ಮಡಿಕೇರಿ, ಸೆ. 18: ಕಾಲೂರು-ಮಕ್ಕಂದೂರು-ಜೋಡುಪಾಲ... ಈ ವಿಭಾಗಗಳ ಜನತೆ ಅನುಭವಿಸಿದ ಸಂಕಷ್ಟ ಒಂದು ರೀತಿಯದ್ದಾದರೆ, ಕುಶಾಲನಗರದ ನಾಗರಿಕರ ಭವಣೆ ಬೇರೆಯದೇ ರೀತಿಯದು. ಮೊದಲನೆಯದರಲ್ಲಿ ಪ್ರಕೃತಿ ಮುನಿಸು ಕಂಡುಕೊಂಡರೆ ಇಲ್ಲಿ ಮಾನವ ನಿರ್ಮಿತ ದುರಂತ ಎಲ್ಲರ ಕಣ್ಣೆದುರಿಗೆ ಗೋಚರಿಸುತ್ತದೆ. ಸಮಯಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕಾದ ತೀರ್ಮಾನದಲ್ಲಿ ವಿಳಂಬ, ಅಸ್ಪಷ್ಟ ಚಿಂತನೆ, ದೂರಾಲೋಚನೆ ಇಲ್ಲದ ದಿಢೀರ್ ನಿರ್ಧಾರ ಇವುಗಳಿಂದಾಗಿ ಕುಶಾಲನಗರ ವ್ಯಾಪ್ತಿಯ ನೂರಾರು ನಿವಾಸಿಗಳು, ವಾಣಿಜ್ಯೋದ್ಯಮಿಗಳು ತತ್ತರಿಸಿ ಹೋಗಿ, ಬಿದ್ದ ಪೆಟ್ಟಿನಿಂದ ಚೇತರಿಸಿಕೊಳ್ಳಲು ಹವಣಿಸುತ್ತಿದ್ದಾರೆ. ಮನೆ, ಮಠ ಕಳೆದುಕೊಳ್ಳದಿದ್ದರೂ, ಮನೆಯೊಳಗಿನ ಸಾಮಗ್ರಿಗಳು ನೀರು ಪಾಲಾಗಿದ್ದು, ವಾಣಿಜ್ಯೋದ್ಯಮಿಗಳು ಲಕ್ಷಾಂತರ ಮೌಲ್ಯದ ಉಪಕರಣಗಳನ್ನು ನೀರಿಗೆ ಅರ್ಪಿಸಿದ್ದಾರೆ. ಮಕ್ಕಂದೂರಿನ ವಿಕೋಪದಿಂದ ಇದ್ದ-ಬದ್ದ ಮನೆ ವಸ್ತುಗಳನ್ನು ಕುಶಾಲನಗರಕ್ಕೆ ಸಾಗಿಸಿ ಅಲ್ಲಿನ ಮನೆಯೊಂದರಲ್ಲಿ ಆಶ್ರಯ ಪಡೆದಿದ್ದ ಬೆಳೆಗಾರರೊಬ್ಬರು ಇಲ್ಲಿಯೂ ತನ್ನ ಗೃಹೋಪಯೋಗಿ ಆಸ್ತಿಗಳನ್ನು ಕಳೆದುಕೊಂಡಿದ್ದಾರೆ. ತಳಮಟ್ಟದಲ್ಲಿದ್ದ ಕಾಫಿ ಕ್ಯೂರಿಂಗ್ ವಕ್ರ್ಸ್‍ನಲ್ಲಿ ಶೇಖರಿಸಲ್ಪಟ್ಟಿದ್ದ ಒಣ ಕಾಫಿ ಹಸಿ ಕಾಫಿಯಾಗಿ ಮಾರ್ಪಾಡುಗೊಂಡು ಅನುಪಯುಕ್ತವಾಗಿದೆ. ಸುಂದರ ನರ್ಸರಿಯ ಕನಸು ಕಂಡು ಹೂದೋಟ ನಿರ್ವಹಿಸುತ್ತಿದ್ದ ಉದ್ಯಮಿ ಉಳಿಕೆಗಳನ್ನು ಗುಡ್ಡೆ ಮಾಡಿಕೊಂಡಿದ್ದಾರೆ. ಕಾಫಿ ತೋಟ ಕಳೆದುಕೊಂಡ ತೋಟ ಮಾಲೀಕರು ನಷ್ಟದ ಲೆಕ್ಕಾಚಾರ ಹಾಕುತ್ತಿದ್ದಾರೆ.
ಕಳೆದ ಮೇ ಕೊನೆಯ ವಾರದಿಂದ ಜಿಲ್ಲೆಯ ಎಲ್ಲೆಡೆ ನಿರಂತರ ಮಳೆ ಸುರಿದಿದೆ. ಪರಿಣಾಮ ಜಿಲ್ಲೆಯ ಹಾರಂಗಿ ಜಲಾಶಯಕ್ಕೆ ಭಾರೀ ಪ್ರಮಾಣದಲ್ಲಿ ನೀರಿನ ಒಳಹರಿವು ಕಾಣಿಸಿಕೊಂಡಿದೆ. ತೀವ್ರಗೊಂಡ ಮಳೆಯಿಂದಾಗಿ ಮಡಿಕೇರಿ, ಗಾಳಿಬೀಡು, ಮೊಣ್ಣಂಗೇರಿ, ಮದೆನಾಡು, ಜೋಡುಪಾಲ ವ್ಯಾಪ್ತಿಯಲ್ಲಿ ನಿರಂತರ ಭೂಕುಸಿತದೊಂದಿಗೆ ಅಪಾಯದ ಆತಂಕ ಗೋಚರಿಸತೊಡಗಿದೆ.
ಮುಖ್ಯಮಂತ್ರಿ ಭೇಟಿ : ಈ ನಡುವೆಯೇ ಹಾರಂಗಿ ಜಲಾಶಯವೂ ಭರ್ತಿಗೊಳ್ಳುವ ಮುನ್ಸೂಚನೆಯೊಂದಿಗೆ ರಾಜ್ಯದ ಮುಖ್ಯಮಂತ್ರಿ ಹಾಗೂ ಜಲಸಂಪನ್ಮೂಲ ಸಚಿವರ ಸಹಿತ ಕೊಡಗಿನ ಭೇಟಿಯೊಂದಿಗೆ ಹಾರಂಗಿ ಜಲಾಶಯಕ್ಕೆ ಬಾಗಿನ ಸಮರ್ಪಿಸಿದ್ದಾಗಿದೆ.
ಎಡವಟ್ಟು ಯಾರಿಂದ?
ಮುನ್ಸೂಚನೆ ನೀಡದೆ ನೀರು ಹೊರಕ್ಕೆ : ಮಾತ್ರವಲ್ಲದೆ ಈ ಹಿಂದಿನಂತೆ ಸಾರ್ವಜನಿಕರಿಗೆ ಯಾವದೇ ಮುನ್ಸೂಚನೆ ನೀಡದೆ, ಆಗಸ್ಟ್ 14 ರಂದು 80 ಸಾವಿರಕ್ಕೂ ಅಧಿಕ ಕ್ಯೂಸೆಕ್ಸ್ ನೀರನ್ನು ಒಮ್ಮೆಲೆ ರಾತೋರಾತ್ರಿ ಹಾರಂಗಿ ಜಲಾಶಯದಿಂದ ನದಿಗೆ ಬಿಟ್ಟಿರುವ ಆರೋಪವಿದೆ. ಪರಿಣಾಮವಾಗಿ ಉತ್ತರ ಕೊಡಗಿನ ಭೂವೊಡಲಿನ ನೀರನ್ನು ಸೆಳೆದುಕೊಂಡಿರುವ ಜಲಾಶಯಕ್ಕೆ ಗರಿಷ್ಠ 1.5 ಲಕ್ಷ ಕ್ಯೂಸೆಕ್ಸ್ ಸಾಮಥ್ರ್ಯದ ಜಲ ತುಂಬಿ ಮರು ಘಳಿಗೆಯಲ್ಲಿ ನದಿಪಾತ್ರದ ಪಾಲಾಗಿದೆ. ಹೀಗಾಗಿ ಕುಶಾಲನಗರ ಜನವಸತಿ ಪ್ರದೇಶದ ಮೂಲಕವೇ ಹರಿಯುವ ಕಾವೇರಿ ನದಿಗೆ, ಜಲಾಶಯದಿಂದ ಹೊರ ಧುಮುಕಿದ ನೀರು ಅಪ್ಪಳಿಸಿ ಮರು ಕ್ಷಣದಲ್ಲಿ ಅಲ್ಲಿನ ಮನೆಗಳಿಗೆ ನುಗ್ಗಿದೆ.
ಆಳೆತ್ತರ ನೀರು : ಕುಶಾಲನಗರ ಪಟ್ಟಣದ ರಸ್ತೆಗಳಲ್ಲಿ ಈ ವೇಳೆ ರ್ಯಾಪ್ಟ್‍ಗಳ ಮುಖಾಂತರ ಜಲ ಪ್ರವಾಹ ನಡುವೆ,
(ಮೊದಲ ಪುಟದಿಂದ) ಜಿಲ್ಲಾ ಉಸ್ತುವಾರಿ ಸಚಿವರ ಸಹಿತ ಅಧಿಕಾರಿಗಳ ತಂಡ ಪ್ರಾಕೃತಿಕ ವಿಕೋಪವನ್ನು ಪರಿಶೀಲಿಸಿರುವದು, ಅಲ್ಲಿ ಎದುರಾಗಿದ್ದ ಅನಾಹುತಕ್ಕೆ ಕನ್ನಡಿ ಹಿಡಿದಂತಿದೆ. ಇಂತಹ ಅನಾಹುತ ಸಂಭವಿಸಿದ್ದು, ಹಾರಂಗಿ ಜಲಾಶಯ ನೀರು ಹೊರಬಿಟ್ಟ ಬಳಿಕವೆಂದು ದೃಢಪಟ್ಟಿದೆ.
ಆಕ್ರೋಶಕ್ಕೆ ಕಾರಣ : 1969ರಲ್ಲಿ ಚಾಲನೆಗೊಂಡಿರುವ ಹಾರಂಗಿ ಜಲಾಶಯ 1982ರಲ್ಲಿ ಲೋಕಾರ್ಪಣೆಗೊಂಡ ಬಳಿಕ ಇದೇ ಮೊದಲ ಬಾರಿಗೆ ಅನಾಹುತ ಸಂಭವಿಸಿದ್ದಾಗಿದೆ. ಅಂದಾಜು 122 ಕೋಟಿ ವೆಚ್ಚದ ಯೋಜನೆ ರೂಪುಗೊಂಡು ಸರಿ ಸುಮಾರು 50 ವರ್ಷಗಳಲ್ಲಿ ಇದೀಗ ಸಂಭವಿಸಿರುವ ದುರಂತಕ್ಕೆ ನೇರವಾಗಿ ಸಂಬಂಧಿಸಿದ ಅಧಿಕಾರಿಗಳ ನಿರ್ಲಕ್ಷ್ಯ ಕಾರಣ ಎನ್ನುವದು ಜಿಲ್ಲಾ ಪಂಚಾಯತ್ ಸದಸ್ಯೆ ಕೆ.ಪಿ. ಚಂದ್ರಕಲಾ, ಪಟ್ಟಣ ಪಂಚಾಯಿತಿ ಮಾಜೀ ಅಧ್ಯಕ್ಷ ಎಂ.ಎಂ. ಚರಣ್ ಸೇರಿದಂತೆ ಜಿಲ್ಲೆಯ ಗಡಿಯಾಚೆ ಕೊಪ್ಪ ಗ್ರಾ.ಪಂ. ವ್ಯಾಪ್ತಿಯ 70 ಮನೆಗಳಿಗೆ ನೀರು ನುಗ್ಗಿರುವ ಸಂತ್ರಸ್ತರಲ್ಲಿ ಒಬ್ಬರಾಗಿರುವ ಪತ್ರಕರ್ತೆ ವನಿತಾ ಚಂದ್ರಮೋಹನ್ ಆರೋಪವಾಗಿದೆ.
ಆ ಪ್ರಕಾರ ಜಲಾಶಯ ನಿರ್ವಹಣಾ ತಂಡದಲ್ಲಿ ಪ್ರಸಕ್ತ ಬಹುತೇಕ ಅಧಿಕಾರಿಗಳ ಸಹಿತ, ಜಲಾಶಯ ದ್ವಾರಗಳ ನಿರ್ವಾಹಕರೇ ಕರ್ತವ್ಯದಲ್ಲಿಲ್ಲ, ಬಹುತೇಕ ಹುದ್ದೆಗಳು ಖಾಲಿಯಿದ್ದು, ಕೈಬೆರಳೆಣಿಕೆಯಷ್ಟು ಮಂದಿ ದೈನಂದಿನ ಕೆಲಸ ಮಾಡದೆ ಇಲ್ಲಿ ಹೇಳುವವರು - ಕೇಳುವವರೇ ಇಲ್ಲ ಎಂಬ ಆಕ್ರೋಶದ ಮಾತಿದೆ.
ಪರಿಣಾಮ ಆಗಸ್ಟ್ 14 ರಿಂದ 17ರ ಅವಧಿಗೆ ಜಲಾಶಯದಿಂದ ನದಿಗೆ ಬಿಟ್ಟ ಜಲವು, ಕಾವೇರಿ ನದಿಗೆ ಅಪ್ಪಳಿಸಿ ಆ ನೀರು ಪ್ರವಾಹದಂತೆ ಕುಶಾಲನಗರ ಪಟ್ಟಣದ ಸಾಯಿ ಬಡಾವಣೆ, ಕುವೆಂಪು ಬಡಾವಣೆ, ಬಸಪ್ಪ ಬಡಾವಣೆ, ಇಂದಿರಾ ಬಡಾವಣೆ ಸಹಿತ ಕೊಡಗಿನ ಗಡಿದಾಟಿ ಕೊಪ್ಪ ಗ್ರಾ.ಪಂ. ವ್ಯಾಪ್ತಿಯಲ್ಲಿ ಅಂದಾಜು 400ಕ್ಕೂ ಅಧಿಕ ಮನೆಗಳಿಗೆ ಅಪ್ಪಳಿಸಿದೆ.
ಇಲ್ಲಿಯೂ ಇದೇ ಪರಿಸ್ಥಿತಿ : ಇಂದಿರಾ ಬಡಾವಣೆ ನಿವಾಸಿ, ಚರಣ್ ಹೇಳುವಂತೆ, ಸ್ವತಃ ಅವರ ಮನೆ ಸಹಿತ ಆ ಬಡಾವಣೆಯ 20ಕ್ಕೂ ಅಧಿಕ ಮನೆಗಳಿಗೆ ನಾಲ್ಕಾರು ಅಡಿಯಷ್ಟು, ನೀರು ನುಗ್ಗಿರುವ ಕಾರಣದಿಂದ ಇಂದಿಗೂ ಮನೆಗಳ ಪುನರ್ವಸತಿಗೆ ಸಾಧ್ಯವಾಗಿಲ್ಲ. ಪೀಠೋಪಕರಣ ಸಹಿತ ಎಲೆಕ್ಟ್ರಾನಿಕ್ ವಸ್ತುಗಳು ಸಂಪೂರ್ಣ ನಾಶಗೊಂಡಿದ್ದು, ಕೆಲವಷ್ಟು ಪ್ರವಾಹದಲ್ಲಿ ಕೊಚ್ಚಿ ಹೋಗಿವೆ.
ಕೊಪ್ಪ ನಿವಾಸಿ ಗೃಹಿಣಿಯೂ ಆಗಿರುವ ವನಿತಾ ಹೇಳುವಂತೆ ಹಾವು ಸಹಿತ ಕೊಳಕು ನೀರು ಮನೆಯೊಳಗೆ ಆವರಿಸಿಕೊಂಡಿದ್ದ ಪರಿಣಾಮ ಅಡುಗೆ - ಸ್ನಾನಕ್ಕೂ ನೀರಿಲ್ಲದೆ, ಯಾರೋ ಕಲ್ಪಿಸಿದ್ದ ಬಾಟಲಿ ನೀರಿನಲ್ಲಿ ವಾರಗಟ್ಟಲೆ ಅನ್ನಾಹಾರ ಬೇಯಿಸಿಕೊಂಡು ಊಟ ಮಾಡಿದ ಅನಿವಾರ್ಯತೆ ಎದುರಾಯಿತು.
ಬಸಪ್ಪ ಬಡಾವಣೆಯ ನಿವಾಸಿ, ಜಾಸ್ಮಿನ್ ಅಬ್ರಾಹಂ ಅವರ ಮನೆಯೊಳಗೆ ಇಂದಿಗೂ ಚೆಲ್ಲಾಪಿಲ್ಲಿಯಾಗಿರುವ ವಸ್ತುಗಳ ನಡುವೆ, ದುರ್ವಾಸನೆಯೊಂದಿಗೆ ಬದುಕು ಸರಿದೂಗಿಸಲಾರದೆ ಕಣ್ಣೀರಿನೊಂದಿಗೆ ದಿನಕಳೆಯುವಂತಾಗಿದೆ. ಮನೆಯಂಗಳದಲ್ಲಿ ನಿಲ್ಲಿಸಿದ್ದ ಕಾರು ಇತ್ಯಾದಿ ನೀರು ಸೇರಿಕೊಂಡು ಅಪಾರ ನಷ್ಟ ಸಂಭವಿಸಿದ್ದು, ಇಡೀ ಬಡಾವಣೆಯ ಹತ್ತಾರು ಕುಟುಂಬಗಳಿಗೆ ಅನಾಹುತ ಎದುರಾಗಿದೆ. ಅಲ್ಲಿನ ನಿವಾಸಿ ನಿವೃತ್ತ ಶಿಕ್ಷಕಿ ಇಳಿವಯಸ್ಸಿನ ಶುಭಮಣಿ ಹೇಳುವ ಪ್ರಕಾರ, ಮನೆಯ ವಸ್ತುಗಳು ಸೋಫಾ, ದಿವಾನ ಸಹಿತ ಆ. 17 ರಂದು ನೀರಿನಲ್ಲಿ ತೇಲತೊಡಗಿದ್ದರಿಂದ ಬಹುತೇಕ ವಸ್ತುಗಳು ನಿರುಪಯುಕ್ತವಾಗಿವೆ. ಕೆಇಬಿ ಉದ್ಯೋಗಿಯಾಗಿದ್ದ ಪತಿ ಪ್ರಕಾಶ್ ಈಗಾಗಲೇ ನಿಧನ ಹೊಂದಿದ್ದು, ಇಬ್ಬರ ದುಡಿಮೆಯ ವೇತನದಿಂದ ಕಟ್ಟಿಸಿರುವ ಮನೆಯಲ್ಲಿ ಇಂದು ಬದುಕು ದುಸ್ತರವಾಗಿದೆ.
ಮತ್ತೋರ್ವ ನಿವಾಸಿ, ಜೈನಭಾ ಪ್ರಕಾರ ನೀರಿನ ಸೆಳೆತದಿಂದ ಬಡಾವಣೆಯ ಬಹುತೇಕ ನಿವಾಸಿಗಳು, ಇಂದು ವಾಸ ಮಾಡಲು ಹಿಂದೇಟು ಹಾಕುತ್ತಿದ್ದು, ಬಾಡಿಗೆ ಮನೆಯವರು ಖಾಲಿ ಮಾಡಿ ತೆರಳಿದ್ದಾರೆ. ಕುವೆಂಪು ಬಡಾವಣೆ, ಸಾಯಿ ಬಡಾವಣೆಯಲ್ಲಿ ಅನೇಕ ಮನೆಗಳು ಹೊರಗುಳಿದಿವೆ. ಕುವೆಂಪು ಬಡಾವಣೆ, ಸಾಯಿ ಬಡಾವಣೆ, ಬಸಪ್ಪ ಬಡಾವಣೆಗಳಲ್ಲಿ ಇನ್ನು ನೀರಿನ ತೇವಾಂಶ ಮನೆಗಳನ್ನು ಆವರಿಸಿಕೊಂಡಿವೆ. ಸಾಯಿ ಬಡಾವಣೆಯ ಮನೆಯೊಳಗೆ ವಸ್ತುಗಳೆಲ್ಲವೂ ನೀರು ಪಾಲಾಗಿರುವ ಬೆನ್ನಲ್ಲೇ ತಾಹಿರಾ ಹಫೀಜ್ ತನ್ನ ಸಂಸಾರ ಸಹಿತ ಯೋಗಾನಂದ ಬಡಾವಣೆಗೆ ಸ್ಥಳಾಂತರಗೊಂಡಿದ್ದಾರೆ.
ಚಂದ್ರಕಲಾ ಕಿಡಿ: ಜಿ.ಪಂ. ಸದಸ್ಯೆ ಕೆ.ಪಿ. ಚಂದ್ರಕಲಾ ಹಾರಂಗಿ ಜಲಾಶಯ ಅಧಿಕಾರಿಗಳ ಎಡವಟ್ಟು ಬಗ್ಗೆ ‘ಶಕ್ತಿ’ಯೊಂದಿಗೆ ಕಿಡಿಕಾರಿದ್ದಾರೆ. ತಮ್ಮ ಮುಳ್ಳುಸೋಗೆ ಗ್ರಾಮ ವ್ಯಾಪ್ತಿಯ ಮನೆಗೂ ಜಲ ಪ್ರವಾಹ ಅಪ್ಪಳಿಸಿದ ಅಸಮಾಧಾನದೊಂದಿಗೆ ಈ ಬಗ್ಗೆ ಉನ್ನತಮಟ್ಟದ ತನಿಖೆಗೆ ಆಗ್ರಹಿಸಿದ್ದಾರೆ. ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ಓರ್ವ ಮಹಿಳಾ ಅಧಿಕಾರಿಯಾಗಿ ದಿಟ್ಟತನದಿಂದ ಕಾರ್ಯನಿರ್ವಹಿಸುತ್ತಿರುವದು ಶ್ಲಾಘನೀಯವಾದರೂ, ಜನಪ್ರತಿನಿಧಿಗಳ ಸಭೆ ನಡೆಸಿ ಅಭಿಪ್ರಾಯ ಪಡೆಯುವ ಅಗತ್ಯವಿದೆ ಎಂದು ಸಲಹೆ ನೀಡಿದ್ದಾರೆ.
ಕೊಡಗಿನ ಭವಿಷ್ಯದ ಬಗ್ಗೆ ಎಲ್ಲರೊಡಗೂಡಿ ಚರ್ಚಿಸಿ ಸಂತ್ರಸ್ತರಿಗೆ ಪುನರ್ವಸತಿ ಸೇರಿದಂತೆ ಹಾನಿಗೊಂಡಿರುವ ರಸ್ತೆಗಳು, ಸಾರ್ವಜನಿಕ ಆಸ್ತಿ ಪಾಸ್ತಿ ಕುರಿತು ಕ್ರೋಢೀಕೃತ ನಿರ್ಣಯ ತೆಗೆದುಕೊಳ್ಳುವಂತಾಗಬೇಕೆಂದು ಚಂದ್ರಕಲಾ ಗಮನ ಸೆಳೆದಿದ್ದಾರೆ.
-ವರದಿ : ಶ್ರೀಸುತ, ಸಹಕಾರ : ಎಂ.ಎನ್. ಚಂದ್ರಮೋಹನ್