ಸೋಮವಾರಪೇಟೆ, ಸೆ.12: ಹೊಳೆ ತೊರೆಗಳಿಂದ ಅಕ್ರಮವಾಗಿ ಮರಳು ತೆಗೆಯುವ ಪ್ರಕರಣವನ್ನು ಪತ್ತೆಹಚ್ಚಿರುವ ಗಣಿ ಮತ್ತು ಭೂ ವಿಜ್ಞಾನ ಇಲಾಖಾಧಿಕಾರಿಗಳು, ವಾಹನ ಸಹಿತ ಪರಿಕರಗಳನ್ನು ವಶಕ್ಕೆ ಪಡೆದಿದ್ದಾರೆ.

ಸಮೀಪದ ಮಾದಾಪುರದ ಕುಂಬೂರು ಕಿರುಹೊಳೆಯಲ್ಲಿ ಅಕ್ರಮವಾಗಿ ಮರಳು ತೆಗೆಯುತ್ತಿದ್ದುದನ್ನು ಪತ್ತೆಹಚ್ಚಿದ ಅಧಿಕಾರಿಗಳ ತಂಡ, 1 ಪಿಕ್ ಅಪ್ ವಾಹನ, ಮರಳು ಸೇರಿದಂತೆ ಇತರ ಪರಿಕರಗಳನ್ನು ವಶಕ್ಕೆ ಪಡೆದಿದ್ದು, ಆರೋಪಿ ಕುಂಬೂರಿನ ಶಿವು ಎಂಬಾತನ ವಿರುದ್ಧ ಮೊಕದ್ದಮೆ ದಾಖಲಿಸಲಾಗಿದೆ.

ಇದರೊಂದಿಗೆ ತಾಕೇರಿ ಗ್ರಾಮದ ಹೊಳೆಯಲ್ಲಿ ಮರಳು ತೆಗೆಯುತ್ತಿದ್ದ ಸ್ಥಳಕ್ಕೆ ತೆರಳಿದ ಅಧಿಕಾರಿಗಳು ಧಾಳಿ ನಡೆಸುತ್ತಿದ್ದಂತೆ ಅಕ್ರಮವಾಗಿ ಮರಳು ತೆಗೆಯುತ್ತಿದ್ದವರು ಸ್ಥಳದಿಂದ ಪರಾರಿಯಾಗಿದ್ದಾರೆ.

ಸ್ಥಳದಲ್ಲಿದ್ದ 1 ಪಿಕ್‍ಅಪ್ ವಾಹನ, ಮರಳು, ಕಬ್ಬಿಣದ ತೆಪ್ಪ ಸೇರಿದಂತೆ ಇತರ ಪರಿಕರಗಳನ್ನು ವಶಕ್ಕೆ ಪಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಭೂ ವಿಜ್ಞಾನಿ ಕೆ.ಎಸ್. ನಾಗೇಂದ್ರಪ್ಪ ಅವರು, ಸೋಮವಾರಪೇಟೆ ಪೊಲೀಸ್ ಠಾಣೆಗೆ ಒಪ್ಪಿಸಿದ್ದು, ಆರೋಪಿಗಳ ವಿರುದ್ಧ ದೂರು ನೀಡಿದ್ದಾರೆ. ಕಾರ್ಯಾಚರಣೆಯಲ್ಲಿ ಇಲಾಖಾ ಸಿಬ್ಬಂದಿ ಅಚ್ಚಯ್ಯ ಭಾಗವಹಿಸಿದ್ದರು.

ಸದ್ಯ ಮರಳುಗಾರಿಕೆಗೆ ನಿರ್ಬಂಧ ವಿಧಿಸಿದ್ದು, ಅಲ್ಲಲ್ಲಿ ಅಕ್ರಮವಾಗಿ ಮರಳುಗಾರಿಕೆ ನಡೆಯುತ್ತಿದ್ದರೆ ದೂ:08272 228523 ಸಂಖ್ಯೆಗೆ ಮಾಹಿತಿ ನೀಡುವಂತೆ ಭೂ ವಿಜ್ಞಾನಿ ನಾಗೇಂದ್ರಪ್ಪ ಮಾಹಿತಿ ನೀಡಿದ್ದಾರೆ.