ವೀರಾಜಪೇಟೆ, ಸೆ.16: ವೀರಾಜಪೇಟೆ ಪಟ್ಟಣ ಪಂಚಾಯಿತಿಯಲ್ಲಿ ಶುಚಿತ್ವ ವಿಭಾಗದಲ್ಲಿ ಸೇವೆ ಸಲ್ಲಿಸುತ್ತಿದ್ದ 11ಮಂದಿ ಪೌರ ಕಾರ್ಮಿಕರು ಹಾಗೂ 22 ಮಂದಿ ಗುತ್ತಿಗೆ ಆಧಾರಿತ ಪೌರ ಕಾರ್ಮಿಕರಿಗೆ ಕಳೆದ 9ತಿಂಗಳುಗಳಿಂದಲೂ ವೇತನ ನೀಡುತ್ತಿಲ್ಲ ಎಂದು ಪಂಚಾಯಿತಿಯ ಪೌರ ಕಾರ್ಮಿಕರ ಸಂಘಟನೆ ದೂರಿದ್ದು ಸಂಕಷ್ಟದಲ್ಲಿರುವ 33ಮಂದಿ ಕಾರ್ಮಿಕರಿಗೆ ತಕ್ಷಣ ವೇತನ ಪಾವತಿಸುವದು ಹಾಗೂ ಉದ್ಯೋಗ ಖಾತರಿಗೊಳಿಸುವಂತೆ ಆಗ್ರಹಿಸಿ ತಾ.17ರ ಬೆಳಿಗ್ಗೆ 11 ಗಂಟೆಯಿಂದ ಪಟ್ಟಣ ಪಂಚಾಯಿತಿ ಕಚೇರಿ ಮುಂದೆ ಮುಷ್ಕರ ಹೂಡಲು ಸಿದ್ದತೆ ನಡೆಸಲಾಗಿದೆ ಎಂದು ಸಂಘಟನೆಯ ಮುಖ್ಯಸ್ಥರಾದ ನವೀನ್ ಕುಮಾರ್ ತಿಳಿಸಿದ್ದಾರೆ.33 ಮಂದಿ ಪೌರ ಕಾರ್ಮಿಕರ ಮುಷ್ಕರದ ಸಂಬಂಧದಲ್ಲಿ ಪಟ್ಟಣ ಪಂಚಾಯಿತಿಯ ಆಡಳಿತಾಧಿಕಾರಿ ಆರ್.ಗೋವಿಂದರಾಜು ಹಾಗೂ ಮುಖ್ಯಾಧಿಕಾರಿ ಎನ್.ಪಿ. ಹೇಮ್‍ಕುಮಾರ್ ಅವರಿಗೆ ಖುದ್ದು ಮನವಿ ಸಲ್ಲಿಸಲಾಗಿದೆ. ರಾಜ್ಯ ಸರಕಾರದ ಪೌರಾಡಳಿತ ಸಚಿವಾಲಯದ 2017ರ ಡಿಸೆಂಬರ್ ಆದೇಶ ಹೊರಡಿಸಿ ನಿಗಧಿತ ಪೌರ ಕಾರ್ಮಿಕರು ಮಾತ್ರ ಪಟ್ಟಣ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುವಂತೆ ಸೂಚಿಸಲಾಗಿರುವದರಿಂದ ಈವರೆಗೆ ಪಟ್ಟಣ ಪಂಚಾಯಿತಿಯಲ್ಲಿ ಸೇವೆ ಸಲ್ಲಿಸುತ್ತಿದ್ದ 33ಮಂದಿ ಪೌರ ಕಾರ್ಮಿಕರು ಅತಂತ್ರರಾಗಿದ್ದಾರೆ. ಇವರುಗಳಿಗೆ ಜೀವನೋಪಾಯಕ್ಕಾಗಿ ಬೇರೆ ಮಾರ್ಗವಿಲ್ಲ. ವೇತನವಿಲ್ಲದೆ ಮುಂದುವರೆಯಬೇಕಾಗಿದೆ. ಇದರಿಂದ ಪೌರ ಕಾರ್ಮಿಕರ ಸುಮಾರು 25ಕ್ಕೂ ಅಧಿಕ ಕುಟುಂಬಗಳು ಬೀದಿಗೆ ಬಂದಿವೆ. ಜನಪ್ರತಿನಿಧಿಗಳಿಗೆ, ಉನ್ನತಾಧಿಕಾರಿಗಳಿಗೆ ಮನವಿ ನೀಡಿದರೂ ಯಾವದೇ ಪ್ರಯೋಜನವಾಗಿಲ್ಲ ಎಂದು ಮುಷ್ಕರದ ಸಂಘಟಕರುಗಳಾದ ಮುರುಗೇಶ್, ವಿನೋದ್ ಕುಮಾರ್, ಮಣಿ, ಸುಬ್ಬಮ್ಮ, ರಾಧ, ನಾಗಮಣಿ, ಸರಸ್ವತಿ,
(ಮೊದಲ ಪುಟದಿಂದ) ಶಾಂತಿ ಇತರ ಕಾರ್ಮಿಕರು ಮಾಧ್ಯಮದವರೊಂದಿಗೆ ತಮ್ಮ ಅಳಲನ್ನು ತೋಡಿಕೊಂಡರು.
ಮುಖ್ಯಾಧಿಕಾರಿ ಪ್ರತಿಕ್ರಿಯೆ
ಕಳೆದ ಹತ್ತು ತಿಂಗಳುಗಳ ಹಿಂದೆ ಸರಕಾರದ ಆದೇಶದಂತೆ ಕೆಲವು ಹೆಚ್ಚುವರಿ ಪೌರ ಕಾರ್ಮಿಕರಿಗೆ ಉದ್ಯೋಗಕ್ಕೆ ಕಡಿವಾಣ ಹಾಕಲಾಗಿದೆ. ಇದು ರಾಜ್ಯದಾದ್ಯಂತ ಎಲ್ಲ ಪುರಸಭೆ, ಪಟ್ಟಣ ಪಂಚಾಯಿತಿಗಳಿಗೆ ಅನ್ವಯವಾಗಿದ್ದು ವೀರಾಜಪೇಟೆ ಪಟ್ಟಣ ಪಂಚಾಯಿತಿಗೂ ಅನ್ವಯವಾಗಿದೆ. ಇದು ರಾಜ್ಯ ಸರಕಾರದ ಆದೇಶವಾಗಿರುವದರಿಂದ ತಾಲೂಕು ಆಡಳಿತವಾಗಲಿ ಇಲ್ಲವೇ ಜಿಲ್ಲಾಡಳಿತವಾಗಲಿ ಏನು ಮಾಡುವಂತಿಲ್ಲ. ಇದನ್ನು ಕಾರ್ಮಿಕರಿಗೂ ತಿಳಿಸಲಾಗಿದೆ. ಇದು ಸರಕಾರದ ಮಟ್ಟದಲ್ಲಿ ಆದೇಶ ತಿದ್ದುಪಡಿಯಾಗಿ ಉದ್ಯೋಗ ಕಳೆದುಕೊಂಡಿರುವವರ ನೇಮಕಾತಿಗೆ ಹೊಸ ಆದೇಶವನ್ನು ಸರಕಾರವೇ ಹೊರಡಿಸಬೇಕಾಗಿದೆ. ಪೌರ ಕಾರ್ಮಿಕರು ನೇರವಾಗಿ ಸರಕಾರಕ್ಕೆ ಮನವಿ ಸಲ್ಲಿಸಿ ಈ ಬೇಡಿಕೆಗೆ ಪುರಸ್ಕಾರ ಪಡೆಯಬೇಕಾಗಿದೆ. ಪೌರ ಕಾರ್ಮಿಕರ ಸಂಘಟನೆಗೆ ಈ ಸಂಬಂಧದಲ್ಲಿ ಮಾಹಿತಿ ಒದಗಿಸಲಾಗಿದೆ ಎಂದು ಮುಖ್ಯಾಧಿ ಕಾರಿ ಎನ್.ಪಿ.ಹೇಮ್‍ಕುಮಾರ್ ಪೌರ ಕಾರ್ಮಿಕರ ಮನವಿಗೆ ಪ್ರತಿಕ್ರಿಯೆ ನೀಡಿದರು.