ಸೋಮವಾರಪೇಟೆ, ಸೆ. 12:
ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಂದೂ ಬತ್ತದ ಹೊನ್ನಮ್ಮನ ಕೆರೆಗೆ ಊರಿನ ಪ್ರಮುಖರು, ನವವಿವಾಹಿತ ದಂಪತಿಗಳು ಬಾಗಿನ ಅರ್ಪಿಸಿ ಸನ್ಮಂಗಳಕ್ಕೆ ಪ್ರಾರ್ಥಿಸಿದರು.
ವರ್ಷಂಪ್ರತಿ ಗೌರಿ ಹಬ್ಬದ ದಿನದಂದು ನೂರಾರು ನವ ದಂಪತಿಗಳು ಸೇರಿದಂತೆ ಸಾವಿರಾರು ಮಂದಿ ಆಗಮಿಸಿ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸಿ ಸರ್ವಮಂಗಳಕ್ಕಾಗಿ ಪ್ರಾರ್ಥಿಸುವದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ಧತಿ. ಇಂದಿನವರೆಗೂ ಈ ದೈವಿಕ ಕಾರ್ಯಗಳನ್ನು ಗ್ರಾಮಸ್ಥರು ಅಚ್ಚುಕಟ್ಟಾಗಿ ಪಾಲಿಸಿಕೊಂಡು ಬಂದಿದ್ದಾರೆ.
ಇಂದು ಬೆಳಗ್ಗಿನಿಂದಲೇ ಹೊನ್ನಮ್ಮತಾಯಿ ಕ್ಷೇತ್ರದಲ್ಲಿ ವಿಶೇಷ ಪೂಜೆಗಳು ಪ್ರಾರಂಭ ಗೊಂಡವು. ಊರಿನ ಪಟೇಲರ ಮನೆಯಿಂದ ಬಾಗಿನವನ್ನು ಮೆರವಣಿಗೆ ಮೂಲಕ ತಂದು ದೇವಾಲಯ ದಲ್ಲಿರುವ ಬಂಗಾರದ ಕಲ್ಲಿನ ಮೇಲಿಟ್ಟು ಪೂಜೆ ಸಲ್ಲಿಸಿದ ನಂತರ ಕೆರೆಗೆ ಅರ್ಪಿಸಲಾಯಿತು. ನಂತರ ಗ್ರಾಮಸಮಿತಿ ಸೇರಿದಂತೆ ಇತರರು ಬಾಗಿನ ಅರ್ಪಿಸಿದರು.
ಕ್ಷೇತ್ರಕ್ಕೆ ಆಗಮಿಸಿದ ಭಕ್ತರು ಪೂಜೆಯ ನಂತರ ದೇವಾಲಯದ ಅನತಿದೂರದಲ್ಲಿರುವ ಗವಿ ಬೆಟ್ಟವನ್ನು ಏರಿ ಪ್ರಕೃತಿಯ ಸೌಂದರ್ಯವನ್ನು ಕಣ್ತುಂಬಿಕೊಂಡರು. ಬೆಟ್ಟ ಏರುವ ಕಾಲುಹಾದಿಯಲ್ಲಿ ಎದುರಾಗುವ ಕಲ್ಲಿನ ಗುಹೆಯೊಳಗೆ ನುಗ್ಗಿ ತಿಳಿನೀರಿನ ತೀರ್ಥ ಸೇವಿಸಿದರು.
ಶ್ರೀಬಸವೇಶ್ವರ ಹಾಗೂ ಸ್ವರ್ಣಗೌರಿ ಹೊನ್ನಮ್ಮ ಟ್ರಸ್ಟ್‍ನಿಂದ ಆಯೋಜನೆಗೊಂಡಿದ್ದ ಸ್ವರ್ಣಗೌರಿ ಮಹೋತ್ಸವ ಮತ್ತು ಬಾಗಿನ ಅರ್ಪಣೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದ ಭಕ್ತಾದಿಗಳಿಗೆ ಗ್ರಾಮಸ್ಥರಿಂದ ಅನ್ನದಾನ ಏರ್ಪಡಿಸಲಾಗಿತ್ತು.
- ವಿಜಯ್ ಹಾನಗಲ್