ಮಡಿಕೇರಿ, ಸೆ. 18: ಮಡಿಕೇರಿಗೆ ಸಮೀಪದ ಮದೆನಾಡು ಗ್ರಾಮದ ಬೆಟ್ಟತ್ತೂರು ಗ್ರಾಮಕ್ಕೆ ತೆರಳುವ ದಾರಿಯಲ್ಲಿ ಸುಮಾರು 2 ಕಿ.ಮೀ. ದೂರದ `ಸೀಮೆಕಜೆ’ ಎಂಬಲ್ಲಿ ಮಡಿಕೇರಿಯ ನಿವಾಸಿ, ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಅಧ್ಯಕ್ಷ, ಮಾಜಿ ನಗರಸಭಾ ಸದಸ್ಯ ಕೆ.ಎಂ. ಗಣೇಶ್ ಅವರಿಗೆ ಸೇರಿದ 3 ಎಕರೆ ತೋಟ ನಾಶವಾಗಿದೆ.

ಇದೇ ಆಗಸ್ಟ್ 14-15-16ರ ಅವಧಿಯಲ್ಲಿ ಜಿಲ್ಲೆಯಲ್ಲಿ ಭಾರೀ ಮಹಾಮಳೆಯಿಂದಾಗಿ ಜಲಪ್ರಳಯ ಸಂಭವಿಸಿತ್ತು. ಇದರಲ್ಲಿ ಸಿಲುಕಿ ಬಹಳಷ್ಟು ಮಂದಿ ಸಂತ್ರಸ್ತರಾದರು. ಕೆಲವರು ಜಲಸಮಾಧಿಯಾದರು.

ಈ ಘಟನೆಯಿಂದ ಸಂತ್ರಸ್ತರಾದವರನ್ನು ಸಿಕ್ಕ ಸಿಕ್ಕಲ್ಲಿ ಪರಿಹಾರ ಕೇಂದ್ರಗಳನ್ನು ತೆರೆದು ಆಶ್ರಯ ನೀಡಿದರು. ಇವರಲ್ಲಿ ಕೆಲವರನ್ನು ಕೆ.ಎಂ. ಗಣೇಶ್ ತಮ್ಮ ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘದ ಕೊಹಿನೂರು ರಸ್ತೆಯಲ್ಲಿರುವ ಸಭಾಂಗಣದಲ್ಲಿ ಸುಮಾರು 135ಕ್ಕೂ ಹೆಚ್ಚಿನ ಸಂತ್ರಸ್ತರನ್ನು ಇರಿಸಿ ಆಶ್ರಯ ನೀಡುತ್ತಿದ್ದರು. ಇವರಲ್ಲಿ ಮದೆನಾಡಿನಿಂದ ಬಂದವರು ಇದ್ದು, ಈ ಬಗ್ಗೆ ಮಾಹಿತಿ ನೀಡಿದರು.

ಭಾನುವಾರ ಸಂತ್ರಸ್ತರನ್ನು ಬೀಳ್ಕೊಟ್ಟು ತನ್ನ ಸ್ನೇಹಿತರನ್ನು ಸೇರಿಸಿಕೊಂಡು ಮದೆನಾಡಿಗೆ ತೆರಳಿ ತನ್ನ ತೋಟ ಮತ್ತು ಜಮೀನನ್ನು ಹುಡುಕಿದರೂ ಎಲ್ಲೂ ಕಾಣಲಿಲ್ಲ. ಇದ್ದ ಮೂರು ಎಕರೆ ತೋಟ ಮತ್ತು ಜಮೀನು ನಾಪತ್ತೆಯಾಗಿರುವದು ಅರಿವಾಗಿದೆ. ಸೋಮವಾರ ದಿನ ಸಂಜೆ ಮಾಧ್ಯಮದವರನ್ನು ಸ್ಥಳಕ್ಕೆ ಕರೆದೊಯ್ದು ಗಣೇಶ್ ಮಾತನಾಡಿ, ತನಗೆ ಗ್ರಾಮಸ್ಥರು ತಿಳಿಸಿದರೂ ನಂಬಿರಲಿಲ್ಲ. ಈಗ ನೋಡಿ ದಿಗ್ಭ್ರಾಂತನಾಗಿದ್ದೇನೆ.

ಜಲಪ್ರಳಯದಿಂದ ಆಸ್ತಿ ಪಾಸ್ತಿಗಳನ್ನು ಕಳೆದುಕೊಂಡವರಿಗೆ ಸರಕಾರ ಸೂಕ್ತ ಪರಿಹಾರ ನೀಡಿ, ಜಮೀನಿಗೆ ಸಮಾನವಾದ ಮೊತ್ತವನ್ನು ನೀಡುವಂತಾಗಬೇಕು. ಅಥವಾ ಸರಕಾರ ಪೂರ್ಣ ಮೊತ್ತ ನೀಡಿ ಖರೀದಿಸಲಿ ಎಂಬ ಸಲಹೆ ನೀಡಿದರು.