ಮಡಿಕೇರಿ, ಸೆ. 17: ಮನೆಗೆ ಅತಿಥಿಗಳು ವರುಷಕ್ಕೊಮ್ಮೆ..., ಯಾವಗಲಾದರೂ ಒಮ್ಮೆ ಬಂದು ಹೋಗುವದು ರೂಢಿ... ಆದರೆ, ಇಲ್ಲೋರ್ವ ಗಜರಾಜ ವರುಷಕ್ಕೊಮ್ಮೆ ಗ್ರಾಮಗಳಿಗೆ ಭೇಟಿ ನೀಡಿ ಗ್ರಾಮದಲ್ಲಿ ಬೆಳೆದಿರುವ ಬಾಳೆಗಿಡಗಳನ್ನು ತಿಂದುಂಡು ಸಂತೃಪ್ತನಾಗಿ ಹೋಗುವದು ವಾಡಿಕೆಯಾಗಿದೆ.
ಆದರೆ, ಈ ಬಾರಿ ಪ್ರಕೃತಿ ವಿಕೋಪದಿಂದಾಗಿ ಆ ಅತಿಥಿಗೆ ಬಾಳೆಯೂ ಸರಿಯಾಗಿ ಸಿಗದೆ, ತಾನು ಸಂಚರಿಸುವ ಮಾರ್ಗವೂ ಇಲ್ಲದೆ ಎಲ್ಲೆಲ್ಲೋ ನಡೆದು ಹೋಗಿದ್ದಾನೆ...
ಮಕ್ಕಂದೂರು ಗ್ರಾ.ಪಂ. ವ್ಯಾಪ್ತಿಯ ಮುಕ್ಕೋಡ್ಲು, ಹೆಮ್ಮೆತ್ತಾಳು, ಮೇಘತ್ತಾಳುವಿಗಾಗಿ ಕಾಲೂರು ಕಡೆಗೆ ವರ್ಷಂಪ್ರತಿ ಒಂದು ಬಾರಿ ಮಾತ್ರ ಕಾಡಾನೆಯೊಂದು ಸಂಚರಿಸುತ್ತದೆ. ಹಲವಾರು ವರ್ಷಗಳಿಂದ ಈ ಆನೆಯ ನಡಿಗೆ ಈ ಗ್ರಾಮದಲ್ಲಿದೆ. ಈ ಬಾರಿ ಕೂಡ ಈ ಗಜರಾಜ ಬಂದಿದ್ದಾನೆ.., ಪ್ರಕೃತಿ ವಿಕೋಪಕ್ಕೆ ಈ ನಾಡು ಸಂಪೂರ್ಣ ನಲುಗಿ ಹೋಗಿದ್ದರೂ, ಅದೆಲ್ಲೋ ಮರೆಯಲ್ಲಿದ್ದ ಈ ಕರಿ ವಾರದ ಹಿಂದೆ ತನ್ನ ಎಂದಿನ ಮಾರ್ಗದಲ್ಲಿ ಬರಲು ಪ್ರಯತ್ನಿಸಿದ್ದಾನೆ.
ಆದರೆ, ಮಾರ್ಗದ ದಿಕ್ಕೇ ಬದಲಾಗಿರುವದರಿಂದ ಸರಿಯಾಗಿದ್ದ ಸ್ಥಳದಲ್ಲಿ ನಡೆದು ಎಲ್ಲೋ ಒಂದು ಕಡೆ ಸಿಕ್ಕಿದ ಬಾಳೆಯನ್ನೊಂದಿಷ್ಟು ತಿಂದು ಹೋಗಿದ್ದಾನೆ. ಬಹುಶಃ ಊರಿನ ಪರಿಸ್ಥಿತಿ, ಜನರು ಎದುರಿಸುತ್ತಿರುವ ಸಂಕಷ್ಟ ಈ ಕಾಡಿನ ಜೀವಕ್ಕೂ ಅರಿವಾಗಿರಬೇಕು. ಅದಕ್ಕೆ ಊರಲ್ಲಿ ನೆಲೆನಿಂತು ಮೊದಲೇ ಭಯ-ಭೀತರಾಗಿರುವ ಜನರಿಗೆ ಮತ್ತೆ ಭಯ ಹುಟ್ಟಿಸದೇ ತನ್ನ ಪಾಡಿಗೆ ತಾನು ತೆರಳಿದೆ...!
-ಸಂತೋಷ್