ನಾಪೋಕ್ಲು, ಸೆ. 18: ಇಲ್ಲಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ನಡೆದ ತಾಲೂಕು ಮಟ್ಟದ ಅಂತರ ಪ್ರಾಥಮಿಕ ಶಾಲಾ ಕ್ರೀಡಾಕೂಟದಲ್ಲಿ ವಿವಿಧ ಕ್ರೀಡಾ ಸ್ಪರ್ಧೆಗಳಲ್ಲಿ ಪಾಲ್ಗೊಂಡು ತಮ್ಮ ಕ್ರೀಡಾ ಪ್ರತಿಭೆಯನ್ನು ಮೆರೆದರು.
ಸಾರ್ವಜನಿಕ ಶಿಕ್ಷಣ ಇಲಾಖೆ, ಜಿಲ್ಲಾ ಪಂಚಾಯಿತಿ ಮತ್ತು ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಸಹಯೋಗದಲ್ಲಿ ನಡೆದ ತಾಲೂಕು ಮಟ್ಟದ ಪ್ರಾಥಮಿಕ ಮತ್ತು ಪ್ರೌಢಶಾಲಾ ವಿಭಾಗದ ಕ್ರೀಡಾ ಕೂಟದಲ್ಲಿ ವಾಲಿಬಾಲ್, ಖೋ-ಖೋ, ಥ್ರೋಬಾಲ್, ಬಾಲ್ ಬ್ಯಾಡ್ಮಿಂಟನ್ ಸ್ಪರ್ಧೆಗಳು ಜರುಗಿ, ಶ್ರೀ ರಾಮ ಟ್ರಸ್ಟ್ ಆಂಗ್ಲ ಮಾಧ್ಯಮ ವಿದ್ಯಾಸಂಸ್ಥೆಯ ಆಡಳಿತ ಮಂಡಳಿ ಅಧ್ಯಕ್ಷ ಬೊಪ್ಪಂಡ ಡಾ. ಜಾಲಿ ಬೋಪಯ್ಯ, ಉಪಾಧ್ಯಕ್ಷ ಕಲಿಯಂಡ ಹ್ಯಾರಿ ಮಂದಣ್ಣ, ವಿವಿಧ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ದೈಹಿಕ ಶಿಕ್ಷಣ ಶಿಕ್ಷಕರು ಪಾಲ್ಗೊಂಡಿದ್ದರು. ಅಂತಿಮ ಸುತ್ತಿನಲ್ಲಿ ಮದೆನಾಡು ಪ್ರೌಢಶಾಲೆ, ಪಾರಾಣೆ ಪ್ರೌಢಶಾಲೆ, ಚೇರಂಬಾಣೆಯ ಅರುಣ ಪದವಿಪೂರ್ವ ಕಾಲೇಜು, ನಾಪೋಕ್ಲುವಿನ ಶ್ರೀ ರಾಮಟ್ರಸ್ಟ್, ಸಿದ್ದಾಪುರದ ಇಕ್ರಾ ಹಾಗೂ ಚಪ್ಪೆಂಡಡಿ ಶಾಲೆಯ ವಿದ್ಯಾರ್ಥಿಗಳು ಗೆಲವಿನ ನಗೆ ಬೀರಿದರು.
ಪ್ರೌಢಶಾಲಾ ವಿಭಾಗದ ಬಾಲಕಿಯರ ಥ್ರೋಬಾಲ್ ಸ್ಪರ್ಧೆಯಲ್ಲಿ ಮದೆನಾಡು ಪ್ರೌಢಶಾಲೆಯ ವಿದ್ಯಾರ್ಥಿಗಳು ಜಯಗಳಿಸಿದರೆ ಖೋ-ಖೋ ಸ್ಪರ್ಧೆಯಲ್ಲಿ ಪಾರಾಣೆ ಪ್ರೌಢಶಾಲೆಯ ವಿದ್ಯಾರ್ಥಿಗಳು ವಿಜೇತರಾದರು. ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಶ್ರೀ ರಾಮಟ್ರಸ್ಟ್ ಶಾಲೆಯ ವಿದ್ಯಾರ್ಥಿಗಳು
ಗೆಲವು ಸಾಧಿಸಿದರು. ಬಾಲ್ ಬ್ಯಾಡ್ಮಿಂಟನ್ ಹಾಗೂ ವಾಲಿಬಾಲ್ ಸ್ಪರ್ಧೆಯಲ್ಲಿ ಚೇರಂಬಾಣೆಯ ಅರುಣ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಜಯಸಾಧಿಸಿದರು.
ಪ್ರಾಥಮಿಕ ಶಾಲಾ ವಿಭಾಗದ ಬಾಲಕರ ಥ್ರೋಬಾಲ್ ಸ್ಪರ್ಧೆಯಲ್ಲಿ ಸಿದ್ದಾಪುರದ ಇಕ್ರಾ ಶಾಲೆಯ ವಿದ್ಯಾರ್ಥಿಗಳು ಗೆಲವು ಸಾಧಿಸಿದರು.
ವಾಲಿಬಾಲ್ ಮತ್ತು ಟೇಬಲ್ ಟೆನ್ನಿಸ್ ಸ್ಪರ್ಧೆಯಲ್ಲಿ ಶ್ರೀ ರಾಮಟ್ರಸ್ಟ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಜಯ ಸಾಧಿಸಿದರು. ಖೋ-ಖೋ ಸ್ಪರ್ಧೆಯಲ್ಲಿ ಚಪ್ಪೆಂಡಡಿ ಶಾಲೆಯ ವಿದ್ಯಾರ್ಥಿ ಗಳು ಗೆಲವು ಸಾಧಿಸಿದರು.