ಕುಶಾಲನಗರ, ಸೆ. 17: ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಅವರನ್ನು ವರ್ಗಾಯಿಸದಂತೆ ಆಗ್ರಹಿಸಿ ಸ್ಥಳೀಯ ನಾಗರಿಕರು ಪಂಚಾಯಿತಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.
ಪ.ಪಂ. ಮುಖ್ಯಾಧಿಕಾರಿಯಾಗಿ ಕಳೆದ ಎರಡು ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಎ.ಎಂ. ಶ್ರೀಧರ್ ದಕ್ಷ ಅಧಿಕಾರಿಯಾಗಿದ್ದು ಕುಶಾಲನಗರದ ಪಟ್ಟಣದ ಅಭಿವೃದ್ಧಿಗೆ ನಿರಂತರ ಶ್ರಮಿಸುವದರೊಂದಿಗೆ ನಿಯಮಬಾಹಿರ ಕೆಲಸ ಕಾರ್ಯಗಳಿಗೆ ಕಡಿವಾಣ ಹಾಕುವಲ್ಲಿ ಯಶಸ್ವಿಯಾಗಿ ದ್ದರು. ಹಲವು ದಶಕಗಳ ಕಾಲ ನೆನೆಗುದಿಗೆ ಬಿದ್ದಿದ್ದ ಗುಂಡುರಾವ್ ಬಡಾವಣೆ ನಿವೇಶನಗಳ ಹರಾಜು, ಸ್ವಚ್ಛ ಕುಶಾಲನಗರ ಹಾಗೂ ಸ್ವಚ್ಛ ಕಾವೇರಿ ನಿರ್ಮಿಸುವ ನಿಟ್ಟಿನಲ್ಲಿ ಹಲವು ಕಾರ್ಯಕ್ರಮಗಳ ರೂವಾರಿಯಾಗಿದ್ದ ಶ್ರೀಧರ್ ಅವರ ವರ್ಗಾವಣೆ ಹಿಂದೆ ಕೆಲವು ಲಾಭಿಗಳು ನಡೆದಿವೆ ಎಂದು ಪ್ರತಿಭಟನಾಕಾರರು ಆರೋಪಿಸಿದರು.
ಶ್ರೀಧರ್ ಅವರ ವರ್ಗಾವಣೆ ರಾಜಕೀಯ ಪ್ರೇರಿತವಾಗಿದ್ದು ತಕ್ಷಣ ವರ್ಗಾವಣೆ ರದ್ದುಗೊಳಿಸುವಂತೆ ಒತ್ತಾಯಿಸಿದರು. ಕುಶಾಲನಗರ ಪಟ್ಟಣದ ಹೃದಯ ಭಾಗದಲ್ಲಿರುವ ಪಂಚಾಯಿತಿ ಮಳಿಗೆಗಳ ತೆರವುಗೊಳಿ ಸುವ ಸಂದರ್ಭ ಕೆಲವು ನಕಲಿ ದಾಖಲೆಗಳು ಬೆಳಕಿಗೆ ಬಂದಿದ್ದು, ಈ ಬಗ್ಗೆ ತನಿಖಾ ಹಂತದಲ್ಲಿರುವ ವೇಳೆಯಲ್ಲಿ ಮಾಫಿಯಾಗಳು ತಮ್ಮ ಕೈಚಳಕ ತೋರಿಸಿರುವದಾಗಿ ಆರೋಪಿಸಿದ್ದು ಜಿಲ್ಲಾಧಿಕಾರಿಗಳು ಈ ಬಗ್ಗೆ ಗಮನಹರಿಸಬೇಕು ಎಂದು ತಿಳಿಸಿದರು.
ಪ್ರತಿಭಟನೆಯಲ್ಲಿ ಸ್ಥಳೀಯ ಪ್ರಮುಖರಾದ ಕೆ.ಜಿ. ಮನು, ಉಮಾಶಂಕರ್, ಎಂ.ಡಿ. ಕೃಷ್ಣಪ್ಪ, ಮಂಜುನಾಥ್‍ಕುಮಾರ್ ಮತ್ತಿತರರು ಇದ್ದರು.
ಆಗ್ರಹ: ಕುಶಾಲನಗರ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಅವರನ್ನು ತಕ್ಷಣ ಅವರ ಮಾತೃ ಇಲಾಖೆಗೆ ವರ್ಗಾಯಿಸುವಂತೆ ಸ್ಥಳೀಯ ಉದ್ಯಮಿ ಕೆ.ಎಸ್. ನಾಗೇಶ್ ಆಗ್ರಹಿಸಿದ್ದಾರೆ. ಅವರು ಸುದ್ದಿಗೋಷ್ಠಿಯಲ್ಲಿ ಈ ಬಗ್ಗೆ ತಿಳಿಸಿದ್ದು ಅವರ ಅಧಿಕಾರ ಅವಧಿಯಲ್ಲಿ ವ್ಯಾಪಕ ಭ್ರಷ್ಟಾಚಾರ ನಡೆದಿದೆ. ಈ ಬಗ್ಗೆ ಉನ್ನತ ಮಟ್ಟದ ತನಿಖೆ ನಡೆಸುವಂತೆ ಒತ್ತಾಯಿಸಿದ್ದಾರೆ.
ಊರಿನ ಹಿತಾಸಕ್ತಿಯಿಂದ ಶ್ರೀಧರ್ ಅವರನ್ನು ಬೇರೆಡೆಗೆ ವರ್ಗಾವಣೆಗೊಳಿಸುವದು ಸೂಕ್ತ ಎಂದು ತಿಳಿಸಿದ ನಾಗೇಶ್, ಅವರ ಸೇವೆಯನ್ನು ಅಮಾನತಿನಲ್ಲಿಟ್ಟು ಉನ್ನತ ಮಟ್ಟದ ತನಿಖೆ ನಡೆಸಿ ಭ್ರಷ್ಟಾಚಾರ ಬಯಲಿಗೆಳೆಯಬೇಕಿದೆ ಎಂದರು.
ಗೋಷ್ಠಿಯಲ್ಲಿ ಸ್ಥಳೀಯರಾದ ಎಂ.ಪಿ .ಬಸವರಾಜು, ಹೆಚ್.ಎಂ. ಚಂದ್ರ, ಸಂತೋಷ್‍ಕುಮಾರ್, ನಿತಿನ್, ರಾಖಿ ಇದ್ದರು.