ಮಡಿಕೇರಿ, ಸೆ. 18: ಪ್ರಾಕೃತಿಕ ವಿಕೋಪದ ನಡುವೆ ಎದುರಾಗಿರುವ ದುರಂತಗಳಿಂದ ಅನೇಕರು ತಮ್ಮ ನೆಲೆಗಳನ್ನು ಕಳೆದುಕೊಂಡು ತುತ್ತು ಅನ್ನ, ಬೊಗಸೆ ನೀರಿಗಾಗಿ ಪಡಬಾರದ ಪಾಡು ಪಡುತ್ತಿದ್ದರೆ, ಇಂತಹ ಕಷ್ಟಕಾಲದಲ್ಲೂ ಮಾನವೀಯತೆ ಮರೆತು ಹಲವೆಡೆ ಕಳ್ಳರು ತಮ್ಮ ಕೈಚಳಕ ಮೆರೆದಿದ್ದಾರೆ. ಇಂತಹ ಕೃತಿಮಗಳಿಗೆ ಸಾಕ್ಷಿಯೆಂಬಂತೆ ಕೆಲವು ಪ್ರಸಂಗಗಳು ಬೆಳಕಿಗೆ ಬಂದಿವೆ.ಹಾಲೇರಿ ಸುತ್ತಮುತ್ತಲಿನ ನಿವಾಸಿಗಳಿಗೆ ಕಷ್ಟ ಎದುರಾದಾಗ ಕಾಂಡನಕೊಲ್ಲಿಯ ದವಸ ಭಂಡಾರದಲ್ಲಿ ತಕ್ಷಣ ವ್ಯವಸ್ಥೆ ಕಲ್ಪಿಸಿ, ಆಹಾರ ಧಾನ್ಯಗಳನ್ನು ತಂದು ಅಡುಗೆಯೊಂದಿಗೆ ಊಟ, ಉಪಹಾರ ನೀಡಲಾಗಿದೆ. ಬಳಿಕ ಈ ಸಂತ್ರಸ್ತರನ್ನು ಅಪಾಯದ ಮುನ್ಸೂಚನೆಯಿಂದ ಸುಂಟಿಕೊಪ್ಪಕ್ಕೆ ಸ್ಥಳಾಂತರಿಸಲಾಗಿದೆ. ಈ ವೇಳೆ ದವಸ ಭಂಡಾರದಲ್ಲಿ ಇರಿಸಿದ್ದ ಅಕ್ಕಿ ಮೂಟೆಗಳನ್ನು ಯಾರೋ ಹೊತ್ತೊಯ್ದು ಬಿಟ್ಟರಂತೆ.

ಇನ್ನು ಹಾಲೇರಿ ಬಳಿಯ ಕೊಪ್ಪತ್ತೂರು ನಿವಾಸಿ ಎನ್. ಸುಬ್ರಮಣ್ಯ ಎಂಬವರು ಸುಂಟಿಕೊಪ್ಪದಲ್ಲಿರುವ ತಮ್ಮ ಬಂಗಲೆಯ ಶೌಚಾಲಯಗಳನ್ನು ಸಂತ್ರಸ್ತರ ಬಳಕೆಗೆ ಮಾನವೀಯ ನೆಲೆಯಲ್ಲಿ ಕಲ್ಪಿಸಿಕೊಟ್ಟಿದ್ದರಂತೆ. ಅಲ್ಲಿ ಅಸ್ಸಾಂ ಮೂಲದ ಕಾರ್ಮಿಕರೆಂದು ಹೇಳಲಾದ ಮಂದಿ ಈ ಕಟ್ಟಡ ಮಾಲೀಕರನ್ನು ‘ನೀನು ಇಲ್ಲಿಯ ಕಾವಲುಗಾರನೆ? ಎಂದು ದಿಮಾಕಿನಿಂದ ಪ್ರಶ್ನಿಸಿದರಂತೆ, ಅಲ್ಲದೆ ಶೌಚಾಲಯಗಳಿಗೆ ಸರಿಯಾಗಿ ನೀರು ಹಾಕಿ ಶುಚಿಯಾಗಿ ಇಟ್ಟುಕೊಳ್ಳಲು ತಿಳಿಸಿದ ಮಾತ್ರಕ್ಕೆ, ‘ನಿನ್ನ ಮಾಲೀಕನಿಗೆ, ತಹಶೀಲ್ದಾರ್‍ಗೆ ದೂರು ನೀಡುತ್ತೇವೆ... ಹುಸಾರಾಗಿರು... ಎಂದು ಮರು ಎಚ್ಚರಿಕೆ ನೀಡಿದರಂತೆ, ಧರ್ಮಕ್ಕೆ ಶೌಚಾಲಯಗಳನ್ನು ಬಳಸಿಕೊಳ್ಳಲು ಮಾನವೀಯತೆ ಮೆರೆದ ಮಾಲೀಕ ಇಲ್ಲಿ ಪೇಚಿಗೆ ಸಿಲುಕಿದರಂತೆ!

ಇದೇ ಸುಬ್ರಮಣ್ಯ ಪ್ರಾಕೃತಿಕ ವಿಕೋಪದ ಕಾರಣ ಕೊಪ್ಪತ್ತೂರು ಗ್ರಾಮದ ತೋಟದ ಮನೆ ತೊರೆದು ಹದಿನೈದು ದಿವಸ ಸುಂಟಿಕೊಪ್ಪದಲ್ಲಿ ಮಗನ ಮನೆಯಲ್ಲಿ ನೆಲೆಸಿದ್ದು, ಹಿಂತಿರುಗಿ ಬರುವಷ್ಟರಲ್ಲಿ ತೋಟದಲ್ಲಿದ್ದ ಬೀಟಿ ಮರ ಕಳ್ಳರ ಪಾಲಾಗಿದೆಯಂತೆ. ಅತ್ತ ಮಾದಾಪುರ ಮಾರ್ಗ ಹಾಗೂ ಕೆದಕಲ್ ಮಾರ್ಗದ ಉಭಯ ಕಡೆಯಲ್ಲಿ ರಸ್ತೆ ಸಂಪರ್ಕ ಕಡಿತಗೊಂಡಿದ್ದರಿಂದ ಕಳ್ಳರಿಗೆ ಕದ್ದ ಮರ ಸಾಗಿಸಲಾರದೆ ಒಂದೆಡೆ ಬಚ್ಚಿಟ್ಟಿದ್ದು ಪತ್ತೆಯಾಗಿದೆ.

(ಮೊದಲ ಪುಟದಿಂದ) ಅದು ಗ್ರಾಮ ದೇವತೆ ಭದ್ರಕಾಳಿಯ ದಯೆ ಎಂದು ಸುಬ್ರಮಣ್ಯ ನಿಟ್ಟುಸಿರು ಬಿಟ್ಟಿದ್ದಾರೆ. ಅಂತೆಯೇ ಕಾಂಡನಕೊಲ್ಲಿಯ ಲಕ್ಷ್ಮೀ ಎಂಬಾಕೆ ಎಲ್ಲರಂತೆ ಗಂಜಿ ಕೇಂದ್ರಕ್ಕೆ ತೆರಳಿದ್ದು, ಹಿಂತಿರುಗಿ ಬರುವಷ್ಟರಲ್ಲಿ ಆಕೆಯ ಮನೆ ಬಾಗಿಲು ಮುರಿದಿರುವ ಕಳ್ಳರು ಕೈಗೆ ಸಿಕ್ಕ ವಸ್ತುಗಳೊಂದಿಗೆ ಪರಾರಿಯಾಗಿದ್ದಾರಂತೆ. ಇಂತಹ ಅನೇಕ ಪ್ರಕರಣಗಳು 2ನೇ ಮೊಣ್ಣಂಗೇರಿ, ಉದಯಗಿರಿ, ಮಕ್ಕಂದೂರು, ಜೋಡುಪಾಲ, ಇಂದಿರಾನಗರ, ಚಾಮುಂಡೇಶ್ವರಿ ನಗರ ಮುಂತಾದೆಡೆಗಳಲ್ಲಿ ಗೋಚರಿಸಿದೆ.

ಹೂತಿಟ್ಟ ಮೋಟಾರ್ ಕದ್ದರು...!

ಮನೆಗಳು ನೆಲಸಮಗೊಂಡು ಕುಟುಂಬಸ್ಥರೆಲ್ಲ ಪರಿಹಾರ ಕೇಂದ್ರದಲ್ಲಿ ಕಣ್ಣೀರಲ್ಲಿ ಕೈ ತೊಳೆಯುತ್ತಿದ್ದರೆ ಇತ್ತ ಕಲ್ಲು ಹೃದಯದ ಕಳ್ಳರು ನೆಲಸಮವಾದ ಜಾಗದಲ್ಲೂ ಹುಡುಕಾಡಿ ಕಳ್ಳತನ ಮಾಡುತ್ತಿದ್ದಾರೆ. ಹೆಮ್ಮೆತ್ತಾಳು ಗ್ರಾಮದ ಒಂದೇ ಕಡೆಯಲ್ಲಿ ನೆಲೆಸಿದ್ದ ಕೂಲಿ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಪರಿಶಿಷ್ಟ ಜನಾಂಗದ 8 ಮನೆಗಳು ನೆಲಸಮವಾಗಿವೆ. ಈ ಕುಟುಂಬಗಳಿಗೆ ಕುಡಿಯುವ ನೀರನ್ನೊದಗಿಸುವ ಸಲುವಾಗಿ ನಿರ್ಮಿಸಲಾಗಿದ್ದ ನೀರಿನ ಟ್ಯಾಂಕ್ ಕೂಡ ಕೊಚ್ಚಿ ಹೋಗಿದೆ.

ಆದರೆ, ನೀರಿನ ಮೂಲವಾಗಿದ್ದ ಕೆರೆ ಮಣ್ಣು ತುಂಬಿ ಮುಚ್ಚಿ ಹೋಗಿದ್ದು, ನೀರಿನ ಮೋಟಾರ್ ಮಣ್ಣಿನಡಿ ಸಿಲುಕಿತ್ತು. ಅದನ್ನೂ ಪತ್ತೆ ಮಾಡಿ ಮಣ್ಣು ತೆಗೆದು ಅಲ್ಲಿದ್ದ ನೀರಿನ ಮೋಟಾರ್ ಅನ್ನು ಕೂಡ ಕಳವು ಮಾಡಿದ್ದಾರೆ. ಇಂತಹ ಸನ್ನಿವೇಶದಲ್ಲೂ ಕಳ್ಳತನ ಮಾಡುತ್ತಿರುವ ಕಳ್ಳರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸುವಂತಾಗಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ಹಾನಿಗೀಡಾದ ಪ್ರದೇಶಗಳಿಗೆ ವೀಕ್ಷಣೆಗೆಂದು ಅಪರಿಚಿತರು ಬರುತ್ತಿದ್ದು, ಇದಕ್ಕೆ ಕಡಿವಾಣ ಹಾಕಬೇಕಿದೆ. ಗ್ರಾ.ಪಂ., ಜಿಲ್ಲಾಡಳಿತ, ಪೊಲೀಸ್ ಇಲಾಖೆ ಸೂಕ್ತ ವ್ಯವಸ್ಥೆ ಕಲ್ಪಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.