ಜೆಡಿಎಸ್ ಆರೋಪ

ಸೋಮವಾರಪೇಟೆ, ಸೆ. 16: ಕೇಂದ್ರ ಸರ್ಕಾರದಿಂದ ದೇಶದ ಆರ್ಥಿಕ ಪ್ರಗತಿ ಕುಂಠಿತಗೊಂಡಿದ್ದು, ಧನಿಕರ ಪರವಾಗಿ ಮೋದಿ ಸರ್ಕಾರ ಕೆಲಸ ಮಾಡುತ್ತಿದೆ ಎಂದು ಜೆಡಿಎಸ್ ಆರೋಪಿಸಿದೆ.

ಪತ್ರಿಕಾಭವನದಲ್ಲಿ ಕರೆದಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜೆಡಿಎಸ್ ಕ್ಷೇತ್ರ ಸಮಿತಿ ಅಧ್ಯಕ್ಷ ಹೆಚ್.ಆರ್. ಸುರೇಶ್, ಈ ಹಿಂದೆ ಮನಮೋಹನ್ ಸಿಂಗ್ ಸರ್ಕಾರ ಇದ್ದಾಗ ಅಂತಾರ್ರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾತೈಲದ ಬೆಲೆ ಬ್ಯಾರೆಲ್‍ಗೆ 120 ರಿಂದ 130 ಡಾಲರ್ ಇದ್ದರೂ ಸಹ ಪೆಟ್ರೋಲ್ ರೂ. 65, ಡೀಸೆಲ್ 54 ಮಾತ್ರ ಇತ್ತು. ಇಂದು ಕಚ್ಚಾತೈಲದ ಬೆಲೆ 70 ರಿಂದ 75 ಡಾಲರ್ ಇದ್ದರೂ ಕ್ರಮವಾಗಿ ಪೆಟ್ರೋಲ್ 84 ಹಾಗೂ ಡೀಸೆಲ್ 75 ರೂಪಾಯಿಗೆ ಏರಿಕೆಯಾಗಿದೆ ಎಂದರು.

ಅಂದು ಬೆಲೆ ಏರಿಕೆ ವಿರುದ್ಧ ಇಂದಿನ ಅರ್ಥ ಸಚಿವ ಅರುಣ್ ಜೇಟ್ಲಿ, ಪ್ರಧಾನಿ ಮೋದಿ ಸೇರಿದಂತೆ ಹಲವರು ಭಾರೀ ಪ್ರತಿಭಟನೆ ಮಾಡಿದ್ದರು. ಆದರೆ ಇಂದು ಕಚ್ಚಾತೈಲದ ಬೆಲೆ ಇಳಿಕೆಯಾಗಿದ್ದರೂ ಪೆಟ್ರೋಲ್, ಡೀಸೆಲ್, ಅಡುಗೆ ಅನಿಲದ ಬೆಲೆ ಏರಿಕೆಯಾಗಿರುವದು ದುರಂತ. ಈ ಬಗ್ಗೆ ಜನಸಾಮಾನ್ಯರಿಗೆ ಪ್ರಧಾನಿ ಉತ್ತರ ಕೊಡಬೇಕು ಎಂದು ಸುರೇಶ್ ಒತ್ತಾಯಿಸಿದರು. ಅಡುಗೆ ಅನಿಲದ ಬೆಲೆ ಪ್ರತಿ ಸಿಲಿಂಡರ್‍ಗೆ 840 ಏರಿಕೆಯಾಗಿದೆ. ಇದರಿಂದ ಎಲ್ಲಾ ವರ್ಗದ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕುವಂತಾಗಿದೆ. ಜನಜೀವನ ದುಸ್ತರವಾಗಿದೆ ಎಂದ ಸುರೇಶ್, ಕಳೆದ ಲೋಕಸಭಾ ಚುನಾವಣೆ ಸಂದರ್ಭ ಅಭ್ಯರ್ಥಿಗಳಾಗಿದ್ದ ನಳಿನಿಕುಮಾರ್ ಕಟೀಲ್ ಮತ್ತು ಅನಂತ್‍ಕುಮಾರ್ ಹೆಗಡೆ ಅವರು ಬಿಜೆಪಿ ಅಧಿಕಾರಕ್ಕೆ ಬಂದರೆ ಪ್ರತಿ ಲೀಟರ್ ಪೆಟ್ರೋಲ್ ಬೆಲೆಯಲ್ಲಿ 15 ರೂಪಾಯಿ ಇಳಿಕೆ ಮಾಡುತ್ತೇವೆ ಎಂದಿದ್ದರು. ಇದೀಗ ಮೌನಕ್ಕೆ ಶರಣಾಗಿರುವದು ಯಾಕೆ? ಎಂದು ಪ್ರಶ್ನಿಸಿದರು. ಪ್ರಕೃತಿ ವಿಕೋಪದಿಂದ ಕೊಡಗಿನಲ್ಲಿ ಭಾರೀ ನಷ್ಟವಾಗಿದ್ದು, ಕೇಂದ್ರ ಸರ್ಕಾರ ಎಷ್ಟು ಪರಿಹಾರ ನೀಡಿದೆ? ಸಂಸದ ಪ್ರತಾಪ್ ಸಿಂಹ ಮರವನ್ನು ಎತ್ತುವ ಫೋಸ್ ಕೊಟ್ಟಿದ್ದು ಬಿಟ್ಟರೆ ಬೇರೇನೂ ಮಾಡಿಲ್ಲ. ಇನ್ನಾದರೂ ಕೇಂದ್ರದಿಂದ ಪರಿಹಾರ ಕೊಡಿಸಲಿ ಎಂದು ಸವಾಲು ಹಾಕಿದರು. 2 ಸಾವಿರ ಕೋಟಿ ನಷ್ಟವಾಗಿದ್ದರೂ ಕೊಡಗಿನ ನೆರವಿಗೆ ಸಿದ್ಧವಿರುವದಾಗಿ ರಾಜ್ಯ ಸರ್ಕಾರದ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದ್ದಾರೆ. ಕೊಡಗಿನ ಸಾಲಮನ್ನಾ ಮಾಡುವದಾಗಿ ಭರವಸೆ ನೀಡಿದ್ದಾರೆ. ಜನತೆ ಆತಂಕಕ್ಕೆ ಒಳಗಾಗುವದು ಬೇಡ ಎಂದರು.

ಗೋಷ್ಠಿಯಲ್ಲಿ ಜೆಡಿಎಸ್ ಮುಖಂಡರಾದ ಕೆ.ಟಿ. ಪರಮೇಶ್, ಪ್ರವೀಣ್, ಕಮಲ್, ಕೃಷ್ಣಪ್ಪ, ಎಸ್.ಎಂ. ಡಿಸಿಲ್ವಾ ಅವರುಗಳು ಉಪಸ್ಥಿತರಿದ್ದರು.