ಇಂದು ಜನ್ಮದಿನೋತ್ಸವ 80 ರ ಹರೆಯ
ಕೊಡಗು ಜಿಲ್ಲೆ ರಾಜ್ಯದ ರಾಜಕಾರಣಕ್ಕೆ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಪುಟ್ಟ ಜಿಲ್ಲೆಯಾದರೂ ರಾಜ್ಯಪಾಲರನ್ನು, ಮುಖ್ಯಮಂತ್ರಿಯನ್ನು, ವಿಧಾನಸಭಾಧ್ಯಕ್ಷರನ್ನು, ಪ್ರತಿಪಕ್ಷದ ನಾಯಕರನ್ನು, ಶ್ರೇಷ್ಠ ರಾಜಕಾರಣಿಗಳನ್ನು ರಾಜ್ಯದ ರಾಜಕೀಯಕ್ಕೆ ಕೊಡುಗೆ ನೀಡಿದ ಕೀರ್ತಿ ಕೊಡಗಿಗೆ ಸಲ್ಲುತ್ತದೆ. ಕೊಡಗಿನ ರಾಜಕಾರಣಿಗಳು ಶಿಸ್ತುಬದ್ಧ, ಪ್ರತಿಭಾವಂತ ರಾಜಕಾರಣಿಗಳು ಎನ್ನಬಹುದು. ಆದರೆ ರಾಜ್ಯದ ರಾಜಕಾರಣದಲ್ಲಿ ತನ್ನದೇ ಆದ ಛಾಪು ಮೂಡಿಸಿದ ರಾಜಕಾರಣಿಗಳೆಂದರೆ, ಎ.ಕೆ. ಸುಬ್ಬಯ್ಯ ಮತ್ತು ಯಂ.ಸಿ. ನಾಣಯ್ಯ. ಈ ಇಬ್ಬರು ನಾಯಕರು ರಾಜ್ಯ ಕಂಡ ಅತ್ಯಂತ ಶ್ರೇಷ್ಠ ರಾಜಕಾರಣಿಗಳು. ಇಬ್ಬರು ಉತ್ತಮ ಸಂಸದೀಯ ಪಟುಗಳು. ಕೆಳ ಹಂತದಿಂದ ಬೆಳೆದು ಬಂದವರು. ತಮ್ಮದೇ ಆದ ಸ್ವ ಪ್ರತಿಭೆಯಿಂದ ಬೆಳೆದು ಮುಖ್ಯಮಂತ್ರಿಯಾಗುವ ಎಲ್ಲಾ ಅರ್ಹತೆಯನ್ನು ಈ ಇಬ್ಬರೂ ನಾಯಕರುಗಳು ಹೊಂದಿದ್ದರು. ಆದರೆ ರಾಜಕಾರಣದಲ್ಲಿ ಜಾತಿ ಆಧಾರಿತ ಸಂಖ್ಯಾಬಲಗಳ ರಾಜಕಾರಣದ ಓಟದಲ್ಲಿ ಪುಟ್ಟ ಜಿಲ್ಲೆಯಾದ ಕೊಡಗಿನಲ್ಲಿ ಅದು ಸಾಧ್ಯವಾಗದೇ ಇರುವದರಿಂದ ಆ ಪದವಿಯಿಂದ ವಂಚಿತರಾದರು ಎನ್ನಬಹುದು.
ಯಂ.ಸಿ. ನಾಣಯ್ಯ ಅವರು ತಮ್ಮ ಕಿರಿಯ ವಯಸ್ಸಿನಲ್ಲೇ ವಕೀಲ ವೃತ್ತಿಯೊಡನೆ ರಾಜಕೀಯ ಆರಂಭಿಸಿದವರು. 1970-74 ರವರೆಗಿನ ಅವಧಿಗೆ ಪುರಸಭೆಯ ಅಧ್ಯಕ್ಷರಾಗಿ, 1969-74 ರವರೆಗೆ ಮತ್ತು 1983-87 ರವರೆಗೆ ಡಿ.ಸಿ.ಸಿ. ಬ್ಯಾಂಕ್‍ನ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಇವರು ಎರಡು ಹುದ್ದೆಗಳನ್ನು ತಮ್ಮ ಯೌವ್ವನಾವಸ್ಥೆಯಲ್ಲೇ ನಿರ್ವಹಣೆ ಮಾಡಿದವರು. ಮಡಿಕೇರಿ ನಗರದ ಮೇಲೆ ಅವರಿಗೆ ಅಗಾಧ ಪ್ರೀತಿ. ಅವರು ಪುರಸಭಾಧ್ಯಕ್ಷರಾಗಿದ್ದಾಗ ಜನರಲ್ ತಿಮ್ಮಯ್ಯ ಪುತ್ಥಳಿ ಸ್ಥಾಪಿಸಲು ಪಟ್ಟ ಶ್ರಮ ಅವರ ‘ನೆನಪುಗಳು ಮಾಸುವ ಮುನ್ನ’ ಪುಸ್ತಕ ಓದಿದರೆ ತಿಳಿಯುತ್ತದೆ. ಅವರು ಪುರಸಭೆಯ ಅಧ್ಯಕ್ಷರಾಗಿದ್ದಾಗ ಗಾಳಿಬೀಡಿನ ಕುಡಿಯುವ ನೀರಿನ ಯೋಜನೆ, ದಸರಾ ಹಬ್ಬಕ್ಕೆ ಒಂದು ಆಯಾಮ ಒದಗಿಸಿದ್ದು, ರಾಜಸೀಟಿನಲ್ಲಿದ್ದ ಬ್ರಿಟಿಷರ ಸಮಾಧಿಯನ್ನು ಐ.ಟಿ.ಐ.ನ ಹಿಂಭಾಗಕ್ಕೆ ಸ್ಥಳಾಂತರಿಸುವಲ್ಲಿ ಯಶಸ್ವಿಯಾಗಿದ್ದು, ಇಂತಹ ಹಲವು ಕಾರ್ಯಕ್ರಮಗಳು ಇಂದಿನ ಪೀಳಿಗೆಗೆ ತಿಳಿದಿಲ್ಲವೆನ್ನಬಹುದು. ಮಡಿಕೇರಿ ನಗರದ ಸುತ್ತಮುತ್ತದ ಪ್ರಕೃತಿ ನಾಶದ ಬಗ್ಗೆ, ಪ್ರವಾಸೋದ್ಯಮದ ಬಗ್ಗೆ, ಹೋಂಸ್ಟೇಗಳ ಬಗ್ಗೆ ಧ್ವನಿ ಎತ್ತಿದಾಗ ಅದರ ಪರವಾದ ಜನ ಅವರನ್ನು ಕೆಂಗಣ್ಣಿನಿಂದ ನೋಡುತ್ತಿದ್ದರು. ಎಲ್ಲದರಲ್ಲು ಅಡ್ಡಗಾಲು ಹಾಕುತ್ತಾರೆಂಬ ಮಾತು ಪ್ರಚಲಿತವಾಗಿತ್ತು. ಆದರೆ ಈ ಬಾರಿಯ ಮಳೆಗಾಲದ ಪ್ರಕೃತಿ ವಿಕೋಪ ನಾಣಯ್ಯ ಅವರ ಮಾತನ್ನು ಪುಷ್ಟೀಕರಿಸಿತ್ತು. ಯಾವಾಗ ಪ್ರಕೃತಿ ವಿಕೋಪವಾಯಿತೋ ಆಗ ಜನರಿಗೆ ಅರಿವಾಯಿತು, ಅವರ ನಿಲುವಿನ ಬೆಲೆ. ಅದುವರೆಗೂ ವಿರೋಧಿಸಿದವರು ಅವರ ಮಾತಿಗೆ ತಲೆದೂಗುವಂತಾಯಿತು.
ಜಿಲ್ಲೆಯ ಹಿತಾಸಕ್ತಿಯ ವಿರುದ್ಧ ಮಾತು ಬಂದಾಗ ಇವರು ಅದನ್ನು ವಿರೋಧಿಸುತ್ತಿದ್ದರು. ಅದು ಹರದೂರು ಯೋಜನೆ, ಕಂಬದಕಡ ಯೋಜನೆಯಿಂದ ಹಿಡಿದು ನಿನ್ನೆ ಮೊನ್ನೆವರೆಗಿನ ಜಮ್ಮಾ ಬಾಣೆಯ ವಿಷಯವಾಗಿರಲಿ ಕೊಡಗಿಗೆ ಮಾರಕವಾದ ಯಾವದೇ ಯೋಜನೆಯನ್ನೂ ವಿರೋಧಿಸುತ್ತಿದ್ದರು. ಯೋಜನೆಗಳ ವಿರುದ್ಧ ಇವರ ನಿಲುವು ಖಚಿತವಾಗುತ್ತಿತ್ತು. ಸದನದ ಒಳಗೆ ಮತ್ತು ಹೊರಗೆ ಅವರು ಮಂಡಿಸುತ್ತಿದ್ದ ವಿಷಯಗಳಿಗೆ ಬೆಲೆ ಸಿಗುತ್ತಿತ್ತು. ಅದರಲ್ಲಿ ತಾರ್ಕಿಕ ಅಂಶವಿರುತ್ತಿತ್ತು. ಸತ್ಯ ನಿಷ್ಠುರತೆ ಇರುತ್ತಿತ್ತು. ಇವರ ಮಾತಿಗೆ, ಹೋರಾಟಕ್ಕೆ ಬೆಂಬಲ ಸಿಗುತ್ತಿತ್ತು.
ಯಂ.ಸಿ. ನಾಣಯ್ಯ ಅವರು ರಾಜ್ಯದ ರಾಜಕೀಯದಲ್ಲಿ ಬೆಳೆದಷ್ಟು ಎತ್ತರಕ್ಕೆ ಜಿಲ್ಲೆಯಲ್ಲಿ ಬೆಳೆಯಲಿಲ್ಲವೆನ್ನಬಹುದು. ಕೊಡಗು ಜಿಲ್ಲೆಯಲ್ಲಿ ಅವರು ತಮ್ಮದೇ ಆದ ಛಾಪು ಮೂಡಿಸಿದ್ದರು. ಅವರು ಅಧಿಕಾರದಲ್ಲಿರಲಿ ಇಲ್ಲದೇ ಇರಲಿ ಜನರು ಅವರಿಂದ ತಮ್ಮ ಕೆಲಸ ಕಾರ್ಯಗಳನ್ನು ಮಾಡಿಸಿಕೊಳ್ಳುತ್ತಿದ್ದರು. ಅವರ ಮಾತಿನಲ್ಲಿ ಖಡಕ್‍ತನವಿದ್ದರೂ ಸಮಸ್ಯೆಯನ್ನು ಆಲಿಸುತ್ತಿದ್ದರು. ತಪ್ಪು ಎಂದು ಕಂಡಲ್ಲಿ ನೇರವಾಗಿ ಹೇಳಿಬಿಡುತ್ತಿದ್ದರು ಮತ್ತು ಪರಿಹಾರವನ್ನು ಸೂಚಿಸುತ್ತಿದ್ದರು. ಅವರಲ್ಲಿ ಒಂದು ಕೆಲಸವನ್ನು ನಿವೇದಿಸಿಕೊಂಡಾಗ ನಾವು ಮರೆತರೂ ಅವರು ಮರೆಯುತ್ತಿರಲಿಲ್ಲ.
ಅವರು ಅಧಿಕಾರದಲ್ಲಿದ್ದಾಗ ಸ್ವಪಕ್ಷದವರಲ್ಲದೇ ವಿರೋಧ ಪಕ್ಷದವರೂ ಅವರಿಂದ ಕೆಲಸ ಕಾರ್ಯಗಳು ಮಾಡಿಸಿಕೊಂಡ ಉದಾಹರಣೆಗಳು ಸಾಕಷ್ಟಿವೆ. ಅವರಿಂದ ಕೆಲಸ ಕಾರ್ಯ ಮಾಡಿಸಿಕೊಂಡ ಜನ ಅವರ ಬೆಂಬಲಕ್ಕೆ ನಿಂತಿದ್ದರೆ, ಅದು ಮತಗಳಾಗಿ ಪರಿವರ್ತನೆಯಾಗುತ್ತಿದ್ದರೆ ಅವರು ಅನಾಯಾಸವಾಗಿ ಒಂದಷ್ಟು ಚುನಾವವಣೆಗಳನ್ನು ಗೆಲ್ಲಬಹುದಿತ್ತು. ನಾ ಕಂಡಂತೆ ಅವರಿಂದ ಪ್ರಯೋಜನ ಪಡೆದವರಲ್ಲಿ ಹೆಚ್ಚಿನವರು ಬಹಿರಂಗವಾಗಿ ಹೇಳಿಕೊಳ್ಳುವದಿಲ್ಲ.
ಕೊಡಗಿನ ಜನ ಯಾರ ನಾಯಕತ್ವವನ್ನೂ ಇದುವರೆಗೆ ಒಪ್ಪಿಕೊಂಡಿಲ್ಲ. ಆದ್ದರಿಂದ ಕೊಡಗಿನಲ್ಲಿ ಇವರೂ ಜನನಾಯಕರಾಗಲಿಲ್ಲ. ನಂತರದ ದಿನಗಳಲ್ಲಿ ಇವರು ರಾಜ್ಯದ ರಾಜಕಾರಣದಲ್ಲಿ ಮತ್ತು ಸಹಕಾರಿ ಕ್ಷೇತ್ರದಲ್ಲಿ ತೊಡಗಿಸಿಕೊಂಡು ಎರಡೂ ಕ್ಷೇತ್ರದಲ್ಲಿ ಪ್ರಬಲರಾದರು. ಇವರ ಖಡಕ್ ಉತ್ತರದಿಂದ ಜನರು ಅವರಿಂದ ಸ್ವಲ್ಪ ದೂರ ಉಳಿಯುತ್ತಿದ್ದರು. ಆದರೆ ಇವರನ್ನು ಸಮೀಪದಿಂದ ಬಲ್ಲವರಿಗೆ ಮಾತ್ರ ಇವರ ಮನಸ್ಸಿನ ವಿಶಾಲತೆ ಅರಿವಾಗುತ್ತಿತ್ತು. ರಾಜ್ಯದಿಂದ ಹಿಡಿದು ಜಿಲ್ಲೆಯವರೆಗೆ, ಹಿರಿಯರಿಂದ ಕಿರಿಯರವರೆಗೆ ಇವರಿಂದ ಅನೇಕರು ಸಲಹೆಗಳನ್ನು ಪಡೆಯುತ್ತಾರೆ. ಉತ್ತಮ ಭಾಷಣಕಾರರಾಗಿ ಎಲ್ಲಾ ವಿಷಯಗಳ ಬಗ್ಗೆ ಹಿಡಿತ ಸಾಧಿಸಿದ್ದ ಇವರನ್ನು ಜನರು ಎಲ್ಲಾ ಕ್ಷೇತ್ರಗಳ ಸಮಾರಂಭಗಳಿಗೆ ಆಹ್ವಾನಿಸುತ್ತಿದ್ದರು. ಇವರಿಗೆ ವಿಷಯಗಳ ಮೇಲೆ ಹಿಡಿತವಿರುವದರಿಂದ ಸಮಸ್ಯೆಗಳಿಗೆ ಪರಿಹಾರವನ್ನು ಜನರು ಇವರಿಂದ ಕಂಡುಕೊಳ್ಳುತ್ತಿದ್ದರು. ರಾಜ್ಯದ ಕಾವೇರಿ ಸಮಸ್ಯೆ, ಕಾನೂನು ಮಂತ್ರಿಯಾಗಿದ್ದಾಗ ಕೈಗೊಂಡ ಕಾರ್ಯಗಳು ಇಂದಿಗೂ ಜನರ ಮನಸ್ಸಿನಲ್ಲಿ ಉಳಿದಿದೆ.
ಇಂದಿನ ರಾಜಕೀಯ ವ್ಯವಸ್ಥೆಯಿಂದಾಗಿ ಅವರು ಮತ್ತೊಮ್ಮೆ ಸದನದ ಸದಸ್ಯರಾಗುವ ಅವಕಾಶದಿಂದ ವಂಚಿತರಾದರು. ಇಂದಿನ ರಾಜಕೀಯ ವ್ಯವಸ್ಥೆಯಲ್ಲಿನ ಜಾತಿ, ಹಣ, ತೋಳ್ಬಲಗಳು ದೇಶ, ರಾಜ್ಯದ ಹಿತಾಸಕ್ತಿಗಿಂತ ಸ್ವಹಿತಾಸಕ್ತಿಯೇ ಮುಖ್ಯ ಎನ್ನುವದಕ್ಕೆ ಸದನದಲ್ಲಿ ಎ.ಕೆ. ಸುಬ್ಬಯ್ಯ, ಯಂ.ಸಿ. ನಾಣಯ್ಯ ಇವರುಗಳಂತಹ ಉತ್ತಮ ಸಂಸದೀಯಪಟುಗಳಿಗೆ ಅವಕಾಶ ಇಲ್ಲವೆನ್ನುವದೇ ಉದಾಹರಣೆ.
ನಾಣಯ್ಯ ಅವರು ಕೊಡಗಿನ ಶಕ್ತಿ ಎನ್ನಬಹುದು. ಆದರೆ ರಾಜಕೀಯವಾಗಿ ಕೊಡಗಿನ ಜನ ಇವರನ್ನು ಬಳಸಿಕೊಳ್ಳದೇ ಇದ್ದುದು ಇವರಿಗಾದ ನಷ್ಟವಲ್ಲ. ಇದು ಕೊಡಗಿಗಾದ ನಷ್ಟವೆನ್ನಬೇಕು. ನಮ್ಮೂರಿನ ಸಮಸ್ಯೆ ಬಂದಾಗ ರಾಜಕೀಯ ರಹಿತವಾದ ಹೋರಾಟದಲ್ಲಿ ಇವರು ಮುಂಚೂಣಿಯಲ್ಲಿರುತ್ತಿದ್ದರು. ರಾಜ್ಯದ ರಾಜಕೀಯದಲ್ಲಿ ಜಿಲ್ಲೆಯ ಪರವಾಗಿ ಧ್ವನಿ ಎತ್ತುತ್ತಿದ್ದರು. ಇಂದು ಜಿಲ್ಲೆಗೆ ಅದರ ಅವಶ್ಯಕತೆ ಇದೆ. ಈಗ ಇವರ ಅನುಪಸ್ಥಿತಿಯಲ್ಲಿ ಅದು ಕ್ಷೀಣಿಸುತ್ತಿದೆ ಎಂದರೆ ಉತ್ಪ್ರೇಕ್ಷೆಯಾಗದು.
“ಇವರು ಕಾಂಗ್ರೆಸ್ಸಿನಲ್ಲಿ ಅರಸು ಅವರ ನಾಯಕತ್ವವನ್ನು ಒಪ್ಪಿಕೊಂಡು 1978 ರಲ್ಲಿ ಕಾಂಗ್ರೆಸ್ಸಿನಿಂದ ಚುನಾವಣೆಗಿಳಿದು ಮೊದಲ ಬಾರಿಗೆ ಶಾಸಕರಾದರು. ನಂತರದ ದಿನಗಳಲ್ಲಿ ಜನತಾ ಪರಿವಾರದ ಪ್ರಬಲ ನಾಯಕರಾಗಿ ಬೆಳೆದರು. ರಾಜಕೀಯ ಬಿಕ್ಕಟ್ಟುಗಳಿಂದ ತಮ್ಮ ಇಳಿ ವಯಸ್ಸಿನ ರಾಜಕೀಯ ಜೀವನದಲ್ಲಿ ಪುನಃ ಕಾಂಗ್ರೆಸ್ಸಿಗೆ ಮರಳಿದ್ದು ಕಾಕತಾಳೀಯ”.
- ಬಾಳೆಯಡ ಕಿಶನ್ ಪೂವಯ್ಯ, ವಕೀಲರು-ನೋಟರಿ, ಮಡಿಕೇರಿ.