ಇಂದು ಭಾರತ-ಪಾಕ್ ಕ್ರಿಕೆಟ್ ಪಂದ್ಯ

ಕರಾಚಿ, ಸೆ. 18: ಪಾಕಿಸ್ತಾನ ಪ್ರಧಾನಿ ಇಮ್ರಾನ್ ಖಾನ್ ಅವರು ಬುಧವಾರ ಭಾರತ ಹಾಗೂ ಪಾಕಿಸ್ತಾನ ನಡುವೆ ನಡೆಯುವ ಏಷ್ಯಾ ಕಪ್ ಕ್ರಿಕೆಟ್ ಪಂದ್ಯವನ್ನು ವೀಕ್ಷಿಸಲಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿವೆ. ಪಾಕ್ ಪ್ರಧಾನಿ ಇಮ್ರಾನ್ ಖಾನ್ ಅವರು ಬುಧವಾರ ದುಬೈನಲ್ಲಿ ಭಾರತ-ಪಾಕಿಸ್ತಾನ ಪಂದ್ಯ ವೀಕ್ಷಿಸಲಿದ್ದಾರೆ ಎಂದು ರಾಜತಾಂತ್ರಿಕ ಮೂಲಗಳು ತಿಳಿಸಿರುವದಾಗಿ ಜಿಯೋ ಟಿವಿ ವರದಿ ಮಾಡಿದೆ. ಇಮ್ರಾನ್ ಖಾನ್ ನೇತೃತ್ವದ ಪಾಕಿಸ್ತಾನ ತಂಡ 1992ರಲ್ಲಿ ಏಷ್ಯಾ ಕಪ್ ಅನ್ನು ಗೆದ್ದುಕೊಂಡಿತ್ತು. ಇಮ್ರಾನ್ ಖಾನ್ ಅವರು ಪ್ರಧಾನಿಯಾದ ಮೇಲೆ ಇದೇ ಮೊದಲ ಬಾರಿಗೆ ವಿದೇಶ ಪ್ರವಾಸ ಕೈಗೊಂಡಿದ್ದು, ತಾ. 18 ರಿಂದ ಎರಡು ದಿನಗಳ ಸೌದಿ ಪ್ರವಾಸ ಆರಂಭಿಸಿದ್ದಾರೆ. ಈ ವೇಳೆ ಇಮ್ರಾನ್ ಖಾನ್ ಸೌದಿ ದೊರೆ ಸಲ್ಮಾನ್ ಬಿನ್ ಅಬುಲಾಜಿಜ್ ಮತ್ತು ದೊರೆ ಮೊಹಮದ್ ಬಿನ್ ಸಲ್ಮಾನ್ ಅವರನ್ನು ಭೇಟಿ ಮಾಡಿ ದ್ವಿಪಕ್ಷೀಯ ಮಾತುಕತೆ ನಡೆಸಲಿದ್ದಾರೆ.

ಬ್ಯಾಂಡ್ಮಿಟನ್:ಪಿ.ವಿ. ಸಿಂಧುಗೆ ಆರಂಭಿಕ ಜಯ

ಬೀಜಿಂಗ್, ಸೆ. 18: ಚೀನಾ ಓಪನ್ ಬ್ಯಾಂಡ್ಮಿಟನ್ ಟೂರ್ನಿಯಲ್ಲಿ ದಕ್ಷಿಣ ಕೊರಿಯಾದ ಆಟಗಾರ್ತಿ ಸುಂಗ್ ಜಿ ಹ್ಯುನ್ ವಿರುದ್ಧ ಮೊದಲ ಸುತ್ತಿನ ಪಂದ್ಯದಲ್ಲಿ ಸೋತ ಏಷ್ಯನ್ ಗೇಮ್ಸ್ ಕಂಚು ವಿಜೇತ ಸೈನಾ ನೆಹ್ವಾಲ್ ಟೂರ್ನಿಯಿಂದ ಹೊರಬಿದಿದ್ದಾರೆ. ಈ ಮಧ್ಯೆ ದೇಶದ ಮತ್ತೋರ್ವ ಆಟಗಾರ್ತಿ ಪಿ.ವಿ. ಸಿಂಧು ಆರಂಭಿಕ ಪಂದ್ಯದಲ್ಲಿ ಜಯಗಳಿಸಿದ್ದು, ಪ್ರಿ- ಕ್ವಾರ್ಟರ್ಸ್ ಪಂದ್ಯಕ್ಕೆ ಪ್ರವೇಶ ಪಡೆದಿದ್ದಾರೆ. 2014ರಲ್ಲಿ ಮೊದಲ ಬಾರಿಗೆ ಚೀನಾ ಓಪನ್ ಪ್ರಶಸ್ತಿ ಹಾಗೂ ಎರಡು ಬಾರಿ ಕಾಮನ್ ವೆಲ್ತ್ ಗೇಮ್ಸ್ ಚಿನ್ನದ ಪದಕ ವಿಜೇತೆ ಸೈನಾ ನೆಹ್ವಾಲ್, ದಕ್ಷಿಣ ಕೊರಿಯಾದ ಸುಂಗ್ ಜಿ ಹ್ಯುನ್ ವಿರುದ್ಧ ನಡೆದ 48 ನಿಮಿಷಗಳ ಆರಂಭಿಕ ಪಂದ್ಯದಲ್ಲಿ 22-20, 8-21, 14-21 ಅಂತರದಿಂದ ಸೋಲಿಗೆ ಶರಣಾದರು. ಏಷ್ಯನ್ ಗೇಮ್ಸ್ ನಂತರ ಈ ತಿಂಗಳ ಆರಂಭದಲ್ಲಿ ನಡೆದ ಜಪಾನ್ ಓಪನ್ ಟೂರ್ನಿಯಿಂದಲೂ ಹೊರಬಿದಿದ್ದರು. ಮತ್ತೊಂದೆಡೆ ಒಲಿಂಪಿಕ್ ಮತ್ತು ಏಷ್ಯನ್ ಗೇಮ್ಸ್‍ನ ಬೆಳ್ಳಿ ಪದಕ ವಿಜೇತೆ ಪಿ.ವಿ. ಸಿಂಧು ವಿಶ್ವದ ನಂ-39 ಕ್ರಮಾಂಕದ ಜಪಾನಿನ ಸೈನಾ ಕವಾಕಮಿ ಅವರನ್ನು 21-15, 21-13 ಅಂತರದಿಂದ ಸೋಲಿಸಿ ಆರಂಭಿಕ ಪಂದ್ಯದಲ್ಲಿಯೇ ಜಯಗಳಿಸಿದ್ದು, ಪ್ರಿ- ಕ್ವಾರ್ಟರ್ಸ್ ಪಂದ್ಯಕ್ಕೆ ಲಗ್ಗೆ ಇಟ್ಟಿದ್ದಾರೆ.

ಪ್ರವಾಹದ ಅಬ್ಬರಕ್ಕೆ 100 ಸಾವು

ಲೊಕೊಜಾ, ಸೆ. 18: ನೈಜಿರಿಯಾದ 10 ರಾಜ್ಯಗಳಲ್ಲಿ ಉಂಟಾಗಿರುವ ಪ್ರವಾಹದ ಅಬ್ಬರಕ್ಕೆ ಸಿಲುಕಿ 100 ಮಂದಿ ಸಾವನ್ನಪ್ಪಿದ್ದು, ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ ಎಂದು ದೇಶದ ಪ್ರಮುಖ ಪರಿಹಾರ ಸಂಸ್ಥೆ ತಿಳಿಸಿದೆ. ಭಾರಿ ಮಳೆಯಿಂದಾಗಿ ನೈಜಿರ್ ಮತ್ತು ಬೆನ್ಯೂ ನದಿಯ ದಂಡೆಗಳು ಕೊಚ್ಚಿಹೋಗಿದ್ದು, ಸಹಸ್ರಾರು ಜನರು ಆಸ್ತಿ ಪಾಸ್ತಿ ಕಳೆದುಕೊಂಡು ನಿರಾಶ್ರಿತರಾಗಿದ್ದಾರೆ. ಕೊಗಿ, ಡೆಲ್ಟಾ, ಅನಾಂಬ್ರಾ ಮತ್ತು ನೈಜಿರ್ ಸೇರಿದಂತೆ ನಾಲ್ಕು ರಾಜ್ಯಗಳಲ್ಲಿ ರಾಷ್ಟ್ರೀಯ ವಿಪತ್ತು ಎಂದು ಘೋಷಿಸಲಾಗಿದೆ ಎಂದು ರಾಷ್ಟ್ರೀಯ ತುರ್ತು ನಿರ್ವಹಣಾ ಏಜಿನ್ಸಿ ಅಧಿಕಾರಿ ಸಾನಿ ದಾಟ್ಟಿ ಹೇಳಿದ್ದಾರೆ. ಇನ್ನಿತರ ಎಂಟು ರಾಜ್ಯಗಳಲ್ಲಿ ಪರಿಸ್ಥಿತಿ ಗಮನ ಹರಿಸಲಾಗುತ್ತಿದೆ. ಈ ಎಲ್ಲಾ ರಾಜ್ಯಗಳು ಪ್ರವಾಹದಿಂದ ಬಾಧಿತವಾಗಿದೆ ಎಂದು ಹೇಳಿದ್ದಾರೆ. ಕೊಗಿ ಲೊಕೊಜಾದ ರಾಜಧಾನಿಯಾಗಿದ್ದು, ಎರಡೂ ನದಿಗಳ ಸಂಗಮದಲ್ಲಿದೆ. ಪ್ರವಾಹದಿಂದಾಗಿ ನೀರಿನ ಮಟ್ಟ ಹೆಚ್ಚಾಗಿದ್ದು, ಸಾಕಷ್ಟು ಹಾನಿಯಾಗಿದೆ. 2012ರಲ್ಲಿ ಉಂಟಾಗಿದ್ದ ಪ್ರವಾಹದಂತೆ ಈ ಬಾರಿ ಭೀಕರ ಪ್ರವಾಹ ಉಂಟಾಗಿದ್ದು, ನೈಜಿರಿಯಾದ 36 ರಾಜ್ಯಗಳ ಪೈಕಿ 30 ರಾಜ್ಯಗಳಲ್ಲಿ ಸುಮಾರು ಎರಡು ಮಿಲಿಯನ್ ನಷ್ಟು ಜನರು ಮನೆ, ಮಠ ಕಳೆದುಕೊಂಡು ಸಂತ್ರಸ್ತರಾಗಿದ್ದಾರೆ.

ಸಚಿವ ಡಿ.ಕೆ.ಶಿ ವಿರುದ್ಧ ಪ್ರಕರಣ ದಾಖಲು

ನವದೆಹಲಿ, ಸೆ. 18: ಅಕ್ರಮ ಹಣವನ್ನು ವರ್ಗಾವಣೆ ಮಾಡಿದ ಆರೋಪದ ಹಿನ್ನೆಲೆ ಜಲ ಸಂಪನ್ಮೂಲ ಸಚಿವ ಡಿ.ಕೆ. ಶಿವಕುಮಾರ್ ವಿರುದ್ಧ ಜಾರಿ ನಿರ್ದೇಶನಾಲಯ (ಇಡಿ) ಪ್ರಕರಣ ದಾಖಲಿಸಿಕೊಂಡಿದೆ. ಅಕ್ರಮ ಹಣ ವರ್ಗಾವಣೆ ತಡೆ ಕಾಯ್ದೆ (ಪಿಎಂಎಲ್‍ಎ) ಅಡಿಯಲ್ಲಿ ಇಡಿ ಕೇಸ್ ದಾಖಲಿಸಿಕೊಂಡಿದ್ದರಿಂದ ಡಿಕೆಶಿಗೆ ಬಂಧನದ ಭೀತಿ ಎದುರಾಗಿದ್ದು, ಹಿರಿಯ ವಕೀಲರ ಜೊತೆ ಕಾನೂನು ಪ್ರಕ್ರಿಯೆಯ ಬಗ್ಗೆ ಚರ್ಚೆ ನಡೆಸುತ್ತಿದ್ದಾರೆ. ಶಿವಕುಮಾರ್ ಜೊತೆಗೆ ಸಚಿನ್ ನಾರಾಯಣ್, ಶರ್ಮ ಟ್ರಾವೆಲ್ಸ್‍ನ ಸುನೀಲ್ ಕುಮಾರ್ ಶರ್ಮ, ದೆಹಲಿಯ ಕರ್ನಾಟಕ ಭವನದ ಸಿಬ್ಬಂದಿ ಆಂಜನೇಯ ಹನುಮಂತಯ್ಯ ಮತ್ತು ರಾಜ್ಯ ಸರಕಾರದ ನಿವೃತ್ತ ಸಿಬ್ಬಂದಿ ರಾಜೇಂದ್ರ ಅವರನ್ನು ಆರೋಪಿಯನ್ನಾಗಿಸಿ ಕೇಸ್ ದಾಖಲಾಗಿದೆ.

ಬುಲೆಟ್ ಟ್ರೈನ್ ವಿರುದ್ಧ ಕೋರ್ಟ್ ಮೊರೆ

ಅಹಮದಾಬಾದ್, ಸೆ. 18: ಕೇಂದ್ರ ಸರ್ಕಾರದ ಉದ್ದೇಶಿತ ಮುಂಬೈ-ಅಹಮದಾಬಾದ್ ನಡುವಿನ ಬುಲೆಟ್ ಟ್ರೈನ್ ಯೋಜನೆಗೆ ವಿರೋಧಿಸಿ ಸಾವಿರಕ್ಕೂ ಹೆಚ್ಚು ರೈತರು ಇಂದು ಗುಜರಾತ್ ಹೈಕೋರ್ಟ್‍ನಲ್ಲಿ ಅಪಿಢವಿಟ್ ಸಲ್ಲಿಸಿದ್ದಾರೆ. ವೇಗದ ರೈಲು ಯೋಜನೆಗಾಗಿ ಭೂ ಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಕೆಯಾಗಿದ್ದ ಐದು ಅರ್ಜಿಗಳನ್ನು ಮುಖ್ಯ ನ್ಯಾಯಾಧೀಶ ಆರ್. ಸುಭಾಶ್ ರೆಡ್ಡಿ ಹಾಗೂ ನ್ಯಾಯಾಧೀಶ ವಿ.ಎಂ. ಪಂಚೊಲಿ ಅವರಿದ್ದ ಪೀಠ ಇಂದು ವಿಚಾರಣೆ ನಡೆಸಿತು. ಇದಲ್ಲದೆ, ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ರೂ. 1.10 ಲಕ್ಷ ಕೋಟಿ ವೆಚ್ಚದ ಯೋಜನೆಯಿಂದ ಬೆಳೆಗಾರರು ತೊಂದರೆಗೊಳಗಾಬೇಕಾಗುತ್ತದೆ. ಆದ್ದರಿಂದ ಈ ಯೋಜನೆ ಕೈಗೆತ್ತಿಕೊಳ್ಳ ಬಾರದೆಂದು 1 ಸಾವಿರ ರೈತರು ಪ್ರತ್ಯೇಕವಾಗಿ ಅಪಿಢವಿಟ್ ಸಲ್ಲಿಸಿದ್ದಾರೆ. ಬುಲೆಟ್ ಟ್ರೈನ್ ಮಾರ್ಗ ಸಾಗುವ ಗುಜರಾತಿನ ಕೆಲವು ಜಿಲ್ಲೆಗಳ ರೈತರ ಮೇಲೆ ಈ ಯೋಜನೆಯಿಂದ ಪರಿಣಾಮ ಬೀರಲಿದ್ದು, ಯೋಜನೆಗಾಗಿ ತಮ್ಮ ಭೂಮಿಯನ್ನು ಸ್ವಾಧೀನಪಡಿಸಿ ಕೊಳ್ಳಬಾರೆದೆಂದು ಅಫಿಡವಿಟ್‍ನಲ್ಲಿ ಹೇಳಿದ್ದಾರೆ.

ಬಿಜೆಪಿ ವಿರುದ್ಧ ಮಾಜಿ ಸಿಎಂ ಸಿದ್ದು ವಾಗ್ಧಾಳಿ

ಬೆಂಗಳೂರು, ಸೆ. 18: ಬಿಜೆಪಿಯವರು ಲಜ್ಜೆಗೆಟ್ಟು ತಮ್ಮ ಮಾನ ಮರ್ಯಾದೆ ಬಿಟ್ಟು ಸರ್ಕಾರ ರಚನೆ ಮಾಡಬೇಕು ಅಂತ ಪ್ರಯತ್ನ ಪಡುತ್ತಿದ್ದಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಕಿಡಿಕಾರಿದ್ದಾರೆ. ವಿದೇಶ ಪ್ರವಾಸ ಮುಗಿಸಿ ಇದೇ ಮೊದಲ ಬಾರಿಗೆ ವಿಧಾನಸೌಧಕ್ಕೆ ಆಗಮಿಸಿದ ಸಿದ್ದರಾಮಯ್ಯನವರಿಗೆ ಸಚಿವ ದೇಶಪಾಂಡೆ ಶಾಸಕರಾದ ಐವಾನ್ ಡಿಸೋಜಾ ಹಾಗೂ ಎಂ.ಬಿ. ಪಾಟೀಲ್ ಸಾಥ್ ನೀಡಿದ್ದರು. ಈ ವೇಳೆ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಹಾಗೂ ಜೆಡಿಎಸ್ ನೇತೃತ್ವದ ಸಮ್ಮಿಶ್ರ ಸರ್ಕಾರವನ್ನು ಅಸ್ಥಿರ ಮಾಡುವದಕ್ಕೆ ಬಿಜೆಪಿಯವರು ಶತಾಯಗತಾಯ ಪ್ರಯತ್ನ ಮಾಡುತ್ತಿರುವದು ಸತ್ಯ. ಈಗಾಗಲೇ ಅನೇಕ ಶಾಸಕರು ಈ ಬಗ್ಗೆ ನನಗೆ ಮಾಹಿತಿ ನೀಡಿದ್ದಾರೆ. ಬಿಜೆಪಿಯವರು ಲಜ್ಜೆಗೆಟ್ಟು ತಮ್ಮ ಮಾನ ಮರ್ಯಾದೆ ಬಿಟ್ಟು ಸರ್ಕಾರ ರಚನೆ ಮಾಡಲೇಬೇಕೆಂದು ಪ್ರಯತ್ನ ಮಾಡುತ್ತಿದ್ದಾರೆ. ನಮ್ಮ ಪಕ್ಷದಲ್ಲಿ ಯಾವದೇ ಭಿನ್ನಾಭಿಪ್ರಾಯ ಇಲ್ಲ. ಯಾರೂ ಸಹ ಪಕ್ಷವನ್ನು ಬಿಟ್ಟು ಹೋಗಲ್ಲ ಎಂದರು. ಕೇವಲ ಸಚಿವ ಸ್ಥಾನ ಹಾಗೂ ನಿಗಮ ಮಂಡಳಿಗಳ ಆಕಾಂಕ್ಷಿಗಳು ಇದ್ದಾರೆ ಅಷ್ಟೇ. ಆಗೆಂದ ಮಾತ್ರಕ್ಕೆ ಅವರ್ಯಾರು ಪಕ್ಷ ಬಿಡುವ ಪರಿಸ್ಥಿತಿಯಲ್ಲಿ ಇಲ್ಲ. ಹೈಕಮಾಂಡ್ ಯಾರನ್ನು ಕರೆದಿಲ್ಲ. ಜಾರಕಿಹೊಳಿ ಸಹೋದರರಿಗೆ ಕರೆ ಬಂದಿರುವದು ನನಗೆ ಗೊತ್ತಿಲ್ಲ. ಸಚಿವ ಸಂಪುಟ ವಿಸ್ತರಣೆ ಹಾಗೂ ಪರಿಷತ್ ಸ್ಥಾನದ ಬಗ್ಗೆ ಚರ್ಚೆ ನಡೆಸಲು ದೆಹಲಿಗೆ ತೆರಳುತ್ತಿದ್ದೇವೆ ಎಂದು ಹೇಳಿದರು.

ಉತ್ತಮ ಪ್ರಜಾಕೀಯ ಪಕ್ಷ ಘೋಷಣೆ

ಬೆಂಗಳೂರು, ಸೆ. 18: ಸ್ಯಾಂಡಲ್ವುಡ್‍ನ ರಿಯಲ್ ಸ್ಟಾರ್ ಕಂ ರಾಜಕಾರಣಿ ಉಪೇಂದ್ರ ಅವರು ಸಾಹಸಸಿಂಹ ವಿಷ್ಣುವರ್ಧನ ಹುಟ್ಟುಹಬ್ಬದ ದಿನವೇ ತಮ್ಮ ಹೊಸ ರಾಜಕೀಯ ಪಕ್ಷ ಉತ್ತಮ ಪ್ರಜಾಕೀಯ ಪಕ್ಷವನ್ನು ಅಧಿಕೃತವಾಗಿ ಘೋಷಣೆ ಮಾಡಿದ್ದಾರೆ. ವಿಷ್ಣುವರ್ದನ್ ಹಾಗೂ ಉಪೇಂದ್ರ ಅವರ ಹುಟ್ಟಿದ ದಿನ ಒಂದೇ ಆಗಿದ್ದು ತಮ್ಮ ಹುಟ್ಟುಹಬ್ಬದ ಕಾರ್ಯಕ್ರಮದ ಜೊತೆಗೆ ಉಪೇಂದ್ರ ಹೊಸ ಪಕ್ಷವನ್ನು ಘೋಷಿಸಿದ್ದಾರೆ. ಹೊಸ ಪಕ್ಷ ಘೋಷಣೆ ಬಳಿಕ ಮಾತನಾಡಿದ ಉಪೇಂದ್ರ, ನಾವೆಲ್ಲರೂ ಪೇಪರ್ ಯುಗದಲ್ಲಿದ್ದು ಡಿಜಿಟಲ್ ಯುಗಕ್ಕೆ ಹೆಜ್ಜೆಯಿಡಬೇಕಾಗಿದೆ. ನನ್ನ ಎಲ್ಲ ಕಲ್ಪನೆಗಳು ಕಾರ್ಯರೂಪಕ್ಕೆ ಬರುತ್ತವೆ ಎಂದು ಹೇಳುತ್ತಿಲ್ಲ. ಹಾಗಂತ ನಾವು ಪಯತ್ನಿಸದೇ ಇರೋಕೆ ಆಗುವದಿಲ್ಲ ಎಂದು ಹೇಳಿದರು. ಯುಪಿಪಿ ಯಾವ ರೀತಿ ಕಾರ್ಯನಿರ್ವಹಿಸುತ್ತದೆ ಎಂಬದನ್ನು ಉಪೇಂದ್ರ ಪಿಪಿಟಿ ಸ್ಲೈಡ್‍ಗಳ ಮೂಲಕ ವಿವರಿಸಿದರು.