ಕೂಡಿಗೆ, ಸೆ. 16: ಶಿರಂಗಾಲ ಸರ್ಕಾರಿ ಪದವಿಪೂರ್ವ ಕಾಲೇಜಿನಲ್ಲಿ 2018-19ನೇ ಸಾಲಿನ ಪದವಿಪೂರ್ವ ಕಾಲೇಜುಗಳ ತಾಲೂಕು ಮಟ್ಟದ ಕ್ರೀಡಾಕೂಟ ನಡೆಯಿತು. ಕ್ರೀಡಾ ಜ್ಯೋತಿಯನ್ನು ಶಿರಂಗಾಲ ಗ್ರಾ.ಪಂ. ಅಧ್ಯಕ್ಷ ರಮೇಶ್ ಬೆಳಗಿಸಿ, ಕ್ರೀಡಾಕೂಟಕ್ಕೆ ಚಾಲನೆ ನೀಡಿದರು. ನಂತರ ನಡೆದ ಸಭಾ ಕಾರ್ಯಕ್ರಮವನ್ನು ತಾ.ಪಂ. ಸದಸ್ಯ ಎನ್.ಎಸ್. ಜಯಣ್ಣ ಉದ್ಘಾಟಿಸಿದರು. ನಂತರ ಮಾತನಾಡಿದ ಅವರು ವಿದ್ಯಾರ್ಥಿಗಳು ಪ್ರಸ್ತುತ ವಿದ್ಯಮಾನದಲ್ಲಿ ಆಧರಿಸಿದ ವಿಷಯಗಳ ಜೊತೆಗೆ ಕ್ರೀಡೆಗೂ ಹೆಚ್ಚು ಆಸಕ್ತಿ ವಹಿಸಬೇಕು. ಕ್ರೀಡೆ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಉತ್ತಮವಾದ ಮಾರ್ಗೋಪಾಯಗಳನ್ನು ತೋರಿಸುತ್ತದೆ. ಪಠ್ಯದ ಜೊತೆಗೆ ವಿದ್ಯಾರ್ಥಿಗಳು ತಮ್ಮ ವ್ಯಾಸಂಗದ ಒಂದು ಭಾಗವಾಗಿ ಕ್ರೀಡೆಯಲ್ಲಿ ಪಾಲ್ಗೊಂಡಾಗ ವಿದ್ಯಾರ್ಜನೆಗೆ ಉತ್ತಮ ಬುನಾದಿಯನ್ನು ಒದಗಿಸುತ್ತದೆ ಎಂದರು. ಶಿರಂಗಾಲ ಕಾಲೇಜಿನ ಪ್ರಾಂಶುಪಾಲ ಹೆಚ್.ಜೆ. ನಾಗರಾಜ್ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕ್ರೀಡಾಕೂಟಗಳಲ್ಲಿ ಭಾಗವಹಿಸುವದರಿಂದ ಸ್ನೇಹ ಸಮ್ಮಿಲನ ಬೆಳೆಯುತ್ತದೆ. ಕ್ರೀಡಾಕೂಟದಲ್ಲಿ ಭಾಗವಹಿಸುವ ಮೂಲಕ ಮಾನಸಿಕ ಹಾಗೂ ದೈಹಿಕ ಸಾಮಥ್ರ್ಯವನ್ನು ಹೆಚ್ಚಿಸಿಕೊಳ್ಳಲು ಸಹಕಾರಿಯಾಗುತ್ತದೆ ಎಂದರು. ವೇದಿಕೆಯಲ್ಲಿ ಜಿಲ್ಲಾ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಜಿ. ಕೆಂಚಪ್ಪ, ಶಿರಂಗಾಲ ಕಾಲೇಜು ಅಭಿವೃದ್ಧಿ ಸಮಿತಿಯ ಉಪಾಧ್ಯಕ್ಷ ಎನ್.ಬಿ. ಮಹೇಶ್, ಪ್ರೌಢಶಾಲಾ ವಿಭಾಗದ ಮುಖ್ಯ ಶಿಕ್ಷಕ ಸೋಮಯ್ಯ, ಶಾಲಾಭಿವೃದ್ಧಿ ಸಮಿತಿಯ ಸದಸ್ಯ ಎಸ್.ಪಿ. ಶ್ರೀಧರ್, ದೇವತಾ ಸಮಿತಿಯ ಅಧ್ಯಕ್ಷ ಎಸ್.ಎಸ್. ಚಂದ್ರಶೇಖರ್, ಕಾರ್ಯದರ್ಶಿ ಸಿ.ಎನ್. ಲೋಕೇಶ್ ಇದ್ದರು. ಕ್ರೀಡಾಕೂಟಗಳಲ್ಲಿ ಸೋಮವಾರಪೇಟೆ ತಾಲೂಕಿನ ಪದವಿಪೂರ್ವ ಕಾಲೇಜಿನ ಅನೇಕ ತಂಡಗಳು ಖೋ-ಖೋ ಮತ್ತು ಥ್ರೋಬಾಲ್ನಲ್ಲಿ ಭಾಗವಹಿಸಿದ್ದವು.