ಮಡಿಕೇರಿ, ಸೆ. 12: ಮಡಿಕೇರಿಯ ಸೇವಾ ಭಾರತಿ ಹಾಗೂ ಲಯನ್ಸ್ ಕ್ಲಬ್ sಸಂಸ್ಥೆಗಳ ಸಹಕಾರದಿಂದ ಮತ್ತೊಂದು ನೊಂದ ಕೊಡಗಿನ ಯುವತಿಗೆ ಕಂಕಣ ಭಾಗ್ಯ ದೊರೆತಿದೆ. ಮಕ್ಕಂದೂರಿನ ನಿವಾಸಿ ರಂಜಿತಾಳ ವಿವಾಹ ಕೇರಳ ಮೂಲದ ಯುವಕ ರಂಜಿತ್‍ನೊಡನೆ ನಿಶ್ಚಯವಾಗಿತ್ತು. ಆದರೆ ಕೊಡಗಿನಲ್ಲಾದ ಪ್ರಕೃತಿ ವಿಕೋಪದಲ್ಲಿ ರಂಜಿತಾಳ ಕುಟುಂಬ ತನ್ನ ಮನೆ ಹಾಗೂ ಇತರ ಆಸ್ತಿಗಳನ್ನೆಲ್ಲ ಕಳೆದುಕೊಂಡು, ನೊಂದ ಕುಟುಂಬ ಮೊದಲಿಗೆ ಮಡಿಕೇರಿಯ ಬ್ರಾಹ್ಮಣ ಕಲ್ಯಾಣ ಮಂಟಪ ಕೇಂದ್ರದಲ್ಲಿ ನೆಲೆಸಿ ನಂತರ ಕುಶಾಲನಗರದ ವಾಲ್ಮೀಕಿ ಭವನದಲ್ಲಿ ನೆಲೆಸಿತ್ತು.

“ಪ್ರಕೃತಿ ವಿಕೋಪದ ನಂತರ ಮದುವೆಯ ಸಂಭ್ರಮ ಬೇಡವೆಂದು ನಾವು ನಿರ್ಧರಿಸಿದ್ದೆವು. ಆದರೆ ನಮ್ಮ ನೋವು ಅರಿತ ಸೇವಾ ಭಾರತಿಯ ತಂಡ ವಿವಾಹವನ್ನು ನಾವು ನಡೆಸಿಕೊಡುತ್ತೇವೆ ಎಂದು ಭರವಸೆಯಿತ್ತರು,” ಎನ್ನುತ್ತಾರೆ ವಧು ರಂಜಿತ. ಕೊಟ್ಟ ಭರವಸೆಯಂತೆ, ಸೇವಾ ಭಾರತಿ ಹಾಗೂ ಲಯನ್ಸ್ ಕ್ಲಬ್ ಮಡಿಕೇರಿಯ ತಂಡ ವಧು ರಂಜಿತಾಳ ಮದುವೆಯನ್ನು ರಂಜಿತ್‍ನೊಡನೆ ಬುಧವಾರದಂದು ಶ್ರೀ ಓಂಕಾರೇಶ್ವರ ದೇಗುಲದಲ್ಲಿ ಸಾಂಪ್ರದಾಯಿಕವಾಗಿ ನೆರವೇರಿಸಿ ಕೊಟ್ಟರು. “ಇದು ಕ್ಲಬ್‍ನ ವತಿಯಿಂದ, ಸೇವಾಭಾರತಿ ಹಾಗೂ ಇತರ ಅನೇಕರ ಸಹಕಾರದಿಂದ ನಡೆಸಲ್ಪಟ್ಟ ಎರಡನೆಯ ಇಂತಹ ಮದುವೆ,” ಎಂದು ಲಯನ್ಸ್ ಕ್ಲಬ್ ಅಧ್ಯಕ್ಷರಾದ ದಾಮೋದರ್ ಸಂತಸದಿಂದ ತಿಳಿಸಿದರು.

ಮಂಗಳವಾರ ಸಾಯಂಕಾಲ ದಂದು ರಂಜಿತಾಳ ಮೆಹೆಂದಿ ಕಾರ್ಯಕ್ರಮ ಸೇವಾಭಾರತಿ ಮಹೇಶ್‍ರವರ ಮನೆಯಲ್ಲಿ ನಡೆಸಿ, ವಿವಾಹದ ನಂತರ ಭೋಜನವನ್ನು ಬ್ರಾಹ್ಮಣರ ಕಲ್ಯಾಣ ಮಂಟಪದಲ್ಲಿ ನಡೆಸಲಾಯಿತು. “ನಾವು ಮನೆ ಮಠ ಕಳೆದುಕೊಂಡ ನಂತರ ಮಗಳ ಮದುವೆಯನ್ನು ರದ್ದು ಮಾಡಬೇಕೆಂದಿದ್ದೆವು. ಆದರೆ ಇತರರ ಸಹಕಾರದಿಂದ ನನ್ನ ಮಗಳ ಮದುವೆ ಸುಸೂತ್ರವಾಗಿ ನೆರವೇರಿತು,” ಎಂದು ರಂಜಿತಾಳ ತಂದೆ ಸಂಜೀವ ಸಂತಸ ಹಂಚಿಕೊಂಡರು.