*ಗೋಣಿಕೊಪ್ಪಲು, ಸೆ. 16: ಕಾರುಗಳ ನಡುವೆ ಶನಿವಾರ ಸಂಭವಿಸಿದ ಅಪಘಾತದಲ್ಲಿ ವಿಶಾಲಾಕ್ಷಿ (55) ಎಂಬವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಪೊನ್ನಂಪೇಟೆ ಸಮೀಪದ ಕಾನೂರು ರಸ್ತೆಯಲ್ಲಿ ಜರುಗಿದೆ. ಗಾಯಗೊಂಡಿರುವ ವಿಶಾಲಾಕ್ಷಿ ಅವರು ಮೈಸೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ವಿಶಾಲಾಕ್ಷಿ ಅವರು ಪೊನ್ನಂಪೇಟೆಯಿಂದ ಕಾನೂರಿನ ತಮ್ಮ ಕಾಫಿ ತೋಟಕ್ಕೆ ಕಾರ್ಮಿಕರನ್ನು ಕರೆದುಕೊಂಡು ಕಾನೂರಿನತ್ತ ತೆರಳುತ್ತಿದ್ದರು ಎನ್ನಲಾಗಿದೆ. ಇದೇ ವೇಳೆಯಲ್ಲಿ ಬೆಕ್ಕೆಸೊಡ್ಲೂರು ಕಡೆಯಿಂದ ಬಂದ ಮತ್ತೊಂದು ಕಾರು ಮುಖಾಮುಖಿ ಡಿಕ್ಕಿ ಹೊಡೆದಿದೆ. ಈ ಸಂದರ್ಭ ಮತ್ತೋರ್ವ ಚಾಲಕ ದೇವಯ್ಯ ಅವರಿಗೂ ಸಣ್ಣಪುಟ್ಟ ಗಾಯಗಳಾಗಿವೆ. ವಿಶಾಲಾಕ್ಷಿ ಅವರ ಕಾರಿನಲ್ಲಿದ್ದ ಮೂವರು ಕಾರ್ಮಿಕರಿಗೂ ಗಾಯಗಳಾಗಿವೆ. ಕಾರ್ಮಿಕರು ವೀರಾಜಪೇಟೆ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪೊನ್ನಂಪೇಟೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
- ಎನ್.ಎನ್. ದಿನೇಶ್