ಕೂಡಿಗೆ, ಸೆ. 18: ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ವತಿಯಿಂದ ಕೂಡಿಗೆಯ ಜರ್ಸಿ ತಳಿ ಸಂವರ್ಧನಾ ಕೇಂದ್ರದಲ್ಲಿ ಪ್ರಕೃತಿ ವಿಕೋಪ ಜಾನುವಾರು ಸಂರಕ್ಷಣಾ ಮತ್ತು ಪಾಲನಾ ಕೇಂದ್ರವನ್ನು ಆರಂಭಿಸಲಾಗಿದ್ದು, ನೆರೆ ಪ್ರದೇಶಗಳಾದ ಮುಕ್ಕೊಡ್ಲು, ಹಟ್ಟಿಹೊಳೆ, ಮಾದಾಪುರ, ಇಗ್ಗೋಡು, ತಂತಿಪಾಲ ಸೇರಿದಂತೆ ಕೆಲವು ಪ್ರದೇಶಗಳಿಂದ ಈಗಾಗಲೇ 120 ಹಸುಗಳು ಮತ್ತು 4 ಎಮ್ಮೆಗಳ ಪಾಲನೆ ನಡೆಯುತ್ತಿದೆ. ಪ್ರಕೃತಿ ವಿಕೋಪದಿಂದ ನಿರಾಶ್ರಿತವಾಗಿರುವ ಹಸುಗಳನ್ನು ಸಂರಕ್ಷಿಸಿ, ಪಾಲನೆ ಮಾಡಲು ಜಿಲ್ಲಾಧಿಕಾರಿಗಳ ಆದೇಶದನ್ವಯ ಪಶುಪಾಲನಾ ಇಲಾಖೆಯ ಮೂಲಕ ಆಯಾ ಗ್ರಾಮಗಳಲ್ಲಿ ಸಾಕಿದ್ದ ಹಸುಗಳನ್ನು ಅಲ್ಲಿನ ಇಲಾಖೆಯ ಸಿಬ್ಬಂದಿಗಳ ಸಹಕಾರದೊಂದಿಗೆ ಕೂಡಿಗೆಯ ಜರ್ಸಿತಳಿ ಸಂವರ್ಧನಾ ಕೇಂದ್ರದಲ್ಲಿ ಸಂರಕ್ಷಣೆ ಮಾಡಲಾ ಗುತ್ತಿದೆ. ಈಗಾಗಲೇ ಕೇಂದ್ರದಲ್ಲಿ 120 ಹಸುಗಳು, 4 ಎಮ್ಮೆಗಳನ್ನು ಪಾಲನೆ ಮಾಡಲಾಗುತ್ತಿದೆ. ಅಲ್ಲದೆ, ಹಂದಿ ಗಳಿಗೆ ಬೇಕಾಗುವ ಆಹಾರವನ್ನು ನಿರಾಶ್ರಿತರ ಗ್ರಾಮಗಳಿಗೆ ತೆರಳಿ ಇಲಾಖೆಯ ಮೂಲಕ ಆಹಾರವನ್ನು ವಿತರಿಸಲಾಗುತ್ತಿದೆ. ಕೂಡಿಗೆ ಕೇಂದ್ರದಲ್ಲಿ 3 ತಿಂಗಳ ವರೆಗೆ ಹಸುಗಳನ್ನು ಪಾಲನೆ ಮಾಡಲು ಸಿದ್ಧತೆ ಮಾಡಲಾಗಿದ್ದು, ನೀರು, ವಿದ್ಯುತ್ ವ್ಯವಸ್ಥೆ ಮಾಡಿದ್ದು, ಹಸುಗಳಿಗೆ ಬೇಕಾಗುವ ಆಹಾರವನ್ನು ಹಾಸನ ಹಾಲು ಒಕ್ಕೂಟದ ಕೆಎಂಎಫ್ 10 ಟನ್ ಆಹಾರವನ್ನು ಉಚಿತವಾಗಿ ನೀಡಿದೆ. ಮೈಸೂರಿನ ಖಾಸಗಿ ಪಶು ಆಹಾರ ಸಂಸ್ಥೆಯವರು ಆಹಾರವನ್ನು ನೀಡಿದ್ದಾರೆ.
ಇದರೊಂದಿಗೆ ಹಸುಗಳಿಗೆ ಬೇಕಾಗುವ ಒಣಹುಲ್ಲನ್ನು ಚಿಕ್ಕಮಗಳೂರು ಜಿಲ್ಲೆಯ ಅಜ್ಜಂಪುರ ಫಾರಂನಿಂದ ತರಿಸಲಾಗುತ್ತಿದೆ. ಚಾಮರಾಜನಗರ ಜಿಲ್ಲೆಯಿಂದ ಉಚಿತವಾಗಿ ಒಣಹುಲ್ಲು ಮತ್ತು ಹಸಿ ಜೋಳದ ಹುಲ್ಲನ್ನು ಒದಗಿಸಿದ್ದಾರೆ. ಇದರ ಜೊತೆಯಲ್ಲಿ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಜಣ್ಣ ಎಂಬವರು ಒಂದೂವರೆ ಎಕರೆ ಪ್ರದೇಶದ ಹಸಿ ಜೋಳವನ್ನು ಉಚಿತವಾಗಿ ನೀಡಿದ್ದಾರೆ. ಇಲಾಖೆಯ ವತಿಯಿಂದ ಹಸಿ ಮತ್ತು ಒಣಹುಲ್ಲು, ಜೋಳದ ಕಟ್ಟಿಯನ್ನು ಯಂತ್ರದ ಮೂಲಕ ತುಂಡು ಮಾಡಿ ನಂತರ ಪಶು ಆಹಾರದೊಂದಿಗೆ ಹಸುಗಳಿಗೆ ನೀಡಲಾಗುತ್ತಿದೆ. ಪಶುಪಾಲನಾ ಗೃಹ ನಿರ್ಮಾಣ ನೌಕರರ ಸಂಘ ಮೈಸೂರು ಇವರ ವತಿಯಿಂದ ಒಣಹುಲ್ಲು ಮತ್ತು ಪಶು ಆಹಾರ, ತುಮಕೂರಿನ ವಿಕ್ಎಂಡ್ ವೆಬ್ ತಂಡದವರಿಂದ ಪಶು ಆಹಾರ ಪಶು ಪಾಲನಾ ಇಲಾಖೆಯ ಹಸಿರು ಗಟ್ಟದಿಂದ ಹಸು ಮೇವು ಸಾಗಾಣಿಕೆ ಮಾಡಲು ಒಂದು ವಾಹನದ ಸೌಲಭ್ಯ ನೀಡಲಾಗಿದೆ. ಮೈಸೂರು ಕೋಳಿ ಸಾಕಾಣಿಕಾ ಕೇಂದ್ರದ ವತಿಯಿಂದ ಒಣಹುಲ್ಲು ಮತ್ತು ಹಿಂಡಿ, ಕೊಡಗು ಜಿಲ್ಲೆಯ ಮೂರ್ನಾಡು ಗ್ರಾಮದ ಜಗನ್ನಾಥ್ ದಂಪತಿಗಳು ಈ ಕೇಂದ್ರಕ್ಕೆ ಭೇಟಿ ನೀಡಿ ಹಸುಗಳ ಪಾಲನೆ ಮಾಡುತ್ತಿರುವದನ್ನು ಗಮನಿಸಿ, ಪಶು ಆಹಾರವನ್ನು ಕಲ್ಪಿಸಲು ರೂ. 10,000 ನಗದನ್ನು ನೀಡಿದ್ದಾರೆ. ಚಾಮರಾಜನಗರದಿಂದ 1 ಲಾರಿ ಜೋಳವನ್ನು ನೀಡಿದ್ದಾರೆ. ಪಶು ವೈದ್ಯಾಧಿಕಾರಿಗಳ ಸಂಘ ಬೆಂಗಳೂರು, ಚಿಕ್ಕಮಗಳೂರು, ಹಾಸನದಿಂದ ಹಸುಗಳಿಗೆ ಬೇಕಾಗುವ ಒಣಹುಲ್ಲು ಮತ್ತು ಹಿಂಡಿಯನ್ನು ನೀಡಿದ್ದಾರೆ. ಅಲ್ಲದೆ, ಕಾಲೂರಿನ ಜಾನುವಾರುಗಳ ಮಾಲೀಕರು ಅವರಿಗೆ ಸೇರಿದ 7 ಹಸುಗಳನ್ನು ಪಾಲನೆ ಮಾಡುತ್ತಿರುವ ಬಗ್ಗೆ ಖುದ್ದು ವೀಕ್ಷಿಸಿ, ತೃಪ್ತಿಪಟ್ಟರು. ಬೆಂಗಳೂರಿನ ಇನ್ಟಾಸ್ಕ್ ಕಂಪೆನಿ ಮತ್ತು ಸಿದ್ಧಾರ್ಥ ಕಂಪೆನಿಯವರು ಲವಣಯುಕ್ತ ಮತ್ತು ಖನಿಜಯುಕ್ತ ಔಷಧಿ ಪುಡಿ ಹಾಗೂ ಔಷಧೋಪಕರಣಗಳನ್ನು ಉಚಿತವಾಗಿ ನೀಡಿದ್ದಾರೆ. ಹಸುಗಳಿಗೆ ದಿನಂಪ್ರತಿ ತಪಾಸಣೆ ಮಾಡಿ, ಚಿಕಿತ್ಸೆ ನೀಡಿ ಪಾಲನೆ ಮಾಡಲಾಗುತ್ತಿದೆ ಎಂದು ಜರ್ಸಿ ತಳಿ ಸಂವರ್ಧನಾ ಕೇಂದ್ರದ ರಾಜ್ಯ ವಲಯ ಜಂಟಿ ನಿರ್ದೇಶಕ ಡಾ. ದೇವದಾಸ್ ತಿಳಿಸಿದ್ದಾರೆ.
ಇದರೊಂದಿಗೆ ಜಿಲ್ಲಾ ಪಶುಪಾಲನಾ ಇಲಾಖೆಯ ಉಪನಿರ್ದೇಶಕರು ಮತ್ತು ಮೂರು ತಾಲೂಕಿನ ಸಹಾಯಕ ನಿರ್ದೇಶಕರು, ಕೇಂದ್ರದ ತಾಂತ್ರೀಕ ಸಿಬ್ಬಂದಿಗಳು ಹಸುಗಳ ಪಾಲನೆ ಮತ್ತು ಸಂರಕ್ಷಣೆಯಲ್ಲಿ ತೊಡಗಿದ್ದಾರೆ.
- ಕೆ.ಕೆ. ನಾಗರಾಜ ಶೆಟ್ಟಿ.