ವೀರಾಜಪೇಟೆ, ಸೆ. 17: ಪಟ್ಟಣ ಪಂಚಾಯಿತಿ ಕಳೆದ 9 ತಿಂಗಳಿಂದ ವೇತನ ನೀಡಲಿಲ್ಲ ಎಂದು ಆರೋಪಿಸಿ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿರುವ ಪೌರ ಕಾರ್ಮಿಕರು ಪಟ್ಟಣ ಪಂಚಾಯತಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.
ಸರ್ಕಾರ 4.12.07 ರಂದು 700 ಜನರಿಗೆ ಓರ್ವ ಪೌರ ಕಾರ್ಮಿಕ ಎಂದು ಅಂದಿನ ಸರ್ಕಾರದ ಪೌರಾಡಳಿತ ಸಚಿವ ಈಶ್ವರ್ ಖಂಡ್ರೆ ಹೊರಡಿಸಿದ ಸುತ್ತೋಲೆ ಮೇರೆಗೆ ಟೆಂಡರ್ ಮೂಲಕ ಗುತ್ತಿಗೆ ಆಧಾರದಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಒಟ್ಟು 33 ಮಂದಿ ಪೌರಕಾರ್ಮಿಕರು ಸಂಬಳ ಇಲ್ಲದೆ ದುಡಿಯುತ್ತಿದ್ದಾರೆ. ಇದೇ ವೃತ್ತಿಯನ್ನು ನಂಬಿರುವ ಪೌರ ಕಾರ್ಮಿಕರು ಬೇರೆಡೆಗೆ ಕೆಲಸಕ್ಕೆ ತೆರಳಲು ಸಾಧ್ಯವಾಗದೆ ಸಂಬಳ ಇಲ್ಲದೆ ದುಡಿಯಲು ಆಗದೆ ಅತ್ರಂತ ಪರಿಸ್ಥಿತಿ ಎದುರಿಸುತ್ತಿದ್ದಾರೆ. ಸರಕಾರ ಪೌರ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವ ತನಕ ಮುಷ್ಕರ ಮುಂದುವರೆಸುವದಾಗಿ ಪೌರ ಕಾರ್ಮಿಕರ ಸಂಘಟನೆಯ ಅಧ್ಯಕ್ಷ ನವೀನ್ ಕಮಾರ್ ತಿಳಿಸಿದರು.
ಶಾಸಕರ ಭೇಟಿ: ಪೌರಕಾರ್ಮಿಕರು ಪ್ರತಿಭಟನೆ ನಡೆಸುತ್ತಿರುವ ಸ್ಥಳಕ್ಕೆ ವೀರಾಜಪೇಟೆ ಶಾಸಕ ಬೋಪಯ್ಯ ಭೇಟಿ ನೀಡಿ ಮಾತನಾಡಿ, ಇದು ಸರ್ಕಾರದ ಮಟ್ಟದಲ್ಲಿ ಇತ್ಯರ್ಥ ಆಗಬೇಕಿರುವದರಿಂದ ಈಗಿನ ಪೌರಾಡಳಿತ ಸಚಿವರೊಂದಿಗೆ ಚರ್ಚಿಸಿ ನಿಮ್ಮ ಬೇಡಿಕೆಗಳ ಈಡೇರಿಕೆಗಾಗಿ ಪ್ರಯತ್ನ ಪಡುವದಾಗಿ ಭರವಸೆ ನೀಡಿದರು.
ಧರಣಿಗೆ ಬೆಂಬಲ: ಕಾಂಗ್ರೆಸ್ ಸರ್ಕಾರ ಆಡಳಿತದಲ್ಲಿದ್ದಾಗ ಅಂದಿನ ಮಂತ್ರಿ ಈಶ್ವರ್ ಖಂಡ್ರೆ ಪೌರ ಕಾರ್ಮಿಕರನ್ನು ವಜಾಗೊಳಿಸಿರುವದು, ಕಾಂಗ್ರೆಸ್ ಸರ್ಕಾರ ತೆಗೆದುಕೊಂಡಿರುವ ನಿರ್ಧಾರವಾಗಿದ್ದು, ಸಮ್ಮಿಶ್ರ ಸರ್ಕಾರದ ಪಕ್ಷಗಳ ಪ್ರತಿನಿಧಿಗಳಾದ ಕಾಂಗ್ರೆಸ್‍ನ ಮಾಜಿ ಸದಸ್ಯರುಗಳಾದ ಸಿ.ಕೆ. ಪ್ರಥ್ವಿನಾಥ್, ಡಿ.ಪಿ. ರಾಜೇಶ್, ಮಹಮದ್ ರಾಫಿ, ಶೀಭಾ ಪ್ರಥ್ವಿನಾಥ್, ರಂಜಿ ಪೂಣಚ್ಚ ಜೆಡಿಎಸ್‍ನ ನಾಗಮ್ಮ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಿದರು.
ಶುಚಿತ್ವ ಮುಂದುವರಿಕೆ: ಪಟ್ಟಣ ಪಂಚಾಯಿತಿಯಲ್ಲಿ ಉದ್ಯೋಗವಿಲ್ಲದೆ ಅತಂತ್ರ ಪರಿಸ್ಥಿತಿಯಲ್ಲಿರುವ 33ಮಂದಿ ಪೌರ ಕಾರ್ಮಿಕರುಗಳು ಮುಷ್ಕರದಲ್ಲಿ ತೊಡಗಿದರೂ ವೀರಾಜಪೇಟೆ ಪಟ್ಟಣದ ಸ್ವಚ್ಛತೆ, ಕಸ ವಿಲೇವಾರಿಗೆ ಯಾವದೇ ತೊಂದರೆಯಾಗಿಲ್ಲ. ಪ.ಪಂ ಖಾಯಂ ಕಾರ್ಮಿಕರು ಕೆಲಸ ನಿರ್ವಹಿಸಿದ್ದಾರೆ.