ಕುಶಾಲನಗರ, ಸೆ. 16: ಕುಶಾಲನಗರ ವ್ಯವಸಾಯೋತ್ಪನ್ನ ಮಾರಾಟ ಸಹಕಾರ ಸಂಘ 2017-18ನೇ ಸಾಲಿನಲ್ಲಿ ರೂ. 35.64 ಲಕ್ಷ ನಿವ್ವಳ ಲಾಭ ಗಳಿಸಿದೆ ಎಂದು ಸಂಘದ ಅಧ್ಯಕ್ಷ ಕೆ.ಎಂ. ಪ್ರಸನ್ನ ತಿಳಿಸಿದರು.

ರೈತ ಸಹಕಾರ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಸಂಘ 1402 ಸದಸ್ಯರ ಮೂಲಕ ರು 12.03 ಲಕ್ಷ ಪಾಲು ಬಂಡವಾಳ ಹೊಂದಿದೆ ಎಂದರು.

ನಿಯಂತ್ರಿತ ಮತ್ತು ಅನಿಯಂತ್ರಿತ ಸಾಮಗ್ರಿ, ಗ್ರಾಹಕ ವಸ್ತು, ಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜ, ಕೋವಿ ತೋಟಾ, ಮೆಡಿಕಲ್ ಸ್ಟೋರ್ ವಿಭಾಗ ಸೇರಿದಂತೆ ಎರಡು ಸುಸಜ್ಜಿತ ಸಭಾಂಗಣಗಳ ಮೂಲಕ ಒಟ್ಟು ರೂ. 61 ಕೋಟಿ ವಹಿವಾಟು ನಡೆಸುತ್ತಿದೆ. ಒಟ್ಟು ಠೇವಣಿ ರೂ. 627.33 ಲಕ್ಷದಲ್ಲಿ ರೂ. 248.84 ಲಕ್ಷವನ್ನು ವಿವಿಧ ನಿಧಿಗಳಿಗೆ ಬಳಸಲಾಗಿದೆ. ಸಂಘದ ಮೂಲಕ ವಿವಿಧ ರೀತಿಯಲ್ಲಿ ರೂ. 529.99 ಲಕ್ಷ ಸಾಲ ನೀಡಲಾಗಿದೆ. ರೂ. 8.37 ಕೋಟಿ ವ್ಯಾಪಾರ ವಹಿವಾಟು ಮೂಲಕ ರೂ. 55.45 ಲಕ್ಷ ವ್ಯಾಪಾರ ಲಾಭ ಗಳಿಸಿದೆ ಎಂದು ತಿಳಿಸಿದರು.

ಸಂಘವು ಕುಶಾಲನಗರ ಮುಖ್ಯ ರಸ್ತೆಯಲ್ಲಿ ಸ್ವಂತ ವ್ಯಾಪಾರ ಮಳಿಗೆ, ಗೋದಾಮು ಹಾಗೂ 2 ಸುಸಜ್ಜಿತ ಸಭಾಂಗಣಗಳನ್ನು ಹೊಂದಿದ್ದು ಮದುವೆ ಮತ್ತು ಇತರೆ ಸಮಾರಂಭಗಳಿಗೆ ರೈತಾಪಿ ವರ್ಗದವರಿಗೆ ಕನಿಷ್ಟ ದರ ಹಾಗೂ ಸದಸ್ಯರಿಗೆ ರಿಯಾಯಿತಿ ದರದಲ್ಲಿ ಬಾಡಿಗೆಗೆ ನೀಡಲಾಗುತ್ತಿದೆ ಎಂದರು. ಸಹಕಾರ ಭವನದ ಆವರಣದಲ್ಲಿ ರೂ. 55 ಲಕ್ಷ ವೆಚ್ಚದಲ್ಲಿ 10 ವಸತಿ ಗೃಹ, ಮಿನಿ ಸಭಾಂಗಣ ಕೂಡ ನಿರ್ಮಿಸಲಾಗಿದೆ. ರೂ. 24.90 ಲಕ್ಷ ವೆಚ್ಚದಲ್ಲಿ ರೈತ ಸಹಕಾರ ಭವನ ಕಟ್ಟಡದಲ್ಲಿ ಸೋಲಾರ್ ಪ್ಯಾನಲ್ ಅಳವಡಿಸಿ ವಿದ್ಯುತ್ ಉತ್ಪಾದಿಸುವ ಯೋಜನೆ ಕೈಗೊಳ್ಳಲಾಗಿದೆ. ಭವನಕ್ಕೆ ಅಗತ್ಯವಿರುವ ವಿದ್ಯುತ್ ಬಳಸಿಕೊಂಡು ಉಳಿದ ಪ್ರಮಾಣವನ್ನು ಚೆಸ್ಕಾಂಗೆ ಮಾರಾಟ ಮಾಡುವ ಒಪ್ಪಂದ ಮಾಡಿಕೊಳ್ಳಲಾಗಿದೆ. ಈ ಯೋಜನೆ ಮೂಲಕ ತಿಂಗಳಿಗೆ ಅಂದಾಜು 25 ಸಾವಿರ ಆದಾಯ ಗಳಿಸುವ ಚಿಂತನೆ ಸಂಘ ಹೊಂದಿದೆ. ಈ ಯೋಜನೆಯ ಉದ್ಘಾಟನೆ ತಾ. 21 ರಂದು ನಡೆಯಲಿದೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಸಂಘದ ಔಷಧಿ ಮಳಿಗೆಯಲ್ಲಿ ನಡೆದ ರೂ. 2 ಲಕ್ಷ ಹಣ ದುರುಪಯೋಗ ಸಂಬಂಧ ಈಗಾಗಲೇ ರೂ. 50 ಸಾವಿರ ಪಾವತಿಯಾಗಿದ್ದು, ಉಳಿದ ರೂ. 1.50 ಲಕ್ಷ ಪಾವತಿಸಲು ಗಡುವು ನೀಡಲಾಗಿದೆ ಎಂದು ತಿಳಿಸಿದರು.

ಸಂಘದ ಮಹಾಸಭೆ ತಾ. 21 ರಂದು ನಡೆಯಲಿದ್ದು, ಸದಸ್ಯರಿಗೆ ಶೇ. 25 ರಷ್ಟು ಡಿವಿಡೆಂಡ್ ನೀಡಲಾಗುವದು. ಸಂಘದ ಕಾರ್ಯವ್ಯಾಪ್ತಿಯಲ್ಲಿ ಬರುವ ಸರಕಾರಿ ಮತ್ತು ಅನುದಾನಿತ ಶಾಲೆಗಳಲ್ಲಿ ಅಭ್ಯಸಿಸುವ 10ನೇ ತರಗತಿ ಮತ್ತು ಪಿಯುಸಿ ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ ನಡೆಯಲಿದೆ. 2017-18ನೇ ಸಾಲಿನ ಉತ್ತಮ ಕಾರ್ಯನಿರ್ವಹಣೆಗಾಗಿ ಮಾರಾಟ ಸಹಕಾರ ಸಂಘಗಳ ಪೈಕಿ ದ್ವಿತೀಯ ಸ್ಥಾನಗಳಿಸಿ ಕೊಡಗು ಜಿಲ್ಲಾ ಕೇಂದ್ರ ಸಹಕಾರ ಬ್ಯಾಂಕ್‍ನ ಮೂಲಕ ರೂ. 15 ಸಾವಿರ ಬಹುಮಾನ ಪಡೆದುಕೊಂಡಿದೆ ಎಂದು ಸಂಘದ ಕಾರ್ಯದರ್ಶಿ ಬಿ.ಎಂ. ಪಾರ್ವತಿ ತಿಳಿಸಿದರು.

ಗೋಷ್ಠಿಯಲ್ಲಿ ಸಂಘದ ಉಪಾಧ್ಯಕ್ಷ ಎಸ್.ಟಿ. ಕೃಷ್ಣರಾಜು, ಡಿಸಿಸಿ ಬ್ಯಾಂಕ್ ನಿರ್ದೇಶಕ ಎಂ.ಎನ್. ಕುಮಾರಪ್ಪ, ಸಂಘದ ನಿರ್ದೇಶಕರಾದ ಬಿ.ಎಂ. ಸೋಮಯ್ಯ, ಬಿ. ಸರೋಜ, ಹೆಚ್.ಬಿ. ಚಂದ್ರಪ್ಪ, ಎ.ಪಿ. ನೀಲಮ್ಮ, ಟಿ.ಬಿ. ಜಗದೀಶ್, ಟಿ.ಕೆ. ರಘು, ಆರ್.ಕೆ. ಚಂದ್ರ ಇದ್ದರು.