ಮಡಿಕೇರಿ, ಸೆ. 17: ಕೊಡಗು ಜಾನಪದ ಪರಿಷತ್ ಬಳಗದಿಂದ ಕುಶಾಲನಗರದ ವಾಲ್ಮೀಕಿ ಭವನದಲ್ಲಿರುವ ಸಂತ್ರಸ್ತರಿಗೆ ನಿನ್ನೆ ಆತ್ಮಸ್ಥೈರ್ಯ ತುಂಬುವ ಕಾರ್ಯಕ್ರಮ ನಡೆಸಲಾಯಿತು. ಪರಿಷತ್ತಿನ ಜಿಲ್ಲಾಧ್ಯಕ್ಷ ಬಿ.ಜಿ. ಅನಂತಶಯನ ಅವರು, ಕಷ್ಟಕಾಲದಲ್ಲಿ ಆತ್ಮಸ್ಥೈರ್ಯ ಕಳೆದುಕೊಳ್ಳದೆ, ಪರಿಸ್ಥಿತಿ ಎದುರಿಸಲು ಜೀವನ ಕಲೆ ಮೈಗೂಡಿಸಿಕೊಳ್ಳುವಂತೆ ಕಳಕಳಿಯ ನುಡಿಯಾಡಿದರು. ಬಳಗದ ಪದಾಧಿಕಾರಿಗಳಾದ ಮುನೀರ್ ಅಹ್ಮದ್, ಪೊನ್ನಚನ ಮೋಹನ್ ಅವರುಗಳು ಹಿತನುಡಿಯಾಡಿದರು. ಸಿದ್ಧರಾಜು ಗಾಯನದೊಂದಿಗೆ ಗಮನ ಸೆಳೆದರು. ಸಂತ್ರಸ್ತ ಕೇಂದ್ರದ ಮಕ್ಕಳು, ಹಿರಿಯರು ಗೀತೆಗಳ ಮುಖಾಂತರ ನೋವಿನಲ್ಲೂ ಬದುಕಿನ ಮರ್ಮಗಳ ಮೆಲುಕು ಹಾಕಿದರು.
ಸೋಮವಾರಪೇಟೆ ತಾಲೂಕು ಅಧ್ಯಕ್ಷ ಚಂದ್ರಮೋಹನ್ ಸಂತ್ರಸ್ತ ಕೇಂದ್ರದ ಮಕ್ಕಳು ಹಾಗೂ ಗೀತೆ ಹಾಡಿದವರಿಗೆ ನೆನಪಿನ ಕಾಣಿಕೆ ನೀಡಿ ಪ್ರೋತ್ಸಾಹಿಸಿದರು. ಪರಿಹಾರ ಕೇಂದ್ರದ ಮುಖ್ಯಸ್ಥ ಫಿಲಿಪ್‍ವಾಸ್, ಪರಿಷತ್ ಪದಾಧಿಕಾರಿಗಳಾದ ಎಸ್.ಎಸ್. ಸಂಪತ್‍ಕುಮಾರ್, ಅಂಬೆಕಲ್ ಕುಶಾಲಪ್ಪ, ಮಂಡುವಂಡ ಜೋಯಪ್ಪ, ಪ್ಯಾನ್ಸಿ ಮುತ್ತಣ್ಣ, ವನಿತ ಚಂದ್ರಮೋಹನ್, ಪ್ರಶಾಂತ್, ರುಬಿನಾ, ಶಿವಪ್ಪ ಮೊದಲಾದವರು ಪಾಲ್ಗೊಂಡಿದ್ದರು.