ಸುಂಟಿಕೊಪ್ಪ, ಸೆ. 19: ಸುಂಟಿಕೊಪ್ಪ ಸರಕಾರಿ ಪದವಿಪೂರ್ವ ಕಾಲೇಜಿಗೆ ಇಂಗ್ಲಿಷ್ ಬೋಧನೆಗೆ ಉಪನ್ಯಾಸಕರಿಲ್ಲದೆ ವಿದ್ಯಾರ್ಥಿಗಳ ವ್ಯಾಸಂಗಕ್ಕೆ ತೊಂದರೆಯಾಗಿದೆ. ಈ ಪದವಿಪೂರ್ವ ಕಾಲೇಜಿನ ಇಂಗ್ಲಿಷ್ ಉಪನ್ಯಾಸಕರನ್ನು ಅತಿವೃಷ್ಟಿಯಿಂದ ಮನೆ, ಮಠ, ಆಸ್ತಿ ಕಳೆದುಕೊಂಡು ಕುಶಾಲನಗರ ಪುನರ್ವಸತಿ ಕೇಂದ್ರದ ನೋಡಲ್ ಅಧಿಕಾರಿಯಾಗಿ ಜಿಲ್ಲಾಡಳಿತ ನೇಮಿಸಿರುವದರಿಂದ ಮೊದಲೇ ವಿಪರೀತ ಮಳೆಯಿಂದ ಆಗಾಗ್ಗೆ ಶಾಲಾ-ಕಾಲೇಜಿಗೆ ರಜೆ ನೀಡಿರುವದರಿಂದ ಪಾಠಪ್ರವಚನ ಕುಂಠಿತವಾಗಿತ್ತು. ಈಗ ರಜಾ ದಿನಗಳಲ್ಲೂ ತರಗತಿಗಳನ್ನು ತೆಗೆದುಕೊಂಡು ನಡೆಸಲಾಗುತ್ತಿದೆ. ಅದರಲ್ಲೂ ಇಂಗ್ಲಿಷ್ ಪಠ್ಯವು ವಿದ್ಯಾರ್ಥಿಗಳಿಗೆ ತುಸು ಜಟಿಲವಾಗಿರುವದರಿಂದ ಉಪನ್ಯಾಸಕರ ಕೊರತೆಯಿಂದ ವಿದ್ಯಾರ್ಥಿಗಳ ಭವಿಷ್ಯಕ್ಕೆ ತೊಂದರೆಯಾಗುತ್ತಿತ್ತು.

ಕೂಡಲೇ ಪುನರ್ವಸತಿ ಕೇಂದ್ರದಲ್ಲಿ ಕಾರ್ಯನಿರ್ವಹಿಸುತ್ತಿರುವ ಇಲ್ಲಿನ ಇಂಗ್ಲಿಷ್ ಉಪನ್ಯಾಸಕರನ್ನು ಈ ಕಾಲೇಜಿಗೆ ಪುನರ್ ನೇಮಕ ಮಾಡಬೇಕೆಂದು ಪೋಷಕರುಗಳು ಆಗ್ರಹಿಸಿದ್ದಾರೆ.