ಸೋಮವಾರಪೇಟೆ, ಸೆ. 17: ಸಮೀಪದ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಕಾಡಾನೆಗಳ ಕಾಟ ಮುಂದುವರೆದಿದ್ದು, ಜನಸಾಮಾನ್ಯರು ಭಯದ ವಾತಾವರಣದಲ್ಲಿ ಜೀವನ ಸಾಗಿಸುವಂತಾಗಿದೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡಿದ್ದಾರೆ.
ಗ್ರಾಮಗಳಲ್ಲಿ ಕಾಡಾನೆಗಳು ಕೃಷಿ ಫಸಲನ್ನು ನಷ್ಟಪಡಿಸುತ್ತಿದ್ದು, ಗ್ರಾಮದಲ್ಲಿ ನಡೆದಾಡಲೂ ಸಹ ಭಯಪಡುವಂತಾಗಿದೆ. ಕಾಡಾನೆಗಳ ಹಾವಳಿ ನಿಯಂತ್ರಣಕ್ಕೆ ಅರಣ್ಯ ಇಲಾಖೆ ಕ್ರಮಕೈಗೊಳ್ಳಬೇಕೆಂದು ಆಗ್ರಹಿಸುತ್ತಾ ಬಂದಿದ್ದರೂ ಪ್ರಯೋಜನ ಮಾತ್ರ ಶೂನ್ಯವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ನೇರುಗಳಲೆ ಗ್ರಾ.ಪಂ.ಗೆ ಒತ್ತಿಕೊಂಡಂತೆ ಇರುವ ಹುದುಗೂರು ಮೀಸಲು ಅರಣ್ಯ, ಕಣಿವೆ, ಜೇನುಕಲ್ಲುಬೆಟ್ಟ ಅರಣ್ಯ ಪ್ರದೇಶಗಳಿಂದ ಸಂಜೆ ಹೊತ್ತಿನಲ್ಲಿ ಗ್ರಾಮಗಳಿಗೆ ಲಗ್ಗೆಯಿಡುವ ಕಾಡಾನೆಗಳು ರಾತ್ರಿ ಕೃಷಿ ಭೂಮಿಯಲ್ಲಿ ಸಂಚರಿಸಿ ಫಸಲನ್ನು ತಿಂದು ಬೆಳಗ್ಗಿನ ಜಾವ ಅರಣ್ಯ ಪ್ರದೇಶ ಸೇರಿಕೊಳ್ಳುತ್ತಿವೆ ಎಂದು ಗ್ರಾಮಸ್ಥರು ಮಾಹಿತಿ ನೀಡಿದ್ದಾರೆ.
ನೇರುಗಳಲೆ ಗ್ರಾಮದಿಂದ ನೇರಳೆ ಮಾರ್ಗವಾಗಿ ಸೀಗೆಹೊಸೂರು ಗ್ರಾಮದ ಸರಹದ್ದಿನಲ್ಲಿ ಅರಣ್ಯ ಪ್ರದೇಶದಿಂದ ಕಾಡಾನೆಗಳು ಗ್ರಾಮ ಪ್ರವೇಶ ಮಾಡುತ್ತಿರುವದರಿಂದ ಕೃಷಿ ಫಸಲನ್ನು ರಕ್ಷಣೆ ಮಾಡಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಆ ಪ್ರದೇಶದಲ್ಲಿ ಆನೆಕಂದಕ ಮತ್ತು ಸೋಲಾರ್ ತಂತಿಬೇಲಿಯನ್ನು ನಿರ್ಮಿಸಿದರೆ ಮಾತ್ರ ಕಾಡಾನೆ ಹಾವಳಿಯನ್ನು ಸ್ವಲ್ಪಮಟ್ಟಿಗೆ ತಡೆಯಬಹುದಾಗಿದೆ ಎಂದು ಹೊಸಳ್ಳಿ ಸಚಿನ್ ತಿಳಿಸಿದ್ದಾರೆ.
ಹೊಸಳ್ಳಿ ಗ್ರಾಮದ ಕಮಲ ಎಂಬವರ ಭತ್ತದ ಪೈರನ್ನು ಕಾಡಾನೆಗಳು ನಾಶ ಮಾಡಿವೆ. ಎಚ್.ಕೆ. ಲೋಕೇಶ್ ಅವರ ಕೇನೆಗೆಡ್ಡೆ, ಹೊಸಳ್ಳಿ ಸಚಿನ್, ತಿಮ್ಮಯ್ಯ ಅವರುಗಳÀ ಜೋಳ, ಮಾದಪ್ಪ ಅವರ ಶುಂಠಿ ಫಸಲು ಸೇರಿದಂತೆ ಹೆಚ್ಚಿನ ರೈತರ ಫಸಲನ್ನು ನಷ್ಟಪಡಿಸಿವೆ.
ಕಾಡಾನೆಗಳ ಹಾವಳಿ ತಡೆಯಲು ಸರ್ಕಾರ ಶಾಶ್ವತ ಪರಿಹಾರ ಕಂಡು ಹಿಡಿಯಬೇಕು. ಫಸಲಿಗೆ ಸೂಕ್ತ ಬೆಲೆಯೂ ಸಿಗುತ್ತಿಲ್ಲ. ಸರ್ಕಾರ ಹೆಚ್ಚಿನ ಬೆಳೆಹಾನಿ ಪರಿಹಾರ ನೀಡಬೇಕು. ಕಾಡಾನೆ ಪೀಡಿತ ಗ್ರಾಮಗಳ ಕೃಷಿಗೆ ಹೆಚ್ಚಿನ ಪ್ರೋತ್ಸಾಹ ನೀಡಬೇಕು ಎಂದು ಸುಪ್ರಿತ್ ಸೇರಿದಂತೆ ಗ್ರಾಮಸ್ಥರು ಒತ್ತಾಯಿಸಿದ್ದಾರೆ.