ಗೋಣಿಕೊಪ್ಪಲು, ಸೆ. 19: ಕೊಡಗು ಜಿಲ್ಲಾ ಹಿತರಕ್ಷಣಾ ಸಮಿತಿಯ ಮಾಸಿಕ ಸಭೆ ಗೋಣಿಕೊಪ್ಪಲಿನ ಸಿಲ್ವರ್ ಸ್ಕೈ ಸಭಾಂಗಣದಲ್ಲಿ ಸಮಿತಿ ಜಿಲ್ಲಾಧ್ಯಕ್ಷ ಕಟ್ಟಿ ಮಂದಯ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಈ ಸಂದರ್ಭ ಕೊಡಗಿನಲ್ಲಿರುವ ಮಠ ಮಾನ್ಯಗಳನ್ನು ಸಂಪರ್ಕಿಸಿ, ಸಾಧ್ಯವಾದಷ್ಟು ಮಟ್ಟಿಗೆ ಅವರ ಜಾಗವನ್ನು ದಾನ ಪಡೆದು ನಿರಾಶ್ರಿತರಿಗೆ ಹಂಚಲು ಪ್ರಾಮಾಣಿಕವಾಗಿ ಪ್ರಯತ್ನಿಸುವಂತೆ ಸಭೆಯಲ್ಲಿ ಒಕ್ಕೊರಲಿನಿಂದ ತೀರ್ಮಾನಿಸಲಾಯಿತು.

ಕೊಡಗಿನಲ್ಲಿ ಪ್ರಕೃತಿ ವಿಕೋಪದಂತೆ ಕಾಡು ಪ್ರಾಣಿಗಳು ರೈತರ ಬೆಳೆಗಳನ್ನು ತಿಂದು ನಾಶಪಡಿಸಿ ರೈತರನ್ನು ನಿರ್ಗತಿಕರನ್ನಾಗಿಸುತ್ತಿದೆ. ಅರಣ್ಯ ಇಲಾಖೆಯವರಲ್ಲಿ ಹಾಗೂ ಅರಣ್ಯ ಸಚಿವರನ್ನು ಸಂಪರ್ಕಿಸಿ ಜಿಲ್ಲೆಯ ರೈತರ ಸಮಸ್ಯೆಗಳನ್ನು ತಿಳಿಸಿದರೂ ಮನವಿಗಳಿಗೆ ಸ್ಪಂದಿ ಸುತ್ತಿಲ್ಲ. ಕೊನೆಯ ಬಾರಿ ಎಂಬಂತೆ ಮತ್ತೊಮ್ಮೆ ಮನವಿ ಮಾಡಲಿದ್ದೇವೆ. ಅದಕ್ಕೂ ಅವರುಗಳು ಸ್ಪಂದಿಸದಿದ್ದರೆ ಕರ್ನಾಟಕ ಉಚ್ಛ ನ್ಯಾಯಾಲಯದಲ್ಲಿ ಸಾರ್ವಜನಿಕ ಹಿತಾಸಕ್ತಿಯಡಿ ಮೊಕದಮೆ ಹೂಡುವಂತೆ ಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.

‘ಕಿರಿಕಿರಿ ಮಾಡಿದರೆ ತದಕಿಸುವದು ಗೊತ್ತಿದೆ’ ಎಂದು ಸಂಸದ ಪ್ರತಾಪ ಸಿಂಹ ಅವರು ಕೊಡಗು ಕಾಫಿ ಬೆಳೆಗಾರರ ಸಂಘದ ಅಧ್ಯಕ್ಷರು, ಮಾಜಿ ಭಾ.ಜ.ಪ.ದ ಜಿಲ್ಲಾಧ್ಯಕ್ಷರು ಹಾಗೂ ನಿಗಮ ಮಂಡಳಿಯ ಅಧ್ಯಕ್ಷರಾಗಿದ್ದ ಎಂ.ಬಿ. ದೇವಯ್ಯ ಅವರಿಗೆ ಮಾಧ್ಯಮದಲ್ಲಿ ಹೇಳಿಕೆ ಕೊಟ್ಟಿರುವದು ಖಂಡನೀಯ ಮತ್ತು ವಿಷಾಧನೀಯ. ಒಬ್ಬ ಜನಪ್ರತಿನಿಧಿ ಜನರ ಸೇವೆ ಮಾಡುವ ಬದಲು ಆ ತರಹದ ಹೇಳಿಕೆ ಕೊಟ್ಟಿರುವದು ಖಂಡನೀಯ. ಈ ಬಗ್ಗೆ ಭಾ.ಜ.ಪ.ದ ರಾಜ್ಯ ಅಧ್ಯಕ್ಷ ಯಡಿಯೂರಪ್ಪ ಅವರಿಗೆ ಪತ್ರ ಬರೆದು ಸಂಸದ ಪ್ರತಾಪ ಸಿಂಹ ಅವರಿಗೆ ತಿಳುವಳಿಕೆ ಹೇಳುವಂತೆ ಸೂಚಿಸಲು ತೀರ್ಮಾನಿಸಲಾಯಿತು.

ಬಹು ಮುಖ್ಯವಾಗಿ ‘ಸಿ’ ರಾಜ್ಯವಾಗಿದ್ದ ಕೊಡಗು ರಾಜ್ಯವನ್ನು 1956 ರಲ್ಲಿ ಮೈಸೂರಿಗೆ ವಿಲೀನ ಗೊಳಿಸುವಾಗ ಏನೆಲ್ಲಾ ಒಡಂಬಡಿಕೆ ಮಾಡಿದ್ದಾರೆ. ಕೊಡಗಿಗೆ ಯಾವ ರೀತಿಯ ಪ್ರಾತಿನಿಧ್ಯ ನೀಡಬೇಕು. ಯಾವ ರೀತಿಯ ಮಾನದಂಡದನ್ವಯ ಅಭಿವೃದ್ಧಿ ಕಾರ್ಯ ಕೈಗೊಳ್ಳಬೇಕು ಎಂಬ ಒಪ್ಪಂದದ ಮಾಹಿತಿಯನ್ನು ಪಡೆದು ಅದರಲ್ಲಿರುವ ಶರತ್ತುಗಳ ಬಗ್ಗೆ ಸರಕಾರದ ಮುಂದೆ ಬೇಕು ಬೇಡಿಕೆಯನ್ನು ಇಡುವಂತೆ ಸಭೆಯಲ್ಲಿ ನಿರ್ಣಯಿಸಿ ಕ್ರಮ ಕೈಗೊಳ್ಳಲಾಯಿತು. ಸಭೆಯಲ್ಲಿ ಇತ್ತೀಚೆಗೆ ನಿಧನರಾದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಹಾಗೂ ಪ್ರಕೃತಿ ವಿಕೋಪಕ್ಕೆ ಸಿಲುಕಿ ಮೃತಪಟ್ಟವರ ಆತ್ಮಕ್ಕೆ ಶಾಂತಿಕೋರಿ ಶ್ರದ್ಧಾಂಜಲಿ ಅರ್ಪಿಸಲಾಯಿತು.