ಸೋಮವಾರಪೇಟೆ, ಸೆ. 16: ಕರ್ನಾಟಕ ರಕ್ಷಣಾ ವೇದಿಕೆಯ ತಾಲೂಕು ಘಟಕದ ಈರ್ವರು ಅಧ್ಯಕ್ಷರಿಂದಾಗಿ ಇಡೀ ಸಂಘಟನೆಗೆ ಕಪ್ಪುಚುಕ್ಕೆ ಬಂದಂತಾಗಿದ್ದು, ಈರ್ವರನ್ನು ಸಂಘಟನೆಯಿಂದ ಹೊರಹಾಕ ದಿದ್ದರೆ, ನಗರ ಘಟಕಕ್ಕೆ ಸಾಮೂಹಿಕ ರಾಜೀನಾಮೆ ನೀಡುವದಾಗಿ ನಗರ ಘಟಕದ ಪ್ರಮುಖರು ತಿಳಿಸಿದ್ದಾರೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ನಗರ ಘಟಕದ ಅಧ್ಯಕ್ಷ ಮಂಜುನಾಥ್, ಸಂತ್ರಸ್ತರಿಗೆ ನೀಡಿದ ಪರಿಹಾರ ಹಣವನ್ನು ಬಲವಂತವಾಗಿ ವಸೂಲಿ ಮಾಡಿ, ಜಾತಿ ನಿಂದನೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಕರವೇ ತಾಲೂಕು ಅಧ್ಯಕ್ಷ ದೀಪಕ್, ಮಹಿಳಾ ಘಟಕದ ಅಧ್ಯಕ್ಷೆ ರೂಪಾ ಅವರುಗಳನ್ನು ತಕ್ಷಣವೇ ವೇದಿಕೆಯಿಂದ ವಜಾಗೊಳಿಸಬೇಕೆಂದು ಈಗಾಗಲೇ ಜಿಲ್ಲೆ ಹಾಗೂ ರಾಜ್ಯ ಘಟಕಕ್ಕೆ ಮನವಿ ಸಲ್ಲಿಸಲಾಗಿದೆ. ಈ ಬಗ್ಗೆ ನಿರ್ಲಕ್ಷ್ಯ ಕಂಡುಬಂದಲ್ಲಿ ನಾವುಗಳು ಸಂಘಟನೆಯಿಂದ ಹೊರಬರುವದಾಗಿ ಹೇಳಿದರು.

ಕರವೇ ರಾಜ್ಯಾಧ್ಯಕ್ಷರು ಸೋಮವಾರಪೇಟೆಗೆ ಭೇಟಿ ನೀಡಿದ ಸಂದರ್ಭ ನಗರ ಘಟಕಕ್ಕೆ ಯಾವದೇ ಮಾಹಿತಿ ನೀಡಿಲ್ಲ. ನಮ್ಮನ್ನು ಕತ್ತಲೆಯಲ್ಲಿಟ್ಟು ಇಷ್ಟೆಲ್ಲಾ ಕುತಂತ್ರ ಮಾಡಲಾಗಿದೆ. ಮುಖವಾಡದ ನಾಯಕರಿಂದಾಗಿ ಸಂಘಟನೆಗೆ ಕಪ್ಪುಚುಕ್ಕೆ ಬಂದಿದೆ. ಸಂತ್ರಸ್ತರ ಪರವಾಗಿ ನಗರ ಘಟಕ ನಿಲ್ಲಲಿದೆ ಎಂದು ಮಂಜುನಾಥ್ ತಿಳಿಸಿದರು.

ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣ ಗೌಡರನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ. ಜಿಲ್ಲೆಯಲ್ಲಿ ಪ್ರಾಕೃತಿಕ ವಿಕೋಪಗೊಳಗಾದ 5ಕುಟುಂಬದವರಿಗೆ ತಲಾ ರೂ. 6 ಲಕ್ಷ ವೆಚ್ಚದಲ್ಲಿ ‘ಕುವೆಂಪು ನಿವಾಸ’ ನಾಮಾಂಕಿತ ದೊಂದಿಗೆ ಮನೆ ಕಟ್ಟಿ ಕೊಡಲಾಗುವದು ಎಂಬ ಭರವಸೆ ನೀಡಿದ್ದರು. ಆದರೆ ಮಾದಾಪುರದಲ್ಲಿ ಸಂತ್ರಸ್ತ ಕುಟುಂಬಕ್ಕೆ ರೂ. 50 ಸಾವಿರ ಹಾಗೂ ಮಸಗೋಡು ಗ್ರಾಮದ ಸುದೀರ್ ಹಾಗೂ ಶೈಲ ದಂಪತಿಗಳಿಗೆ ರೂ. 20 ಸಾವಿರ ನೀಡಿರುವ ವಿಚಾರ ನಗರ ಘಟಕಕ್ಕೆ ತಿಳಿದಿರಲಿಲ್ಲ ಎಂದರು. ಸಂತ್ರಸ್ತರಿಂದ ಹಣ ಪಡೆದ ಆರೋಪಕ್ಕೆ ಗುರಿಯಾಗಿರುವ ದೀಪಕ್, ರೂಪಾ ಮತ್ತು ಆಕೆಯ ಪತಿ ಸುರೇಶ್‍ರವರ ಮೇಲೆ ಕಾನೂನು ರೀತಿಯಲ್ಲಿ ಪೊಲೀಸರು ಕ್ರಮ ಕೈಗೊಂಡು ತಕ್ಷಣವೇ ಬಂಧಿಸಬೇಕು ಎಂದು ಗೋಷ್ಠಿಯಲ್ಲಿದ್ದ ಕರವೇ ನಗರ ಘಟಕದ ಕಾರ್ಯದರ್ಶಿ ರವೀಶ್ ಒತ್ತಾಯಿಸಿದರು.

ಗೋಷ್ಠಿಯಲ್ಲಿ ಉಪಾಧ್ಯಕ್ಷ ಅಬ್ಬಾಸ್, ಸಂಘಟನಾ ಕಾರ್ಯದರ್ಶಿ ಮಹಮ್ಮದ್ ಬೇಟು, ಪದಾಧಿಕಾರಿಗಳಾದ ಜಿ.ಸಿ. ಶೇಖರ್, ನಾಗೇಶ್, ದೇವೇಂದ್ರ ಮತ್ತಿತರರು ಉಪಸ್ಥಿತರಿದ್ದರು.