ಗೋಣಿಕೊಪ್ಪಲು, ಸೆ.17: ಕರ್ನಾಟಕ ರಾಜ್ಯದಲ್ಲಿ ಹೆಚ್.ಡಿ.ಕುಮಾರಸ್ವಾಮಿ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಕೊಡಗು ಜಿಲ್ಲೆಯಲ್ಲಿ ಜೆಡಿಎಸ್ ಪಕ್ಷ ಮತ್ತಷ್ಟು ಬೆಳವಣಿಗೆ ಕಾಣಲಿದೆ ಎಂಬ ನಿರೀಕ್ಷೆಯಲ್ಲಿದ್ದ ಕಾರ್ಯಕರ್ತರಿಗೆ ಜಿಲ್ಲಾ ಅಧ್ಯಕ್ಷ ಬದಲಾವಣೆ ವಿಚಾರದಲ್ಲಿ ಪರ ವಿರೋಧ ಚರ್ಚೆಗಳು ನಡೆದ ಹಿನ್ನೆಲೆಯಲ್ಲಿ ಪಕ್ಷ ಕೊಡಗಿನಲ್ಲಿ ಇದ್ದೂ ಇಲ್ಲದಂತಾಗಿದೆ. ಪಕ್ಷದ ಕಾರ್ಯಕರ್ತರಿಗೆ ದಿಕ್ಕು ತೋಚದಂತಾಗಿದ್ದು, ಕೂಡಲೇ ಕೊಡಗು ಜಿಲ್ಲೆಗೆ ಜಿಲ್ಲಾಧ್ಯಕ್ಷರನ್ನು ನೇಮಿಸಬೇಕು. ಇಲ್ಲದಿದ್ದಲ್ಲಿ ಅಧ್ಯಕ್ಷರಾಗಿದ್ದ ಮೇರಿಯಂಡ ಸಂಕೇತ್ ಪೂವಯ್ಯ ಅವರನ್ನು ಮುಂದುವರೆಸಬೇಕೆಂದು ಜೆಡಿಎಸ್ ಪಕ್ಷದ ಮುಖಂಡರು ಒತ್ತಾಯಿಸಿದ್ದಾರೆ.
ಜೆಡಿಎಸ್‍ನ ನೂತನ ರಾಜ್ಯಾಧ್ಯಕ್ಷ ಅಡಗೂರು ಹೆಚ್.ವಿಶ್ವನಾಥ್ ಮಡಿಕೇರಿಗೆ ಆಗಮಿಸಿದ್ದ ಸಂದರ್ಭ ವೀರಾಜಪೇಟೆ ನಗರ ಜೆಡಿಎಸ್ ಅಧ್ಯಕ್ಷ ಪಿ.ಎ.ಮಂಜುನಾಥ್ ಹಾಗೂ ಯುವ ಜೆಡಿಎಸ್‍ನ ತಾಲೂಕು ಅಧ್ಯಕ್ಷ ಅಮ್ಮಂಡ ವಿವೇಕ್ ಮತ್ತಿತರರು ಇವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದರು.
ಜಿಲ್ಲಾಧ್ಯಕ್ಷರಾಗಿದ್ದ ಸಂಕೇತ್ ಪೂವಯ್ಯ ಅವರ ರಾಜೀನಾಮೆ ನಂತರದ ದಿನಗಳಲ್ಲಿ ಜೆಡಿಎಸ್ ಪಕ್ಷ ಜಿಲ್ಲೆಯಲ್ಲಿ ನಾವಿಕನಿಲ್ಲದ ದೋಣಿಯಂತಾಗಿದೆ. ಕುಮಾರಸ್ವಾಮಿ ಸರ್ಕಾರ ಅಧಿಕಾರಕ್ಕೆ ಬಂದ ಉತ್ಸಾಹದಲ್ಲಿದ್ದ ಅಪಾರ ಸಂಖ್ಯೆಯ ಪಕ್ಷದ ಕಾರ್ಯಕರ್ತರಿಗೆ ಜಿಲ್ಲೆಯ ಬೆಳವಣಿಗೆಯಿಂದ ನಿರಾಶೆ ಉಂಟಾಗಿದೆ. ಜಿಲ್ಲೆಯಲ್ಲಿ ಪಕ್ಷದ ಕಾರ್ಯಚಟುವಟಿಕೆಗಳು ಸಂಪೂರ್ಣ ಸ್ತಬ್ಧಗೊಂಡಿದೆ. ಅಧಿಕಾರವಿದ್ದರೂ ಮುಖಂಡರು ಎನಿಸಿಕೊಂಡವರಿಂದ ಸ್ಪಂದನೆ ದೊರಕುತ್ತಿಲ್ಲ. ಇದರಿಂದ ಕಾರ್ಯಕರ್ತರಿಗೆ ತೀವ್ರ ನೋವುಂಟಾಗಿದೆ. ಸಂಕೇತ್ ಪೂವಯ್ಯನವರನ್ನು ಮುಂದುವರೆಸಿ ಇಲ್ಲವೆ ಸರ್ಕಾರ ಮಟ್ಟದಲ್ಲಿ ಇವರಿಗೆ ಉತ್ತಮ ಸ್ಥಾನ ಮಾನಗಳನ್ನು ನೀಡುವ ಮೂಲಕ ಜಿಲ್ಲೆಗೆ ನೂತನ ಅಧ್ಯಕ್ಷರನ್ನು ನೇಮಕ ಮಾಡುವಂತೆ ಜಿಲ್ಲೆಯ ರಾಜಕೀಯ ವಿದ್ಯಾಮಾನಗಳನ್ನು ವಿಶ್ವನಾಥ್ ಅವರೊಂದಿಗೆ ಹೇಳಿಕೊಂಡರು.
ಜಿಲ್ಲೆಯಲ್ಲಿ ಸುರಿದ ಭಾರೀ ಮಳೆಯಿಂದ ತೊಂದರೆಗೀಡಾಗಿರುವ ಸ್ತ್ರೀಶಕ್ತಿ, ಮೈಕ್ರೋ ಫೈನಾನ್ಸ್‍ಗಳಿಂದ ಸಾಲ ಪಡೆದ ಮಹಿಳೆಯರು ಸಾಲವನ್ನು ಕಟ್ಟಲಾಗದೆ ಸಂಕಷ್ಟದಲ್ಲಿದ್ದಾರೆ. ಜಿಲ್ಲೆಯ ಮಟ್ಟಿಗೆ ಸಾಲ ಪಡೆದು ಸಂಕಷ್ಟದಲ್ಲಿರುವ ಮಹಿಳೆಯರ ಸಾಲವನ್ನು ಸಂಪೂರ್ಣ ಮನ್ನಾ ಮಾಡುವಂತೆ ರಾಜ್ಯದ ಮುಖ್ಯಮಂತ್ರಿಗಳಾದ ಕುಮಾರಸ್ವಾಮಿಯವರ ಗಮನಕ್ಕೆ ತರುವಂತೆ ಜೆಡಿಎಸ್ ನಿಯೋಗ ಹೆಚ್.ವಿಶ್ವನಾಥ್ ಅವರನ್ನು ಆಗ್ರಹಿಸಿತು. ರಾಜ್ಯಧ್ಯಕ್ಷರ ಭೇಟಿ ಸಂದರ್ಭ ಕ್ಷೇತ್ರ ಅಧ್ಯಕ್ಷರಾದ ಎಸ್. ಹೆಚ್.ಮತೀನ್ ಹೋಬಳಿ ಅಧ್ಯಕ್ಷ ಮಂಡೇಪಂಡ ಮುತ್ತಪ್ಪ ಮುಖಂಡರಾದ ಕುಯ್ಮಂಡ ರಾಕೇಶ್ ಬಿದ್ದಪ್ಪ,ಚಿಲ್ಲವಂಡ ಗಣಪತಿ,ಫಾಸಿಲ್, ಹಾಜರಿದ್ದರು.