ಮಡಿಕೇರಿ, ಸೆ.18 : ಜಿಲ್ಲೆಯ ಸಾವಿರಾರು ಮಂದಿ ಮಹಾಮಳೆಗೆ ಸಿಲುಕಿ ಸಂಕಷ್ಟದ ಜೀವನ ಸಾಗಿಸುತ್ತಿರು ವದರಿಂದ ಈ ಬಾರಿಯ ಮಡಿಕೇರಿ ದಸರಾ ಜನೋತ್ಸವವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಬೇಕೆಂದು ದಸರಾ ಸಮಿತಿಯ ಮಾಜಿ ಕಾರ್ಯಾಧ್ಯಕ್ಷ ಕೆ.ಎಂ.ಗಣೇಶ್ ಮನವಿ ಮಾಡಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ಮಡಿಕೇರಿ ತಾಲೂಕಿನ ಅನೇಕ ಗ್ರಾಮಗಳು ಅತಿವೃಷ್ಟಿಯಿಂದ ಅಸ್ತಿತ್ವವನ್ನೇ ಕಳೆದುಕೊಂಡಿವೆ. ಸಾವಿರಾರು ಮಂದಿ ಸಂತ್ರಸ್ತರು ಅಸಹಾಯಕ ಸ್ಥಿತಿಯಲ್ಲಿ ಇಂದಿಗೂ ಕಣ್ಣೀರಿನಲ್ಲೆ ದಿನ ದೂಡುತ್ತಿದ್ದಾರೆ. ಈ ರೀತಿಯ ಪರಿಸ್ಥಿತಿಯಲ್ಲಿ ಮಡಿಕೇರಿ ದಸರಾವನ್ನು ವಿಜೃಂಭಣೆಯಿಂದ ಆಚರಿಸುವದು ಮಾನವೀಯ ಮೌಲ್ಯಕ್ಕೆ ವಿರುದ್ಧವಾದ ಕ್ರಮವಾಗಿದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ದಸರಾ ಸಂಪ್ರದಾಯಕ್ಕೆ ಎಲ್ಲೂ ಚ್ಯುತಿ ಬಾರದ ರೀತಿಯಲ್ಲಿ ನವರಾತ್ರಿಗಳ ಕಾಲ ದೇವಿಯ ಆರಾಧನೆ ನಡೆಯಬೇಕು. ನಗರದ ನಾಲ್ಕು ಶಕ್ತಿ ದೇವತೆಗಳ ಕರಗೋತ್ಸವ ಯಾವದೇ ಅಡ್ಡಿ, ಆತಂಕವಿಲ್ಲದೆ ಶ್ರದ್ಧಾಭಕ್ತಿಯಿಂದ ಜರುಗಬೇಕು. ಆದರೆ ಗಾಂಧಿ ಮೈದಾನದಲ್ಲಿ ಸಂಭಾವನೆ ನೀಡಿ ನಡೆಯುವ ಸಾಂಸ್ಕøತಿಕ ಕಾರ್ಯಕ್ರಮ ಗಳನ್ನು ರದ್ದು ಪಡಿಸಿ ಸ್ವಯಂ ಪ್ರೇರಿತ ರಾಗಿ ಬಂದು ಕಾರ್ಯಕ್ರಮ ನೀಡುವ ತಂಡಗಳಿಗೆ ಕಾವೇರಿ ಕಲಾಕ್ಷೇತ್ರದಲ್ಲಿ ಮಾತ್ರ ಅವಕಾಶ ಕಲ್ಪಿಸಬೇಕು. ದಸರಾದ ಕೊನೆಯ ದಿನ ಗಾಂಧಿ ಮೈದಾನದಲ್ಲಿ 35 ಲಕ್ಷ ರೂ.ಗೂ ಅಧಿಕ ಹಣ ಖರ್ಚು ಮಾಡಿ ಮೇಲ್ಚಾವಣಿ ನಿರ್ಮಿಸುವ ಬದಲು ತೆರೆದ ಪ್ರದೇಶದಲ್ಲಿ ಸರಳ ರೀತಿಯ ಕಾರ್ಯಕ್ರಮವನ್ನು ಆಯೋಜಿಸಬೇಕು ಎಂದು ಕೆ.ಎಂ.ಗಣೇಶ್ ಸಲಹೆ ನೀಡಿದ್ದಾರೆ.

ದಶಮಂಟಪಗಳಲ್ಲಿ ಶಾಸ್ತ್ರೋಕ್ತವಾಗಿ ಧಾರ್ಮಿಕ ವಿಧಿ ಯಂತೆ ಕಳಶವನ್ನಿಟ್ಟು ಸೂರ್ಯೋದ ಯದ ಮೊದಲೇ ಬನ್ನಿಮಂಟಪಕ್ಕೆ ಮಂಟಪಗಳನ್ನು ಕೊಂಡೊಯ್ದು ಬನ್ನಿ ಕಡಿಯುವದು ಸಂಪ್ರದಾಯ. ಇದೇ ಪ್ರಕಾರವಾಗಿ ಈ ಬಾರಿಯ ದಸರಾ ನಡೆಯಬೇಕು ಮತ್ತು ಮಂಟಪಗಳಿಗೆ ಒಂದು ಟ್ರ್ಯಾಕ್ಟರ್‍ನಷ್ಟೇ ಸೀಮಿv Àಗೊಳಿಸಿ ಚಲನವಲನಗಳಿಲ್ಲದ ದೇವರ ಸ್ತಬ್ಧ ಮೂರ್ತಿಗಳ ಮೆರವಣಿಗೆ ಸಾಗಬೇಕು. ಮಡಿಕೇರಿಯಲ್ಲಿ ಇನ್ನೂ ಕೂಡ ಶೋಕದ ವಾತಾವರಣ ಇರುವದರಿಂದ ಡಿಜೆ ಶಬ್ದ ಬಳಸಿ ದಸರಾ ಆಚರಿಸುವದನ್ನು ಕೈಬಿಡಬೇಕು ಎಂದು ಹೇಳಿದ್ದಾರೆ.