ಸೋಮವಾರಪೇಟೆ,ಸೆ.16: ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಮೂಲಕ ಶೇ.5ರಷ್ಟು ಡಿವಿಡೆಂಟ್ ಹಣವನ್ನು ಪ್ರಕೃತಿ ವಿಕೋಪದಿಂದ ಸಂತ್ರಸ್ತರಾದ ಕುಟುಂಬಗಳಿಗೆ ನೀಡುವಂತೆ ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ವಾರ್ಷಿಕ ಮಹಾಸಭೆಯಲ್ಲಿ ನಿರ್ಣಯ ಕೈಗೊಳ್ಳಲಾಯಿತು.
ಪಟ್ಟಣದ ಚನ್ನಬಸಪ್ಪ ಸಭಾಂಗಣದಲ್ಲಿ ಸಂಘದ ಅಧ್ಯಕ್ಷ ಬಿ.ಡಿ. ಮಂಜುನಾಥ್‍ರವರ ಅಧ್ಯಕ್ಷತೆಯಲ್ಲಿ ನಡೆದ ವಾರ್ಷಿಕ ಮಹಾಸಭೆಯಲ್ಲಿ ಈ ಬಗ್ಗೆ ನಿರ್ಧರಿಸಲಾಯಿತು.
ಸಂಘವು ಕಳೆದ ಸಾಲಿನಲ್ಲಿ ರೂ. 58 ಲಕ್ಷ ನಿವ್ವಳ ಲಾಭ ಗಳಿಸಿದ್ದು, ಅದರಲ್ಲಿ ಷೇರು ಬಂಡವಾಳದಂತೆ ಸಿಗುವ ಲಾಭಾಂಶ ಸುಮಾರು ರೂ. 2 ಕೋಟಿ ಇದ್ದು, ಆ ಮೊತ್ತದಲ್ಲಿ ಶೇ. 5ರಷ್ಟು ಅಂದರೆ ಸುಮಾರು ರೂ. 10 ಲಕ್ಷ ಹಣವನ್ನು ಸಂತ್ರಸ್ತರಿಗೆ ಸಹಾಯದ ರೂಪದಲ್ಲಿ ನೀಡಲು ಸಭೆ ಒಪ್ಪಿಗೆ ನೀಡಿತು.
ಈ ಸಂದರ್ಭ ಹಿರಿಯ ಸದಸ್ಯ ಅಭಿಮನ್ಯುಕುಮಾರ್ ಮಾತನಾಡಿ, ಹಣವನ್ನು ಸರಕಾರದ ಸಂತ್ರಸ್ತರ ನಿಧಿಗೆ ಹಾಕುವದರಿಂದ ಅರ್ಹರಿಗೆ ನೇರವಾಗಿ ತಲಪುವದಿಲ್ಲ, ಅದನ್ನು ಅರ್ಹ ಫಲಾನುಭವಿಗಳ ಕೈಗೆ ಸಿಗುವಂತೆ ಮಾಡುವದು ಒಳಿತು ಎಂದರು. ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷರಾದ ಬಿ.ಡಿ. ಮಂಜುನಾಥ್, ಈಗಾಗಲೆ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್‍ನಲ್ಲಿ ಖಾತೆಯೊಂದಿಗೆ ಸಮಿತಿಯೊಂದನ್ನು ರಚಿಸಿದ್ದು, ಆ ಮೂಲಕ ನೀಡುವದು ಸೂಕ್ತ ಎಂದರು.
ಸಂಘದಲ್ಲಿ ಸದಸ್ಯರುಗಳ ಮರಣ ನಿಧಿ ರೂ. 10 ಸಾವಿರ ಇದ್ದು ಅದನ್ನು 25 ಸಾವಿರಕ್ಕೇರಿಸುವ ಯೋಜನೆಗೆ ಸಭೆ ಅನುಮೋದನೆ ನೀಡಿತು. ಸಂಘವು ಕೃಷಿ ಕ್ಷೇತ್ರ ಸೇರಿದಂತೆ ಸಂಘದ ಸದಸ್ಯರುಗಳ ಸೇವೆಯ ಮೂಲಕ ನಡೆದು ಬಂದು ಶತಮಾನೋತ್ಸವ ಆಚರಣೆಯ ಹೊಸ್ತಿಲಲ್ಲಿದೆ. 2019ನೇ ವರ್ಷವನ್ನು ಶತಮಾನೋತ್ಸವದ ವರ್ಷವಾಗಿ ವಿಭಿನ್ನ ಆಚರಣೆಯ ಮೂಲಕ ಆಚರಿಸಲು ನಿರ್ಧರಿ¸ Àಲಾಗಿದೆ ಎಂದು ಮಂಜುನಾಥ್ ತಿಳಿಸಿದರು.
2016-17ನೇ ಸಾಲಿಗಿಂತ 2017-18ನೇ ಸಾಲಿನಲ್ಲಿ ಸುಮಾರು 10 ಲಕ್ಷ ಹೆಚ್ಚಿನ ನಿವ್ವಳ ಲಾಭ ಗಳಿಸಿದೆ. ಸಂಘದ ಸದಸ್ಯರುಗಳು, ಅಡಳಿತ ಮಂಡಳಿ, ಸಿಬ್ಬಂದಿ ವರ್ಗ ಹಾಗೂ ಅಧಿಕಾರಿಗಳ ಸಂಪೂರ್ಣ ಸಹಕಾರದಿಂದ ಸಂಘ ಉತ್ತಮ ಕಾರ್ಯನಿರ್ವಹಿಸುತ್ತಾ ಜಿಲ್ಲೆಯಲ್ಲಿಯೇ ಉತ್ತಮ ಕಾರ್ಯನಿರ್ವಹಿಸುತ್ತಿರುವ ಸಂಘ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.
ಕಳೆದ ಶೈಕ್ಷಣಿಕ ವರ್ಷದಲ್ಲಿ 7ನೇ ತರಗತಿ, ಎಸ್‍ಎಸ್‍ಎಲ್‍ಸಿ ಹಾಗೂ ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅತೀ ಹೆಚ್ಚು ಅಂಕ ಗಳಿಸಿದ ಸಂಘದ ಸದಸ್ಯರುಗಳ ಮಕ್ಕಳಿಗೆ ಪ್ರೋತ್ಸಾಹ ಧನವನ್ನು ವಿತರಿಸಲಾಯಿತು.
ವೇದಿಕೆಯಲ್ಲಿ ಸಂಘದ ಉಪಾಧ್ಯಕ್ಷ ಕೆ.ಜಿ. ಸುರೇಶ್, ನಿರ್ದೇಶಕರುಗಳು ಹಾಗೂ ಸಂಘದ ಪ್ರಭಾರ ಕಾರ್ಯನಿರ್ವಹಣಾಧಿಕಾರಿ ಎಚ್.ಪಿ. ರವೀಂದ್ರ, ಲೆಕ್ಕಿಗರಾದ ಪಿ. ಅನಿಲ್‍ಕುಮಾರ್ ಉಪಸ್ಥಿತರಿದ್ದರು.