ಕುಶಾಲನಗರ, ಸೆ. 18: ಕುಶಾಲನಗರ ಮುಳ್ಳುಸೋಗೆ ಗ್ರಾಮದಲ್ಲಿ ಮೈಕ್ರೋ ಫೈನಾನ್ಸ್ ಸಂಘವೊಂದರ ಅಧಿಕಾರಿಗಳಿಂದ ಸಾಲದ ಬಾಧೆ ಹಿನ್ನೆಲೆಯಲ್ಲಿ ಗೃಹಿಣಿಯೊಬ್ಬರು ನೇಣಿಗೆ ಶರಣಾದ ಘಟನೆ ನಡೆದಿದೆ. ಗ್ರಾಮದ ನಿವಾಸಿ ಸಂತೋಷ್ ಎಂಬವರ ಪತ್ನಿ ಮಂಜುಳಾ ಸಾಲ ವಸೂಲಾತಿ ಕಿರುಕುಳಕ್ಕೆ ಹೆದರಿ ಆತ್ಮಹತ್ಯೆ ಮಾಡಿಕೊಂಡಿರುವದಾಗಿ ಮೃತಳ ಪತಿ ಕುಶಾಲನಗರ ನಗರ ಪೊಲೀಸ್ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಕುಶಾಲನಗರದ ಮೈಕ್ರೋ ಫೈನಾನ್ಸ್ ಒಂದರಿಂದ ರೂ. 25 ಸಾವಿರ ಹಣ ಸಾಲ ಪಡೆದಿದ್ದು ಕೆಲವು ಏಜೆಂಟರು ಮಂಜುಳಾ ಅವರ ಮನೆಗೆ ಬಂದು ಸಾಲದ ಮರುಪಾವತಿಗೆ ಒತ್ತಾಯಿಸಿದ್ದು ಈ ಸಂದರ್ಭ ಅವಾಚ್ಯ ಶಬ್ಬಗಳಿಂದ ನಿಂದಿಸಿರುವದಾಗಿ ದೂರಿನಲ್ಲಿ ಮೃತಳ ಪತಿ ಸಂತೋಷ್ ತಿಳಿಸಿದ್ದಾರೆ. ಮತ್ತೊಂದು ಪ್ರಕರಣದಲ್ಲಿ ಖಾಸಗಿ ಹಣಕಾಸು ಸಂಸ್ಥೆಯಿಂದ ಸಲ ಪಡೆದಿದ್ದ ಮರಗೋಡಿನ ಆಶಾ ಎಂಬ 35 ವರ್ಷ ಪ್ರಾಯದ ಮಹಿಳೆ ವಿಷ ಸೇವಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಗಂಡ ಅನಾರೋಗ್ಯದಿಂದ ಮಲಗಿದ್ದು, ಇಬ್ಬರು ಮಕ್ಕಳ ವಿದ್ಯಾಭ್ಯಾಸದ ಜಬಾಬ್ದಾರಿ ಹೊತ್ತಿದ್ದ ಕೂಲಿ ಕಾರ್ಮಿಕಳಾದ ಆಶಾ ಹಣಕಾಸು ಸಂಸ್ಥೆಯ ಒತ್ತಡಕ್ಕೆ ಸಿಲುಕಿದ್ದಳೆನ್ನಲಾಗಿದೆ.