ಮಡಿಕೇರಿ, ಸೆ.14 : ಕೊಡಗು ಜಿಲ್ಲಾ ವಾಣಿಜ್ಯೋದ್ಯಮಿಗಳ ವಿವಿಧೋದ್ದೇಶ ಸಹಕಾರ ಸಂಘ 2018 ಮಾರ್ಚ್ 31ರ ಅಂತ್ಯಕ್ಕೆ 30.16 ಲಕ್ಷದಷ್ಟು ಲಾಭ ಗಳಿಸಿದ್ದು, ಈ ಬಾರಿ ಶೇ.13 ರಷ್ಟು ಡಿವಿಡೆಂಡನ್ನು ಘೋಷಿಸಲು ನಿರ್ಧರಿಸಲಾಗಿದೆ ಎಂದು ಸಂಘದ ಅಧ್ಯಕ್ಷ ಕೆ.ಎಂ.ಗಣೇಶ್ ತಿಳಿಸಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ 16 ವರ್ಷಗಳಿಂದ ತನ್ನ ಸ್ವಂತ ಬಂಡವಾಳದಿಂದ ವ್ಯವಹಾರ ನಡೆಸುತ್ತಾ ಬಂದಿರುವ ಸಂಘ ಆರ್ಥಿಕ ಪ್ರಗತಿಯೊಂದಿಗೆ ಸಾಮಾಜಿಕ ಕಳಕಳಿಯನ್ನು ಕೂಡ ಹೊಂದಿದೆ ಎಂದು ತಿಳಿಸಿದರು.
ಸಂಘದಲ್ಲಿ 1851 ಸದಸ್ಯರಿದ್ದು, 66.24 ಲಕ್ಷ ಪಾಲು ಬಂಡವಾಳ ಸಂಗ್ರಹವಾಗಿದೆ. ಅಡಮಾನ ಸಾಲ, ಜಾಮೀನು ಸಾಲ, ಆಭರಣ ಸಾಲ, ಪಿಗ್ಮಿ ಓವರ್ ಡ್ರಾಫ್ಟ್ ಸಾಲ ಹಾಗೂ ಸಿಬ್ಬಂದಿಗಳಿಗೆ ಆಸಾಮಿ ಸಾಲವನ್ನು ನೀಡಲಾಗುತ್ತಿದೆ. 2018 ಮಾರ್ಚ್ ಅಂತ್ಯಕ್ಕೆ 24.85 ಕೋಟಿ ಠೇವಣಿ ಸಂಗ್ರಹವಾಗಿದ್ದು, 9.07 ಕೋಟಿ ವಿವಿಧ ಸಾಲವನ್ನು ನೀಡಲಾಗಿದೆ. 2006-07ನೇ ಸಾಲಿನಿಂದ ಸಂಘ ಲಾಭದಲ್ಲಿ ಮುನ್ನಡೆಯುತ್ತಿದ್ದು, ಈ ಬಾರಿಯ ಆರ್ಥಿಕ ಪ್ರಗತಿ ತೃಪ್ತಿ ತಂದಿದೆಯೆಂದು ಕೆ.ಎಂ. ಗಣೇಶ್ ತಿಳಿಸಿದರು.
2014-15ನೇ ಸಾಲಿನಲ್ಲಿ ನಗರದ ಕೊಹಿನೂರು ರಸ್ತೆಯಲ್ಲಿ ಸ್ವಂತ ಕಟ್ಟಡ ಖರೀದಿಸಲಾಗಿದೆ. 2016-17ನೇ ಸಾಲಿನಲ್ಲಿ ಈ ಹಿಂದೆ ಇದ್ದ ಕಟ್ಟಡದ ಮೇಲೆ ಮತ್ತೊಂದು ಅಂತಸ್ತನ್ನು ನಿರ್ಮಾಣ ಮಾಡಲಾಗಿದೆ. ಪ್ರಸ್ತುತ ಸಂಘವು ಬಾಡಿಗೆ ಕಟ್ಟಡದಲ್ಲಿ ಕಾರ್ಯ ನಿರ್ವಹಿಸುತ್ತಿದ್ದು, ಮುಂದಿನ ದಿನಗಳಲ್ಲಿ ಸಂಘದ ಮುಖ್ಯ ಕಚೇರಿಯನ್ನು ಸ್ವಂತ ಕಟ್ಟಡಕ್ಕೆ ಸ್ಥಳಾಂತರಿಸಲು ತೀರ್ಮಾನಿಸಲಾಗಿದೆ ಎಂದರು.
ಸಂಘದಲ್ಲಿ ಒಟ್ಟು 28 ಮಂದಿ ಪಿಗ್ಮಿ ಸಂಗ್ರಹಗಾರರಿದ್ದು, ನಿರಖು ಠೇವಣಿಗಳಿಗೆ ಇತರ ಎಲ್ಲ ಬ್ಯಾಂಕ್‍ಗಳಿಗಿಂತಲೂ ಹೆಚ್ಚಿನ ಬಡ್ಡಿದರವನ್ನು ನೀಡಲಾಗುತ್ತಿದೆ. 2007ರಲ್ಲಿ ಸೋಮವಾರಪೇಟೆ ತಾಲೂಕಿನ ಗ್ರಾಹಕರ ಅನುಕೂಲಕ್ಕಾಗಿ ಕುಶಾಲನಗರದಲ್ಲಿ ಮತ್ತು 2012 ರಲ್ಲಿ ವೀರಾಜಪೇಟೆ ತಾಲ್ಲೂಕಿನವರಿಗಾಗಿ ಸಿದ್ದಾಪುರದಲ್ಲಿ ಆರಂಭಗೊಂಡ ಸಂಘದ ಶಾಖೆ ಆರ್ಥಿಕ ಪ್ರಗತಿ ಸಾಧಿಸಿದೆ. ವಾಣಿಜ್ಯೋದ್ಯಮಿಗಳು ತಮ್ಮ ದಿನನಿತ್ಯದ ಆರ್ಥಿಕ ವ್ಯವಹಾರಗಳನ್ನು ಸಂಘದ ಮೂಲಕವೆ ಮಾಡುವಂತೆ ಕೆ.ಎಂ.ಗಣೇಶ್ ಮನವಿ ಮಾಡಿದರು.
ಮುಂದಿನ ದಿನಗಳಲ್ಲಿ ಸುಂಟಿಕೊಪ್ಪ, ಶನಿವಾರಸಂತೆ, ಕೊಡ್ಲಿಪೇಟೆ, ವೀರಾಜಪೇಟೆ, ಗೋಣಿಕೊಪ್ಪ ಮತ್ತು ಪೊನ್ನಂಪೇಟೆಗಳಿಗೆ ತೆರಳಿ ಸಾಲ ವಿತರಿಸುವ ಯೋಜನೆಯನ್ನು ರೂಪಿಸಲಾಗಿದೆ ಎಂದರು.
ವಾರ್ಷಿಕ ಡಿವಿಡೆಂಡನ್ನು ಸದಸ್ಯರ ಖಾತೆಗೆ ಜಮಾ ಮಾಡಬೆÉೀಕಾಗಿರುವ ದರಿಂದ ಪ್ರತಿಯೊಬ್ಬ ಸದಸ್ಯನು ಸಂಘದಲ್ಲಿ ಖಾತೆ ಹೊಂದಬೇಕೆಂದು ಗಣೇಶ್ ಮನವಿ ಮಾಡಿದರು. ಸಾಮಾಜಿಕ ಕಳಕಳಿಯನ್ನು ಹೊಂದಿರುವ ಸಹಕಾರ ಸಂಘ ಮಹಾಮಳೆಗೆ ಸಿಲುಕಿ ಸಂತ್ರಸ್ತರಾಗಿರುವ 150ಕ್ಕೂ ಹೆಚ್ಚು ಮಂದಿಗೆ ಪರಿಹಾರ ಕೇಂದ್ರದ ಮೂಲಕ ಎಲ್ಲಾ ಸೌಲಭ್ಯಗಳನ್ನು ನೀಡಿದೆ. ಪ್ರಸ್ತುತ 75 ಮಂದಿ ಸಂಘದ ಪರಿಹಾರ ಕೇಂದ್ರದಲ್ಲಿ ತಂಗಿದ್ದಾರೆ ಎಂದು ಕೆ.ಎಂ. ಗಣೇಶ್ ತಿಳಿಸಿದರು.
ಸಂಘದ 17ನೇ ವಾರ್ಷಿಕ ಮಹಾಸಭೆ ಸೆ.17 ರಂದು ಬೆಳಿಗ್ಗೆ 11 ಗಂಟೆಗೆ ನಗರದ ಕೊಹಿನೂರು ರಸ್ತೆಯಲ್ಲಿರುವ ಸಂಘದ ನೂತನ ಕಟ್ಟಡದ ಸಭಾಂಗಣದಲ್ಲಿ ನಡೆಯಲಿದೆ.
ಸುದ್ದಿಗೋಷ್ಠಿಯಲ್ಲಿ ನಿರ್ದೇಶಕರುಗಳಾದ ಗಿರೀಶ್ ಗಣಪತಿ, ಬಿ.ಆರ್. ಸವಿತಾ ರೈ, ಮುನೀರ್ ಅಹಮ್ಮದ್, ಅಬ್ದುಲ್ ರೆಹೆಮಾನ್ ಹಾಗೂ ಸದಸ್ಯ ಬಾಬು ಚಂದ್ರ ಉಳ್ಳಾಗಡ್ಡಿ ಉಪಸ್ಥಿತರಿದ್ದರು.