ಮಡಿಕೇರಿ, ಸೆ. 16: ಜಿಲ್ಲೆಯಾದ್ಯಾಂತ ಭಾರೀ ಮಳೆಯಿಂದಾಗಿ ಆಗಸ್ಟ್ ತಿಂಗಳಲ್ಲಿ ಹಲವು ಭಾಗಗಳಲ್ಲಿ ತೀವ್ರ ಭೂಕುಸಿತ ಉಂಟಾಗಿತ್ತು, ಭೂಕುಸಿತ ಹಾಗೂ ಪ್ರವಾಹದಿಂದಾಗಿ ಹಲವು ಮಂದಿ ಸಂತ್ರಸ್ತರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಿ, ಪುನರ್ವಸತಿ ಕಲ್ಪಿಸಲಾಗುತ್ತಿದೆ.
ಸಂತ್ರಸ್ತರಿಗೆ ವಿತರಿಸಲು ರಾಜ್ಯ, ಜಿಲ್ಲೆಯ ವಿವಿಧೆಡೆಗಳಿಂದ, ಜನಪ್ರತಿನಿಧಿಗಳಿಂದ, ಸಾರ್ವಜನಿಕರಿಂದ, ಸಂಘ ಸಂಸ್ಥೆಗಳಿಂದ ಸ್ವೀಕೃತವಾಗುತ್ತಿರುವ ಪರಿಹಾರ ಸಾಮಗ್ರಿಗಳನ್ನು ಜಿಲ್ಲೆಯ ದಾಸ್ತಾನು ಕೇಂದ್ರಗಳಾದ ನಗರದ ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ನೂತನ ಕಟ್ಟಡ, ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ಗೋದಾಮು, ಕುಶಾಲನಗರ ಮತ್ತು ಪೊನ್ನಂಪೇಟೆಯ ಹಳೆ ನ್ಯಾಯಾಲಯ ಕಟ್ಟಡ ಕೇಂದ್ರಗಳಲ್ಲಿ ದಾಸ್ತಾನು ಮಾಡಲು ವ್ಯವಸ್ಥೆ ಮಾಡಲಾಗಿದೆ.
ತಾ. 14 ರಂದು ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ನೆರೆ ಸಂತ್ರಸ್ತರಿಗೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಹಾಗೂ ಕಂದಾಯಾಧಿಕಾರಿಗಳ, ಗ್ರಾಮ ಪಂಚಾಯಿತಿ ಜನಪ್ರತಿನಿಧಿಗಳ ಮುಖಾಂತರ ಹಂಚಿಕೆ ಮಾಡಲು 6 ಲಘು ವಾಹನಗಳಲ್ಲಿ ವ್ಯವಸ್ಥೆ ಮಾಡಲಾಗಿದೆ.
ಅವಶ್ಯವಿರುವ ಸಾಮಗ್ರಿಗಳು : ಗೋದಿ ಹಿಟ್ಟು 20 ಕೆ.ಜಿ., 10 ಲೀಟರ್ ಎಣ್ಣೆ, 10 ಕೆ.ಜಿ. ತೊಗರಿ ಬೆಳೆ, 29 ಬಾಕ್ಸ್ ಕುಡಿಯುವ ನೀರಿನ ಬಾಟಲಿ, 15 ಬಾಕ್ಸ್ ಬಿಸ್ಕೆಟ್ ಜಿಲ್ಲಾಡಳಿತದ ವತಿಯಿಂದ ಸಂತ್ರಸ್ತರಿಗೆ ತಾ. 14 ರಂದು ವಿತರಣೆ ಮಾಡಲಾಗಿದೆ.
ಸಂತ್ರಸ್ತರ ವಿವರ: ಮಡಿಕೇರಿ ತಾಲೂಕಿನ 10 ಪರಿಹಾರ ಕೇಂದ್ರಗಳಲ್ಲಿ 333 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 392 ಪುರುಷರು, ಮತ್ತು 435 ಮಹಿಳೆಯರು ಸೇರಿದಂತೆ 827 ಜನ ಸಂತ್ರಸ್ತರಿದ್ದಾರೆ.
ಸೋಮವಾರಪೇಟೆ ತಾಲೂಕಿನ ಪರಿಹಾರ ಕೇಂದ್ರದಲ್ಲಿ 119 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 151 ಪುರುಷರು ಮತ್ತು 142 ಮಹಿಳೆಯರು ಸೇರಿದಂತೆ ಒಟ್ಟು 293 ಜನ ಸಂತ್ರಸ್ತರಿದ್ದಾರೆ.
ಒಟ್ಟಾರೆ ಜಿಲ್ಲೆಯಲ್ಲಿರುವ 11 ಪರಿಹಾರ ಕೇಂದ್ರಗಳಲ್ಲಿ ಒಟ್ಟು 452 ಕುಟುಂಬಗಳು ಆಶ್ರಯ ಪಡೆಯುತ್ತಿದ್ದು, ಅವರಲ್ಲಿ 543 ಪುರುಷರು ಮತ್ತು 577 ಮಹಿಳೆಯರು ಸೇರಿದಂತೆ ಒಟ್ಟು 1120 ಜನ ಸಂತ್ರಸ್ತರಿದ್ದಾರೆ ಎಂದು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ ಅವರು ತಿಳಿಸಿದ್ದಾರೆ.