ಕೂಡಿಗೆ, ಸೆ. 18 : ಕೂಡಿಗೆ ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘದ 2018-19ನೇ ಸಾಲಿನ ವಾರ್ಷಿಕ ಮಹಾಸಭೆಯು ಸಂಘದ ಅಧ್ಯಕ್ಷೆ ಕಮಲ ಚಂದ್ರ ಅವರ ಅಧ್ಯಕ್ಷತೆಯಲ್ಲಿ ನಡೆಯಿತು. ಸಭೆಗೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಹಾಸನ ಹಾಲು ಒಕ್ಕೂಟದ ಕೊಡಗು ಜಿಲ್ಲಾ ನಿರ್ದೇಶಕ ಕೆ.ಟಿ. ಅರುಣ್‍ಕುಮಾರ್ ಅವರು ಮಾತನಾಡಿ, ಜಿಲ್ಲೆಯ ಎಲ್ಲಾ ಹಾಲು ಉತ್ಪಾದಕರ ಸಹಕಾರ ಸಂಘಗಳಿಗೆ ಸ್ವಂತ ಕಟ್ಟಡ ನಿರ್ಮಿಸಲು ಒಕ್ಕೂಟದ ವತಿಯಿಂದ 5 ಲಕ್ಷ ರೂ.ಗಳನ್ನು ನೀಡಲು ತೀರ್ಮಾನಿಸಲಾಗಿದೆ. ಅದರಂತೆ ಜಿಲ್ಲೆಯ ಕೆಲವು ಹಾಲು ಉತ್ಪಾದಕರ ಮಹಿಳಾ ಸಹಕಾರ ಸಂಘಗಳು ಸೇರಿದಂತೆ ಹಲವು ಸಹಕಾರ ಸಂಘಗಳು ಈ ಪ್ರಯೋಜ ನವನ್ನು ಪಡೆದು ಕೊಂಡಿದ್ದಾರೆ. ಕೂಡಿಗೆಯ ಹಾಲು ಉತ್ಪಾದಕ ಮಹಿಳಾ ಸಹಕಾರ ಸಂಘವು ಖಾಸಗಿ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಸ್ವಂತ ಕಟ್ಟಡ
(ಮೊದಲ ಪುಟದಿಂದ) ನಿರ್ಮಾಣಕ್ಕೆ ಸ್ಥಳವನ್ನು ಗುರುತಿಸಿಕೊಂಡಲ್ಲಿ ಕಟ್ಟಡ ನಿರ್ಮಾಣಕ್ಕೆ ಮತ್ತು ಸಂಘದ ಅಭಿವೃದ್ಧಿಗೆ ಒಕ್ಕೂಟದ ವತಿಯಿಂದ ಹೆಚ್ಚಿನ ಅನುದಾನವನ್ನು ನೀಡಲಾಗುವದು ಎಂದು ತಿಳಿಸಿದರು.
ಹಾಸನ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಹೆಚ್.ಎ.ಪ್ರಕಾಶ್ ಅವರು ಮಾತನಾಡಿ, ಮಹಿಳೆಯರು ಹೈನುಗಾರಿಕೆಗೆ ಹೆಚ್ಚು ಒತ್ತು ನೀಡಬೇಕು. ಹೈನುಗಾರಿಕೆಯಲ್ಲಿ ತೊಡಗುವವರಿಗೆ ಒಕ್ಕೂಟದ ವತಿಯಿಂದ ಪ್ರೋತ್ಸಾಹ ನೀಡಲಾಗುವದು ಎಂದರು.
2017-18ನೇ ಸಾಲಿನ ಲೆಕ್ಕ ಪರಿಶೋಧನಾ ವರದಿಯನ್ನು ಮಂಡಿಸಲಾಯಿತು ಹಾಗೂ 2018-19ನೇ ಸಾಲಿನ ಅಂದಾಜು ಮುಂಗಡ ಪತ್ರವನ್ನು ಮಂಜೂರು ಮಾಡಲಾಯಿತು. 2018-19ನೇ ಸಾಲಿನ ಲೆಕ್ಕ ಪರಿಶೋಧಕರನ್ನು ಆಯ್ಕೆ ಮಾಡುವ ಬಗ್ಗೆ ಚರ್ಚೆ ನಡೆಸಲಾಯಿತು. ನಂತರ ಸಂಘದ ಸದಸ್ಯರ ಹೆಚ್ಚು ಅಂಕ ಪಡೆದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿದರು. ಇದೇ ಸಂದರ್ಭ ಸಂಘದ ವತಿಯಿಂದ ಹಾಸನ ಹಾಲು ಒಕ್ಕೂಟದ ಸಹಾಯಕ ವ್ಯವಸ್ಥಾಪಕರಾದ ಹೆಚ್.ಎ. ಪ್ರಕಾಶ್ ಅವರನ್ನು ಸನ್ಮಾನಿಸಲಾಯಿತು. ಕಾರ್ಯದರ್ಶಿ ಲಕ್ಷ್ಮಿ ಸಭೆಗೆ ವರದಿ ವಾಚಿಸಿದರು. ನಂತರ ಸಭೆಯಲ್ಲಿ ಮೃತಪಟ್ಟ ಸಂಘದ ಸದಸ್ಯರಿಗೆ ಸಂತಾಪ ಸೂಚಿಸಲಾಯಿತು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷೆ ಭಾರತಿ ಕೆ.ಕೆ, ನಿರ್ದೇಶಕರಾದ ಚಂದ್ರಕಾಂತಿ ಮುನಿಸ್ವಾಮಿ, ಸುವರ್ಣ ಮಾದಪ್ಪ, ವೀಣಾ ಕೃಷ್ಣೇಗೌಡ, ರಾಜಮ್ಮ ಶಾಂತರಾಜು, ಮಂಜುಳಾ ನಂಜುಂಡಸ್ವಾಮಿ, ಜಯಮ್ಮ ಶ್ರೀನಿವಾಸಶೆಟ್ಟಿ, ಪ್ರಮೀಳಾ ಮಂಜುನಾಥ್, ರತ್ನಮ್ಮ ನಾಗರಾಜಚಾರಿ, ತುಳಸಮ್ಮ, ಸಹಾಯಕರಾದ ಗೌರಮ್ಮ ಹಾಗೂ ಸದಸ್ಯರು ಇದ್ದರು.