ಶನಿವಾರಸಂತೆ, ಸೆ. 19: ವಿದ್ಯಾರ್ಥಿಗಳು ರಾಷ್ಟ್ರೋನ್ನತಿಯ ಚಿಂತನಾ ಮನೋಭಾವ ಬೆಳೆಸಿ ಕೊಂಡರೆ ಮಾತ್ರ ರಾಷ್ಟ್ರ ಅಭಿವೃದ್ಧಿ ಪಥದಲ್ಲಿ ಸಾಗಲು ಸಾಧ್ಯ ಎಂದು ಪ್ರಾಂಶುಪಾಲ ಈ.ಎಂ. ದಯಾನಂದ್ ಅಭಿಪ್ರಾಯಪಟ್ಟರು.
ಪಟ್ಟಣದ ಭಾರತಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಮಡಿಕೇರಿಯ ನೆಹರು ಯುವ ಕೇಂದ್ರದ ಸಹಭಾಗಿತ್ವದಲ್ಲಿ ‘ದೇಶಭಕ್ತಿ ಮತ್ತು ರಾಷ್ಟ್ರ ನಿರ್ಮಾಣದಲ್ಲಿ ಯುವಜನರ ಪಾತ್ರ’ ವಿಷಯದ ಕುರಿತು ಪದವಿ ವಿದ್ಯಾರ್ಥಿಗಳಿಗಾಗಿ ನಡೆದ ತಾಲೂಕು ಮಟ್ಟದ ಭಾಷಣ ಸ್ಪರ್ಧೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ವಿದ್ಯಾರ್ಥಿ ಸಮೂಹ ಸೇರಿದಂತೆ ಪ್ರತಿ ಯುವಜನತೆ ದೇಶಭಕ್ತಿ, ದೇಶಪ್ರೇಮ ಭಾವನೆಯೊಂದಿಗೆ ರಾಷ್ಟ್ರೀಯ ಮೌಲ್ಯಗಳ ಅರಿವನ್ನು ಮೂಡಿಸಿಕೊಳ್ಳಬೇಕು ಎಂದು ಪ್ರಾಂಶುಪಾಲ ದಯಾನಂದ್ ಕರೆ ನೀಡಿದರು.
ಸೆಕ್ರೇಡ್ ಹಾರ್ಟ್ ವಿದ್ಯಾಸಂಸ್ಥೆ ಶಿಕ್ಷಕಿ ನೇತ್ರಾವತಿ ಪುರುಷೋತ್ತಮ್ ಮಾತನಾಡಿ, ಮಕ್ಕಳು ಚಿಕ್ಕವರಾಗಿ ರುವಾಗಲೇ ಅವರಲ್ಲಿ ದೇಶಭಕ್ತಿ ಹಾಗೂ ದೇಶಪ್ರೇಮ ಭಾವನೆಯನ್ನು ಮೂಡಿಸುವ ಜವಾಬ್ದಾರಿ ಪೋಷಕರು ಹಾಗೂ ಶಿಕ್ಷಕರ ಮೇಲಿದೆ ಎಂದರು.
ಕೊಡ್ಲಿಪೇಟೆ ಪ್ರಥಮ ದರ್ಜೆ ಕಾಲೇಜಿನ ಉಪನ್ಯಾಸಕ ಯೋಗೇಂದ್ರ ಮಾತನಾಡಿ, ಉತ್ತಮ ರಾಷ್ಟ್ರ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ಮುಖ್ಯವಾಗಿರುವ ಹಿನ್ನೆಲೆಯಲ್ಲಿ ರಾಷ್ಟ್ರದ ಮಹತ್ವದ ಅರಿವೂ ಮುಖ್ಯವಾಗಿದೆ. ವಿದ್ಯಾರ್ಥಿ ಮತ್ತು ಯುವಜನತೆ ಮಾನವ ಸಂಪನ್ಮೂಲ ಗಳಾಗಿ ಪಾತ್ರ ನಿರ್ವಹಿಸಬೇಕಾಗುತ್ತದೆ ಎಂದರು. ಉಪನ್ಯಾಸಕ ಜಹೀರ್ ಖಾನ್ ಹಾಗೂ ಹರೀಶ್ ಮಾತನಾಡಿದರು. ಎನ್ನೆಸ್ಸೆಸ್ ಅಧಿಕಾರಿ ಎಚ್.ಎಂ. ವಿವೇಕ್, ಉಪನ್ಯಾಸಕ ರಾದ ವಂದನಾ, ಸೌಂದರ್ಯ, ಅನೀಶ್, ಸಚಿನ್ ಉಪಸ್ಥಿತರಿದ್ದರು. ಭಾಷಣ ಸ್ಪರ್ಧೆಯಲ್ಲಿ ತಾಲೂಕಿನ ವಿವಿಧ ಪದವಿ ಕಾಲೇಜುಗಳ ವಿದ್ಯಾರ್ಥಿಗಳು ಭಾಗವಹಿಸಿದ್ದರು.
ಜಿಲ್ಲಾಮಟ್ಟಕ್ಕೆ ಆಯ್ಕೆ: ಸ್ಪರ್ಧೆಯಲ್ಲಿ ಸೋಮವಾರಪೇಟೆ ಸೆಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜಿನ ಕೆ.ಎಂ. ದರ್ಶನ್ ಪ್ರಥಮ, ಶನಿವಾರಸಂತೆ ಪ್ರಥಮ ದರ್ಜೆ ಕಾಲೇಜಿನ ಅಬ್ದುಲ್ ರಜಾಕ್ ದ್ವಿತೀಯ ಹಾಗೂ ಸೋಮವಾರ ಪೇಟೆ ಸೆಂಟ್ ಜೋಸೆಫ್ ಪ್ರಥಮ ದರ್ಜೆ ಕಾಲೇಜಿನ ಪ್ಲೇವಿಯಾ ಅನುಷಾ ಮಾರ್ಟಿನ್ ತೃತೀಯ ಸ್ಥಾನಗಳಿಸಿ ಜಿಲ್ಲಾ ಮಟ್ಟದ ಭಾಷಣ ಸ್ಪರ್ಧೆಗೆ ಆಯ್ಕೆಯಾಗಿದ್ದಾರೆ.