ಮಡಿಕೇರಿ, ಸೆ. 12: ಕೊಡಗು ಜಿಲ್ಲೆಯಲ್ಲಿ ಇತ್ತೀಚೆಗೆ ಘಟಿಸಿದ ಭಾರೀ ಪ್ರಕೃತಿ ವಿಕೋಪದ ಸಂದರ್ಭ ಅನೇಕ ಪತ್ರಕರ್ತರ ಮನೆಗಳಿಗೆ ಹಾನಿಯಾಗಿದ್ದು, ಕೆಲವರು ಮನೆಗಳನ್ನು ಕಳೆದುಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿ ಕೊಡಗು ಜಿಲ್ಲಾ ಪತ್ರಕರ್ತರ ಸಂಘದ ವತಿಯಿಂದ ಸಂತ್ರಸ್ತ ಪತ್ರಕರ್ತರಿಗೆ ಸರ್ಕಾರದ ನೆರವು ಕೋರಿ ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ. ಮಹೇಶ್ ಅವರಿಗೆ ಇಂದು ಮನವಿ ಸಲ್ಲಿಸಲಾಯ್ತು. ಸಂಘದ ಅಧ್ಯಕ್ಷೆ ಬಿ.ಆರ್. ಸವಿತಾರೈ ಸಂಘದ ಪರವಾಗಿ ಸಚಿವರಿಗೆ ಲಿಖಿತ ಮನವಿ ಹಾಗೂ ಸಂತ್ರಸ್ತ ಪತ್ರಕರ್ತರು ಸಲ್ಲಿಸಿದ್ದ ಅರ್ಜಿಗಳನ್ನು ದಾಖಲೆ ಸಹಿತ ಸಲ್ಲಿಸಿದರು.
ಈ ವೇಳೆ ಸಚಿವ ಸಾ.ರಾ.ಮಹೇಶ್ ಅವರು ದಾಖಲೆಗಳನ್ನು ಪರಿಶೀಲಿಸಿ, ಇಂತಹ ಪ್ರಕರಣಗಳಿಗೆ ಖಂಡಿತ ಪರಿಹಾರ ನೀಡಲಾಗುವದು ಎಂದರು. ಅಲ್ಲದೆ, ತಕ್ಷಣ ಅಪರ ಜಿಲ್ಲಾಧಿಕಾರಿ ಸತೀಶ್‍ಕುಮಾರ್ ಅವರನ್ನು ಸ್ಥಳಕ್ಕೆ ಕರೆಸಿ, ಸಂತ್ರಸ್ತ ಪತ್ರಕರ್ತರಿಗೆ ಕೂಡಲೇ ಸೂಕ್ತ ಪರಿಹಾರ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳುವಂತೆ ಸೂಚನೆ ನೀಡಿದರು. ಇದೇ ಸಂದರ್ಭ ಸಂಘದ ಹಲವು ಬೇಡಿಕೆಗಳ ಬಗ್ಗೆ ಸಚಿವರ ಗಮನ ಸೆಳೆಯಲಾಯಿತು.
ಈ ವೇಳೆ ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹಾಜರಿದ್ದರು. ಪತ್ರಕರ್ತರ ಸಂಘದ ರಾಜ್ಯ ಸಮಿತಿ ಸದಸ್ಯ ಅಜ್ಜಮಾಡ ರಮೇಶ್ ಕುಟ್ಟಪ್ಪ, ಪ್ರಧಾನ ಕಾರ್ಯದರ್ಶಿ ಅನಿ ಕಾರ್ಯಪ್ಪ, ಖಜಾಂಚಿ ಎಂ.ಕೆ. ಅರುಣ್‍ಕುಮಾರ್, ಕಾರ್ಯದರ್ಶಿ ಅನಂದ್ ಕೊಡಗು, ನಿರ್ದೇಶಕರುಗಳಾದ ಎಂ.ಎನ್. ನಾಸಿರ್,À ಮಲ್ಲ್ಲಿಕಾರ್ಜುನ್, ಕುಪ್ಪಂಡ ದತ್ತಾತ್ರಿ, ಮಂಜು, ಪ್ರೇಮ್‍ಕುಮಾರ್, ಪತ್ರಕರ್ತರಾದ ಕಿಶೋರ್‍ರೈ, ಲಕ್ಷ್ಮೀಶ್, ದಿವಾಕರ್, ಮತ್ತಿತರರು ಹಾಜರಿದ್ದರು.