ಮಡಿಕೇರಿ, ಸೆ. 14: ಕೇವಲ ಒಂದು ತಿಂಗಳ ಅವಧಿಯಲ್ಲಿ ಏನೆಲ್ಲಾ ಘಟಿಸಿ ಹೋಗಿದೆ... ಇವೆಲ್ಲವೂ ಕನಸೋ... ನನಸೋ... ಎಂದು ಊಹಿಸಿಕೊಳ್ಳುವಂತಾಗಿದೆ. ಈ 30 ದಿನಗಳ ಕೊಡಗಿನ ಪರಿಸ್ಥಿತಿ ಕಲ್ಪನೆಗೂ ಸಿಗದಂತೆ ಈ ಪುಟ್ಟ ಜಿಲ್ಲೆ ಇಡೀ ದೇಶದಲ್ಲಿ ಸುದ್ದಿಯಾಗಿಬಿಟ್ಟಿದೆ. ಈಗ ಬಿಸಿಲು ಕಾಯುತ್ತಿದೆ ಮಳೆ ಕಡಿಮೆಯಾಗಿದೆ ಆದರೆ ಎಲ್ಲವೂ ಅಲ್ಲೋಲ ಕಲ್ಲೋಲ.
ಹೌದು 2018ರ ಈ ಅಲ್ಪಾವಧಿಯಲ್ಲಿ ಮಲೆನಾಡು ಜಿಲ್ಲೆ ಕೊಡಗು ಅಕ್ಷರಶಃ ನಲುಗಿ ಹೋಗಿದೆ. ಅದೆಷ್ಟೋ ಜನರಿಗೆ ಆಸ್ತಿ - ಪಾಸ್ತಿಗಳಿಲ್ಲ. ಇರಲು ಸೂರಿಲ್ಲ ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಹಲವೆಡೆಗಳಿಗೆ ರಸ್ತೆಗಳೇ ಇಲ್ಲ. ಬಸ್ ಮತ್ತಿತರ ವಾಹನ ಸಂಚಾರವಿಲ್ಲ. ತಮ್ಮಷ್ಟಕ್ಕೆ ಬದುಕು ಕಂಡುಕೊಂಡಿದ್ದ ಹಲವಾರು ಮಂದಿ ಇದೀಗ ನಿರಾಶ್ರಿತರು ಹಲವು ಮಂದಿ ಜೀವಂತವಾಗಿ ಭೂ ಸಮಾದಿಯಾಗಿ ಹೋಗಿದ್ದಾರೆ. ಕೃಷಿ ಪ್ರಧಾನವಾದ ಜಿಲ್ಲೆಯಲ್ಲಿ ಕೃಷಿ ಫಸಲುಗಳೇ ಇಲ್ಲ. ಕಷ್ಟಪಟ್ಟು ಮಾಡಿದ್ದ ಭತ್ತದ ಗದ್ದೆಗಳಲ್ಲಿ ಭತ್ತದ ಫಸಲು ಹೋಗಲಿ ಇಲ್ಲಿ ಗದ್ದೆಗಳು ಇದ್ದವೋ ಇಲ್ಲವೋ ಎಂಬಂತೆ ಕಲ್ಲು ಮಣ್ಣಿನ ರಾಶಿ, ರಾಶಿ ಗುಡ್ಡಗಳು, ಮಣ್ಣಿನಡಿಯಲ್ಲಿ ಇನ್ನೂ ಸಿಲುಕಿರುವ ಹಲವಾರು ವಾಹನಗಳು, ಕೊಚ್ಚಿ ಬಂದು ರಾಡಿಯಾಗಿ ಬಿದ್ದಿರುವ ಮರಗಳು.
ಜೀವ ಉಳಿಸಿಕೊಳ್ಳಲು ಹಗಲು ರಾತ್ರಿ ಎನ್ನದೆ ಬೆಟ್ಟ, ಗುಡ್ಡ ಹತ್ತಿ ಬಚವಾದ ದಾರುಣತೆ. ಸೇನಾ ಜಿಲ್ಲೆ ಎಂದು ಕರೆಸಿಕೊಂಡಿರುವ ಜಿಲ್ಲೆಯಲ್ಲೇ ಸೇನಾ ಕಾರ್ಯಾಚರಣೆ, ಹೆಲಿಕಾಪ್ಟರ್‍ಗಳ ಹಾರಾಟ ರಾಜ್ಯದ ಮುಖ್ಯಮಂತ್ರಿಗಳಾಗಿ ಪ್ರಮುಖರು ದಿನಗಟ್ಟಲೆ ಪುಟ್ಟ ಜಿಲ್ಲೆಯಲ್ಲಿ ಕಂಡು ಬಂದದ್ದು. ಕೇಂದ್ರ ರಕ್ಷಣಾ ಸಚಿವರ ಭೇಟಿ. ವೈಮಾನಿಕ ಸಮೀಕ್ಷೆಗಳು ತೆರೆಯಲ್ಪಟ್ಟ ಅದೆಷ್ಟೋ ನಿರಾಶ್ರಿತರಿಗೆ ಆಶ್ರಯ ಕಲ್ಪಿಸುವ ಪರಿಹಾರ ಕೇಂದ್ರಗಳು, ಶಾಲಾ - ಕಾಲೇಜುಗಳಿಗೆ ಸುಧೀರ್ಘ ರಜೆ. ಹಾನಿಗೀಡಾದ ಕಟ್ಟಡ, ಮನೆಗಳು, ಪತ್ರಿಕಾ ಕಾರ್ಯಾಲಯಗಳು, ಡ್ರೋಣ್ ಕೆಮರಾದ ಕಾರ್ಯಾಚರಣೆ ಪ್ರವಾಸಿಗರ ಕೊಡಗು ಪ್ರವೇಶಕ್ಕೆ ನಿರ್ಬಂಧ.
ಹಸಿರಿನಿಂದ ಕೂಡಿದ್ದ ಬೆಟ್ಟ - ಗುಡ್ಡಗಳು ಕುಸಿದು ಕಾಣುವಂತಾಗಿರುವ ಕೆಂಪು ಬಣ್ಣದ ಮಣ್ಣಿನ ರಾಶಿ, ಕೊಡಗಿನತ್ತ ಧಾವಿಸಿ ಬಂದ ಲಾರಿಗಟ್ಟಲೆ, ವಾಹನ ಗಟ್ಟಲೆ ಸಾಮಾನು - ಸರಂಜಾಮುಗಳು, ಇವೆಲ್ಲವನ್ನೂ ಜೀರ್ಣಿಸಿಕೊಳ್ಳುವದು ಬಹುರ್ಶ ಕಷ್ಟಕರವೇ ಸರಿ. ಇಂತಹದ್ದೊಂದು ದುರಂತಮಯ ಘಟನೆಯನ್ನು ಕೊಡಗಿನ ಜನರು ಕಂಡಿರಲಿಲ್ಲ, ಕೇಳಿರಲಿಲ್ಲ. ಆದರೂ ಇದು ಕನಸ್ಸು ಅಲ್ಲ ನೈಜವಾಗಿ ನಡೆದು ಹೋಗಿರುವ ದಾರುಣತೆ.
ಸರಿ ಸುಮಾರು ಒಂದು ತಿಂಗಳ ಹಿಂದೆ ಆಗಸ್ಟ್ 12 ರಂದು ಭಾರತೀಯ ಹವಾಮಾನ ಇಲಾಖೆ ಭಾರೀ ಮಳೆಯ ಮುನ್ಸೂಚನೆಯನ್ನು ನೀಡಿತ್ತು. ಇದರಿಂದಾಗಿ ಮುಂಜಾಗ್ರತಾ ಕ್ರಮವಾಗಿ ಶಾಲಾ - ಕಾಲೇಜುಗಳಿಗೆ ರಜೆಯನ್ನು ಘೋಷಿಸಲಾಗಿತ್ತು. ಮರುದಿನ ಆ. 13 ರಂದು ಮೈಸೂರು - ಬಂಟ್ವಾಳ ಹೆದ್ದಾರಿಯಲ್ಲಿ ಮದೆ ಗ್ರಾ.ಪಂ.ಗೆ ಒಳಪಡುವ ಕರ್ತೋಜಿ ಎಂಬಲ್ಲಿ ಭಾರೀ ಮಳೆ - ಗಾಳಿಯ ನಡುವೆ ಭೂಕುಸಿತವುಂಟಾಗಿ ರಸ್ತೆ ಸಂಪರ್ಕ ಕಡಿತಗೊಂಡಿತ್ತು. ಈ ಮೂಲಕ ಶುರುವಿಟ್ಟುಕೊಂಡ ಮೇಘಸ್ಫೋಟ. ಅದೂ ವಿಶೇಷವಾಗಿ ಮಡಿಕೇರಿ ತಾಲೂಕಿನ ಕೆಲವೆಡೆ ಹಾಗೂ ಸೋಮವಾರಪೇಟೆ ತಾಲೂಕಿನ ಕೆಲವು ಭಾಗಗಳಲ್ಲಿ ಜಲಪ್ರಳಯವನ್ನೇ ಸೃಷ್ಟಿಸಿದ್ದನ್ನು ಬಹುಶಃ ಮರೆಯಲಾಗದು. ಆಗಸ್ಟ್ 14 ರಂದು ಭಾರೀ ಮಳೆ - ಗಾಳಿ ಇದರ ಮರುದಿನ ಆಗಸ್ಟ್ 15 ರಂದು ದೇಶದೆಲ್ಲೆಡೆ ಸಂಭ್ರಮದ ಸ್ವಾತಂತ್ರ್ಯೋತ್ಸವವಾದರೆ, ಕೊಡಗಿನಲ್ಲಿ ಈ ಆಚರಣೆಯ ಎಲ್ಲಾ ಸಡಗರಗಳು ಮರೆಯಾಗಿ ಕೇವಲ ಹೆಸರಿಗಷ್ಟೇ ಧ್ವಜಾರೋಹಣ ನಡೆಸುವಂತಾಗಿತ್ತು.
ತಾ. 13 ರಿಂದ ತಾ. 16-17ರ ತನಕ ಉಂಟಾದ ಸನ್ನಿವೇಶ ಎಲ್ಲರ ಎದೆಝಲ್ಲೆನಿಸಿತ್ತು. ಕೆಲವು ದಿನಗಳ ಪ್ರಾಕೃತಿಕ ವಿಕೋಪದ ಅಬ್ಬರಕ್ಕೆ ಮೈಯ್ಯೊಡ್ಡಿದ ಕೊಡಗು ಎಲ್ಲವನ್ನೂ ಕಳೆದುಕೊಂಡಂತಾಗಿರುವದು ಇದೀಗ ಇತಿಹಾಸದ ಪುಟಕ್ಕೆ ಸೇರಿ ಹೋಗಿದೆ. ಈ ಅವಧಿಯಲ್ಲಿ ಕೆಲಸ ನಿರ್ವಹಿಸಿರುವ ಸ್ವಯಂಸೇವಾ ಸಂಸ್ಥೆಗಳು, ರಕ್ಷಣಾತಂಡ, ವಿವಿಧ ಇಲಾಖೆ, ಸಾರ್ವಜನಿಕರು ಈ ರೀತಿಯಾಗಿ ಎಲ್ಲರೂ ಸ್ಮರಣೀಯರು.
ಇನ್ನೇನಿದ್ದರೂ ಕೊಡಗು ‘ಫೀನಿಕ್ಸ್’ ಪಕ್ಷಿಯಂತೆ ಮೇಲೆದ್ದು ಬರಬೇಕಾಗಿದೆ. ಕುಸಿದಿರುವ ಕೊಡಗನ್ನು ಮತ್ತೆ ಕಟ್ಟುವ ಮೂಲಕ ಕೊಡಗಿನ ಗತವೈಭವ ಮತ್ತೆ ಮರುಕಳಿಸಬೇಕಿದೆ. ಈ ನಿಟ್ಟಿನಲ್ಲಿ ಜಿಲ್ಲೆಯ ಎಲ್ಲಾ ಭಾಗಗಳೂ ಇಂತಹ ಪರಿಸ್ಥಿತಿಗೆ ಒಳಗಾಗದಿದ್ದರೂ ನೊಂದವರಿಗೆ ಸ್ಪಂದಿಸಲು ಜಿಲ್ಲೆಯ ಜನರು ಕೈಜೋಡಿಸುತ್ತಿದ್ದಾರೆ. ಜಿಲ್ಲೆಯ ಹೊರ ಭಾಗದಲ್ಲಿರುವವರು ಕೂಡ ಸ್ಪಂದಿಸಿದ್ದಾರೆ. ಈ ನಡುವೆ ಎದುರಾದ ಎಲ್ಲಾ ಹಬ್ಬ - ಹರಿದಿನಗಳನ್ನು ಕೇವಲ ಸಂಪ್ರದಾಯಕ್ಕೆ ಮಾತ್ರ ಸೀಮಿತಗೊಳಿಸಿ ಮಿಡಿಯುವ ಮೂಲಕ ನೊಂದವರಿಗೆ ಧೈರ್ಯ ತುಂಬಿದ್ದಾರೆ.
ಇದು ಸಾಮಾನ್ಯ ಜನತೆಯ ಮಾನವೀಯತೆಯಾಗಿದೆ. ಇನ್ನೇನಿದ್ದರೂ ಎಲ್ಲವನ್ನೂ ಅರಿತಿರುವ ಪರಿಸ್ಥಿತಿಯನ್ನು ಅನುಭವಿಸಿ ನಿಭಾಯಿಸಿರುವ ಜಿಲ್ಲೆಯ ಅಧಿಕಾರಿಗಳು ಕೊಡಗಿಗೆ ಹೊರ ಜಿಲ್ಲೆಯಿಂದ ನಿಯೋಜಿತರಾಗಿ ಕೆಲಸ ನಿರ್ವಹಿಸಿರುವ ಅಧಿಕಾರಿಗಳು, ಜನಪ್ರತಿನಿಧಿಗಳು ಸರಕಾರಗಳು ದೃಢ ಮನಸ್ಸು ಮಾಡಬೇಕು. ಜರ್ಜರಿತವಾದ ಜಿಲ್ಲೆಯನ್ನು ಅವಲೋಕಿಸಲು ಕೇಂದ್ರದ ವಿಶೇಷ ತಂಡವೂ ಆಗಮಿಸಿ ಖುದ್ದು ಪರಿವೀಕ್ಷಣೆ ನಡೆಸಿ ತೆರಳಿದೆ. ಈ ತಂಡವೂ ಸೇರಿದಂತೆ ಅಧಿಕಾರಿ ವರ್ಗದವರು, ಜನಪ್ರತಿನಿಧಿಗಳು, ರಾಜ್ಯ ಹಾಗೂ ಕೇಂದ್ರ ಸರಕಾರಗಳು ಸಮರ್ಪಕವಾದ ಕಾರ್ಯಯೋಜನೆಯನ್ನು ಹಮ್ಮಿಕೊಂಡು ಈ ಜಿಲ್ಲೆಯನ್ನು ಪುನರ್ ನಿರ್ಮಾಣ ಮಾಡಲು ಪಣತೋಡಬೇಕಿದೆ. ಎಲ್ಲಾ ಭಿನ್ನಾಭಿಪ್ರಾಯಗಳು ಮರೆಯಾಗಿ ಸಂಘಟನಾತ್ಮಕವಾಗಿ ಕೊಡಗನ್ನು ಕಟ್ಟುವದು ಮುಂದಿನ ಅಗತ್ಯತೆ ಎಂಬ ಅರಿವು ಎಲ್ಲರಲ್ಲಿ ಮೂಡು ವಂತಾಗಲಿ. - ಶಶಿ ಸೋಮಯ್ಯ