ಮಡಿಕೇರಿ ಸೆ. 18 : ಅತಿವೃಷ್ಟಿಯಿಂದಾಗಿ ಸಾವು, ನೋವುಗಳು ಸಂಭವಿಸಿ, ಆಸ್ತಿ, ಪಾಸ್ತಿ ಗಳು ಕೂಡ ನಾಶವಾಗಿರು ವದರಿಂದ ಸಂಕಷ್ಟದ ಈ ದಿನಗಳಲ್ಲಿ ಮಡಿಕೇರಿ ದಸರಾ ಆಚರಣೆಯನ್ನು ಸರಳ ರೀತಿಯಲ್ಲಿ ಆಯೋಜಿಸುವದು ಸೂಕ್ತವೆಂದು ನಗರ ದಸರಾ ಸಮಿತಿ ಮಾಜಿ ಉಪಾಧ್ಯಕ್ಷ ಹಾಗೂ ಕೊಡಗು ಜಿಲ್ಲಾ ಮೊಗೇರ ಸಮಾಜದ ಗೌರವಾಧ್ಯಕ್ಷ ಪಿ.ಎಂ.ರವಿ ತಿಳಿಸಿದ್ದಾರೆ.

ಪತ್ರಿಕಾ ಹೇಳಿಕೆ ನೀಡಿರುವ ಅವರು ದಸರಾ ಹಬ್ಬವನ್ನು ಅತಿ ಸರಳವಾಗಿ ಸಂಪ್ರದಾಯಕ್ಕೆ ಚ್ಯುತಿ ಬಾರದ ರೀತಿಯಲ್ಲಿ ಆಡಂಬರವಿಲ್ಲದೆ ಆಚರಿಸುವ ಮೂಲಕ ಕೊಡಗಿನ ಸಂಕಷ್ಟಕ್ಕೆ ನೆರವು ನೀಡಿದ ರಾಜ್ಯದ ಜನತೆಗೆ ಒಳ್ಳೆಯ ಸಂದೇಶವನ್ನು ರವಾನಿಸಬೇಕಾಗಿದೆ ಮತ್ತು ಸಂತ್ರಸ್ತರೊಂದಿಗೆ ನಾವಿದ್ದೇವೆ ಎನ್ನುವ ಭಾವನೆಯನ್ನು ಮೂಡಿಸಬೇಕಾಗಿದೆ ಎಂದು ಹೇಳಿದ್ದಾರೆ.

ಜಿಲ್ಲೆಯ ವಿವಿಧೆಡೆ ಗಣೇಶೋತ್ಸವವನ್ನು ಅತ್ಯಂತ ಸರಳ ರೀತಿಯಲ್ಲಿ ಆಚರಿಸಲಾಗಿದೆ. ಐತಿಹಾಸಿಕ ವಿರಾಜಪೇಟೆ ಗಣೇಶೋತ್ಸವವು ಈ ಬಾರಿ ಸರಳವಾಗಿ ಆಚರಿಸಲ್ಪಟ್ಟಿದೆ. ಅನೇಕ ಸಂಘ, ಸಂಸ್ಥೆಗಳು ಸೇರಿದಂತೆ ಜಾತಿ ಸಂಘಟನೆಯ ಕ್ರೀಡಾ ಸಮಿತಿಗಳು ಕೂಡ ಕ್ರೀಡಾಕೂಟವನ್ನು ಈ ಬಾರಿ ರದ್ದುಗೊಳಿಸಿ ನೊಂದವರಲ್ಲಿ ನಾವೂ ಒಂದು ಎಂಬ ಮನೋಭಾವನೆಯನ್ನು ವ್ಯಕ್ತಪಡಿಸಿದ್ದಾರೆ. ಜಿಲ್ಲೆ ಮಾತ್ರವಲ್ಲದೆ ರಾಜ್ಯದ ಜನತೆಯೇ ಕೊಡಗಿನ ಸಂತ್ರಸ್ತರೊಂದಿಗಿರುವಾಗ ಸರಳ ದಸರಾ ಆಚರಣೆಯ ಮೂಲಕ ಮಡಿಕೇರಿ ದಸರಾ ಸಮಿತಿ ಕೂಡ ಮಾದರಿಯಾಗಬೇಕಾಗಿದೆ ಎಂದಿದ್ದಾರೆ.