ಮಡಿಕೇರಿ, ಸೆ. 16: ಕೊಡಗು ಜಿಲ್ಲೆಯ ರಸ್ತೆಗಳ ಮುಖಾಂತರ ಅಧಿಕ ಭಾರ ತುಂಬಿದ ಭಾರೀ ಸರಕು ಸಾಗಾಣೆ ವಾಹನಗಳು ದಿನನಿತ್ಯ ಸಂಚರಿಸುತ್ತಿರುವದರಿಂದ ಮತ್ತು ಭೂಕುಸಿತದಿಂದಾಗಿ ಸಾಕಷ್ಟು ಅಪಘಾತಗಳಿಗೆ ಕಾರಣವಾಗುತ್ತಿರುತ್ತದೆ. ಅಲ್ಲದೆ, ಜಿಲ್ಲೆಯ ರಸ್ತೆಗಳು ಕಿರಿದಾಗಿದ್ದು, ರಸ್ತೆಯ ಇಕ್ಕೆಲಗಳು ಭಾರ ತಡೆಯುವ ಕ್ಷಮತೆ ಕ್ಷೀಣಿಸಿರುತ್ತದೆ. ಸದರಿ ಭಾಗಗಳಲ್ಲಿ ಮರದ ದಿಮ್ಮಿಗಳನ್ನು ಸಾಗಿಸುವ ಲಾರಿಗಳು ರಸ್ತೆಯ ಶೋಲ್ಡರ್‍ಗಳನ್ನು ಹಾನಿ ಮಾಡುತ್ತಿದ್ದು, ಸಾರ್ವಜನಿಕ ವಾಹನ ಸಂಚಾರಕ್ಕೆ ಧಕ್ಕೆ ಉಂಟಾಗುತ್ತಿರುವದು ಕಂಡು ಬಂದಿರುವದರಿಂದ ಪ್ರಯಾಣಿಕರ ಸುರಕ್ಷತೆ ಮತ್ತು ಸಾರ್ವಜನಿಕ ಆಸ್ತಿಗಳ ರಕ್ಷಣೆಯ ಹಿತದೃಷ್ಟಿಯನ್ನು ಗಮನದಲ್ಲಿರಿಸಿ ಕೊಂಡು ಕೊಡಗು ಜಿಲ್ಲೆಯಾದ್ಯಂತ ಮರಳು ಮತ್ತು ಮರದ ದಿಮ್ಮಿಗಳ ಸಾಗಾಣಿಕೆಯನ್ನು ಅಕ್ಟೋಬರ್ 29ರವರೆಗೆ ನಿಷೇಧಿಸಲಾಗಿದೆ.

ಜಿಲ್ಲೆಯಲ್ಲಿ ಈ ಬಾರಿ ಅತಿವೃಷ್ಟಿಯಿಂದ ಜಿಲ್ಲೆಯ ಹಲವು ಭಾಗಗಳಲ್ಲಿ ಸಿಲ್ವರ್ ಓಕ್ ಮುಂತಾದ ಮರಗಳು ಬಿದ್ದಿವೆ. ರಸ್ತೆಗಳಲ್ಲಿ ಹಾಗೂ ಇನ್ನಿತರೆ ಭಾಗಗಳಲ್ಲಿ ಬಿದ್ದಿದ್ದ ಈ ಮರಗಳನ್ನು ಕಡಿದು ಸಾರ್ವಜನಿಕ ಸಂಚಾರಕ್ಕೆ ಅವಕಾಶ ಕಲ್ಪಿಸಬೇಕಾಗಿದ್ದು, ಅತಿವೃಷ್ಟಿಯಿಂದ ಹಾನಿಗೀಡಾಗಿರುವ ಜಿಲ್ಲೆಯ ಮುಖಾಂತರ ಹಾದು ಹೋಗಿರುವ ರಾಷ್ಟ್ರೀಯ ಹೆದ್ದಾರಿ, ರಾಜ್ಯ ಹೆದ್ದಾರಿ, ಗ್ರಾಮಾಂತರ ರಸ್ತೆಗಳ ದುರಸ್ಥಿ ಕಾರ್ಯ ಪ್ರಗತಿಯಲ್ಲಿರುವದ ರಿಂದ ಈ ರಸ್ತೆಗಳಲ್ಲಿ ಸಿಲ್ವರ್ ಓಕ್ ಮರಗಳನ್ನು ಸಾಗಿಸುವ ಬಗ್ಗೆ ಸಂಬಂಧಪಟ್ಟ ಇಲಾಖೆಗಳಾದ ಅರಣ್ಯ, ಆರಕ್ಷಕ, ರಾಷ್ಟ್ರೀಯ ಹೆದ್ದಾರಿ ವಿಭಾಗ, ಪ್ರಾದೇಶಿಕ ಸಾರಿಗೆ ಇಲಾಖೆ, ಲೋಕೋಪಯೋಗಿ, ಜಿಲ್ಲಾ ಪಂಚಾಯತ್ ಇಂಜಿನಿಯರಿಂಗ್ ವಿಭಾಗ ಮುಂತಾದ ಇಲಾಖೆಗಳ ಅಧಿಕಾರಿಗಳ ಸಭೆ ಕರೆದು ಚರ್ಚಿಸಿ, ಇಲಾಖಾವಾರು ಅಭಿಪ್ರಾಯ ನೀಡಲು ಸೂಚಿಸಲಾಗಿದ್ದು, ಅದರಂತೆ, ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳು ಅಭಿಪ್ರಾಯ ಸಲ್ಲಿಸಿದ ಅಭಿಪ್ರಾಯವನ್ನು ಪರಿಶೀಲಿಸಲಾಗಿದ್ದು, ಜಿಲ್ಲೆಯ ರಸ್ತೆಗಳ ದುರಸ್ಥಿ ಕಾರ್ಯ ಪ್ರಗತಿಯಲ್ಲಿದ್ದು, ಮಧ್ಯಮ ಸರಕು ವಾಹನಗಳವರೆಗಿನ (ಒಉಗಿ) ಸಂಚಾರಕ್ಕೆ ಮಾತ್ರ ಯೋಗ್ಯವಿರುವದ ರಿಂದ ಹಾಗೂ ಸಿಲ್ವರ್ ಓಕ್ ಮರಗಳನ್ನು ಸಾಗಿಸಲು ಅರಣ್ಯ ಇಲಾಖೆ ವತಿಯಿಂದ ನಿರ್ಬಂಧವಿರದ ಕಾರಣ ಮತ್ತು

(ಮೊದಲ ಪುಟದಿಂದ) ಜಿಲ್ಲೆಯಲ್ಲಿ ಪ್ರಸ್ತುತ ಮಳೆ ಕಡಿಮೆಯಾಗಿರುವದರಿಂದ ಜಿಲ್ಲೆಯ ಸಾರ್ವಜನಿಕ ಆಸ್ತಿಪಾಸ್ತಿಗಳ ಸುರಕ್ಷತೆಯ ಹಿತದೃಷ್ಟಿಯಿಂದ ಹೊರಡಿಸಲಾಗಿದ್ದ ಆದೇಶವನ್ನು ಭಾಗಶಃ ಮಾರ್ಪಡಿಸಿ, ಜಿಲ್ಲೆಯಲ್ಲಿ ಹಾಲಿ ಅತಿವೃಷ್ಟಿಯಿಂದ ಬಿದ್ದಂತಹ ಸಿಲ್ವರ್ ಓಕ್ ಮರಗಳನ್ನು ಮಧ್ಯಮ ಸರಕು ವಾಹನ (ಒಉಗಿ- ವಾಹನ ಮತ್ತು ಸರಕು ಒಟ್ಟು ಸೇರಿ 12,000 ಕೆ.ಜಿ. ಮೀರದಂತೆ ಗರಿಷ್ಠ ತೂಕ ಹೊಂದಿರುವ ವಾಹನ)ಗಳಲ್ಲಿ ಸಾಗಿಸಲು ಜಿಲ್ಲೆಯಲ್ಲಿ ರಸ್ತೆಗಳು ಪ್ರಕೃತಿ ವಿಕೋಪದಿಂದ ಹಾನಿಯಾಗಿದ್ದು, ಪ್ರಸ್ತುತ ದುರಸ್ತಿ ಕಾರ್ಯ ನಡೆಯುತ್ತಿ ರುವ ರಸ್ತೆಗಳನ್ನು ಹೊರತುಪಡಿಸಿ ಷರತ್ತುಬದ್ದವಾಗಿ ಈ ಕೆಳಗೆ ತೋರಿಸಿರುವ ಮಾರ್ಗಗಳಲ್ಲಿ ಮಾತ್ರ ಸಂಚರಿಸಲು ತಾ. 16 ರಿಂದ ಅಕ್ಟೋಬರ್ 29 ರವರೆಗೆ ಅನುಮತಿ ನೀಡಲಾಗಿದೆ.

ಈ ಆದೇಶದ ಉಲ್ಲಂಘನೆಯಾ ದಲ್ಲಿ ಕಠಿಣ ಕಾನೂನು ಕ್ರಮ ಜರುಗಿಸಲು ಸಂಬಂಧಪಟ್ಟ ಇಲಾಖೆಗಳ ಅಧಿಕಾರಿಗಳಾದ ಅರಣ್ಯ, ಆರಕ್ಷಕ ಮತ್ತು ಸಾರಿಗೆ ಇಲಾಖೆಗಳ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಪಿ.ಐ. ಶ್ರೀವಿದ್ಯಾ ನಿರ್ದೇಶನ ನೀಡಿದ್ದಾರೆ.

ಮಡಿಕೇರಿ/ವೀರಾಜಪೇಟೆ ತಾಲೂಕಿನಲ್ಲಿ ಹುಣಸೂರು-ತಲಕಾವೇರಿ ರಸ್ತೆ (ತಿತಿಮತಿ-ವೀರಾಜಪೇಟೆ, ಕದನೂರು-ಕಡಂಗ-ಕಕ್ಕಬ್ಬೆ-ಅಯ್ಯಂಗೇರಿ-ಭಾಗಮಂಡಲ-ತಲಕಾವೇರಿ), ಸೋಮವಾರಪೇಟೆ ತಾಲೂಕಿನಲ್ಲಿ ವೀರಾಜಪೇಟೆ-ಬೈಂದೂರ್ ರಾಜ್ಯ ಹೆದ್ದಾರಿ ರಸ್ತೆ (ಮಾದಾಪುರದಿಂದ ಕೊಡ್ಲಿಪೇಟೆ), ಬೆಂಗಳೂರು-ಜಾಲ್ಸೂರು ರಸ್ತೆ (ಬಾಣಾವಾರದಿಂದ ಸೋಮವಾರ ಪೇಟೆ), ಬೇಲೂರು-ಸೋಮವಾರಪೇಟೆ-ಕೂಡಿಗೆ ರಸ್ತೆ (ಕೊರ್‍ಕೊಲ್ಲಿದಿಂದ ಕೂಡಿಗೆ), ಹಿರಿಸಾವೆ-ಚೆಟ್ಟಳ್ಳಿ ರಸ್ತೆ (ಮಾದಾಪುರ ದಿಂದ ಸುಂಟಿಕೊಪ್ಪ), ಕೊಣನೂರು - ಮಾಕುಟ್ಟ ರಸ್ತೆ (ಕೊಣನೂರು ಸಿದ್ದಾಪುರ).

ಮಡಿಕೇರಿ ತಾಲೂಕಿನಲ್ಲಿ ಬೆಟ್ಟಗೇರಿ-ನಾಲ್ಕುನಾಡು ರಸ್ತೆ (ಬೆಟ್ಟಗೇರಿ-ನಾಪೋಕ್ಲು), ಹಾಕತ್ತೂರು-ಅಬ್ಯತ್‍ಮಂಗಲ ರಸ್ತೆ, ಕಡಂಗ-ಬೆಳ್ಳುಮಾಡು-ನಾಪೋಕ್ಲು ರಸ್ತೆ, (ಬೆಳ್ಳುಮಾಡು-ನಾಪೋಕ್ಲು), ಕಕ್ಕಬ್ಬೆ-ನೆಲಜಿ ರಸ್ತೆ, ಕತ್ತಲೆಕಾಡು-ಮರಗೋಡು-ಕೊಂಡಗೇರಿ ರಸ್ತೆ, ಮೂರ್ನಾಡು-ನಾಪೋಕ್ಲು ರಸ್ತೆ, ಮೂರ್ನಾಡು-ಬಲಮರಿ-ಪಾರಾಣೆ ರಸ್ತೆ.

ಸೋಮವಾರಪೇಟೆ ತಾಲೂಕಿನಲ್ಲಿ ಗೋಪಾಲಪುರ-ಶನಿವಾರಸಂತೆ-ಬಾಣಾವರ-ಹೆಬ್ಬಾಲೆ ರಸ್ತೆ, ಆಲೂರು-ಅಂಕನಹಳ್ಳಿ ರಸ್ತೆ.

ವೀರಾಜಪೇಟೆ ತಾಲೂಕಿನಲ್ಲಿ ಅಮ್ಮತ್ತಿ-ಮೂರ್ನಾಡು ರಸ್ತೆ, ಕುಟ್ಟ-ನಾಗರಹೊಳೆ ರಸ್ತೆ, ಚೆನ್ನಂಗೊಲ್ಲಿ-ಬಾಳೆಲೆ ರಸ್ತೆ, ಸಿದ್ದಾಪುರ-ಮೈಸೂರು ರಸ್ತೆ, ಟಿ.ಶೆಟ್ಟಿಗೇರಿ-ಮರೆನಾಡು ರಸ್ತೆ, ಪೊನ್ನಂಪೇಟೆ-ಈಚೂರು-ಹಾತೂರು ರಸ್ತೆ, ಕುಮ್ಮೆಹೊಳೆ-ಹಾತೂರು ರಸ್ತೆ, ನಾಗರಹೊಳೆ-ಮೂರ್ಕಲ್ಲು ರಸ್ತೆ, ತಿತಿಮತಿ-ಕೋಣನಕಟ್ಟೆ ರಸ್ತೆ, ಬಾಳೆಲೆ-ಮೂರ್ಕಲ್ಲು ರಸ್ತೆ, ಬಿಟ್ಟಂಗಾಲ-ಕೂಟಿಯಾಲ ರಸ್ತೆ, ಹರಿಹರ-ಬಲ್ಯಮಂಡೂರು ರಸ್ತೆ.