ವೀರಾಜಪೇಟೆ, ಸೆ. 19: ವೀರಾಜಪೇಟೆ ಪಟ್ಟಣ ಪಂಚಾಯಿತಿಯ 12 ಮಂದಿ ದಿನಗೂಲಿ ಹಾಗೂ ಹೊರ ಗುತ್ತಿಗೆಯ 21 ಮಂದಿ ನೌಕರರು ಎರಡು ದಿನಗಳಿಂದ ಕೈಗೊಂಡಿದ್ದ ಮುಷ್ಕರವನ್ನು ಪಟ್ಟಣ ಪಂಚಾಯಿತಿ ಸಫಾಯಿ ಕರ್ಮಚಾರಿ ಆಯೋಗದ ಆದೇಶವನ್ನು ಪುರಸ್ಕರಿಸಿ ಈಗಿನ ಎಲ್ಲ ನೌಕರರ ಕೆಲಸವನ್ನು ಮುಂದುವರೆಸಿ ಪೌರ ಕಾರ್ಮಿಕರ ಬೇಡಿಕೆಗಳನ್ನು ಕೂಲಂಕಷವಾಗಿ ಪರಿಶೀಲಿಸಿ ಈಡೇರಿಸುವದಾಗಿ ಆಧಿಕಾರಿಗಳ ಭರವಸೆಯಂತೆ ಮುಷ್ಕರವನ್ನು ತಾತ್ಕಾಲಿಕವಾಗಿ ಕೈಬಿಟ್ಟು ಇಂದಿನಿಂದ ಎಲ್ಲ ಕಾರ್ಮಿಕರು ಕೆಲಸಕ್ಕೆ ಹಾಜರಾಗಿರುವದಾಗಿ ಪೌರ ಕಾರ್ಮಿಕರ ಸಂಘದ ಅಧ್ಯಕ್ಷ ನವೀನ್ ಕುಮಾರ್ ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ನವೀನ್‍ಕುಮಾರ್, ನೌಕರರ ಮುಷ್ಕರಕ್ಕೆ ಪಟ್ಟಣ ಪಂಚಾಯಿತಿಯ ಖಾಯಂ ನೌಕರರು ಸೇರಿದಂತೆ ಇತರ ಎಲ್ಲ ಸಂಘ-ಸಂಸ್ಥೆಗಳು, ರಾಜಕೀಯ ರಹಿತವಾಗಿ ವಿವಿಧ ಪಕ್ಷಗಳು ಬೆಂಬಲ ನೀಡಿರುವದನ್ನು ಸಂಘ ಸ್ಮರಿಸಿದ್ದು ಮುಂದೆಯೂ ಇವರ ಸಹಕಾರವನ್ನು ನಿರೀಕ್ಷಿಸುತ್ತದೆ ಎಂದರು.

ಸಂಘದ ಮುರುಗೇಶ್ ಮಾತನಾಡಿ, ಒಂಬತ್ತು ತಿಂಗಳ ಹಿಂದೆ ಪಂಚಾಯಿತಿ ನೌಕರರ 14 ಮಂದಿ ಅನಕ್ಷರಸ್ತರಿಂದ ಬಿಳಿ ಹಾಳೆ ಮೇಲೆ ಸಹಿ ಪಡೆದಿರುವ ಕುರಿತು ಗೊಂದಲವಿದ್ದು ಈ ಪ್ರಕ್ರಿಯೆ ನಡೆಸಿದ ಸಿಬ್ಬಂದಿ ವಿರುದ್ಧ ಕ್ರಮಕ್ಕೆ ಮೇಲಧಿಕಾರಿಗಳಿಂದ ತನಿಖೆಗೆ ಒತ್ತಾಯಿಸಲಾಗುವದು ಎಂದು ಹೇಳಿದರು.

ಗೋಷ್ಠಿಯಲ್ಲಿ ಸನ್ನು, ಮಣಿ ಹಾಜರಿದ್ದರು.