ್ಯಕ ಮಹಾಸಭಾ ವತಿಯಿಂದ ಹರಸಿಕೊಂಡಂತೆ, ಶ್ರೀ ಸಂಸ್ಥಾನದವರ ಮಾರ್ಗದರ್ಶನದಂತೆ ತಾ. 18ರಂದು ಬೆಂಗಳೂರು ಗಿರಿನಗರದಲ್ಲಿರುವ ಶ್ರೀ ರಾಮಚಂದ್ರಾಪುರ ಮಠದ ಶಾಖಾ ಮಠ ಶ್ರೀರಾಮಾಶ್ರಮದಲ್ಲಿ ಶ್ರೀ ಕರಾರ್ಚಿತ ದೇವರಿಗೆ ಸಮಗ್ರ ಪೂಜಾ ಸೇವೆ, ಶ್ರೀ ಮಹಾ ಗಣಪತಿ ಹವನ, ಶ್ರೀ ರಾಮ ತಾರಕ ಹವನ, ಶ್ರೀ ಲಲಿತಾ ಹವನ, ಲಕ್ಷ ಕುಂಕುಮಾರ್ಚನೆ ಸಲ್ಲಿಸಲಾಯಿತು.
ಕೊಡಗು ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳಲ್ಲಿ ಅತಿವೃಷ್ಟಿಯಿಂದುಂಟಾದ ಸಂಕಷ್ಟ ಪರಿಹಾರಕ್ಕೆ ಶ್ರೀ ಕರಾರ್ಚಿತ ದೇವರ ಸನ್ನಿಧಿಯಲ್ಲಿ ಮಾಡಿಕೊಂಡಿದ್ದ ಹರಕೆಯನ್ನು ಒಪ್ಪಿಸಲಾಯಿತು.