ಮಡಿಕೇರಿ, ಸೆ. 11: ಮದೆನಾಡುವಿನಲ್ಲಿ ಹೆದ್ದಾರಿ ಕುಸಿದು ಸಾರಿಗೆ ಸಂಪರ್ಕ ಕಡಿತಗೊಂಡು ಸುಮಾರು ಒಂದು ತಿಂಗಳಾಗಿದ್ದರೂ, ಹೆದ್ದಾರಿ ಅಭಿವೃದ್ಧಿ ಅಧಿಕಾರಿಗಳ ವಿಳಂಬ ನೀತಿಯಿಂದ ಸಾರ್ವ ಜನಿಕರಿಗೆ ತೀವ್ರ ತೊಂದರೆಯಾಗಿದೆ ಎಂದು ಮದೆ ಗ್ರಾಮಸ್ಥರು ಅಸಮಾಧಾನ ವ್ಯಕ್ತಪಡಿಸುತ್ತಾ, ಪ್ರತಿಭಟನೆಯ ಸುಳಿವು ನೀಡಿದ್ದಾರೆ.

ಈ ಬಗ್ಗೆ ಖುದ್ದು ಕಾಮಗಾರಿ ಪರಿಶೀಲಿಸಿದ ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ಈ ಬಗ್ಗೆ ಜಿಲ್ಲಾಧಿಕಾರಿಗಳ ಗಮನ ಸೆಳೆದು ಲಘು ವಾಹನಗಳೊಂದಿಗೆ ಬಸ್ ಸೌಕರ್ಯ ಕಲ್ಪಿಸುವ ಭರವಸೆ ನೀಡಿದರು.

ಇಂದು ಮದೆನಾಡುವಿನಲ್ಲಿ ಜೋಡುಪಾಲ ಬಳಿ ರಸ್ತೆ ಸಂಪರ್ಕ ಕಡಿತಗೊಂಡು, ದುರಸ್ತಿ ಕಾಮಗಾರಿ ನಡೆಯುತ್ತಿರುವ ಸ್ಥಳಕ್ಕೆ ಖುದ್ದು ಭೇಟಿ ನೀಡಿದ ಶಾಸಕರು, ತಕ್ಷಣದಿಂದ ಲಘು ವಾಹನಗಳ ಓಡಾಟಕ್ಕೆ ಅನುವು ಮಾಡಿಕೊಡಲಾಗುವದು ಎಂದರು.

ಈ ವೇಳೆ ಶಾಸಕರ ಗಮನ ಸೆಳೆದ ಗ್ರಾಮಸ್ಥರು, ಈಗಾಗಲೇ ಸಂಕಷ್ಟಕ್ಕೆ ಸಿಲುಕಿರುವ ತಮಗೆ ದುಬಾರಿ ಬಾಡಿಗೆ ಹಣ ತೆತ್ತು ವಿವಿಧೆಡೆ ತೆರಳಲು ಅಸಾಧ್ಯವಿರುವದರಿಂದ ಕೂಡಲೇ ಮಾರ್ಗವಾಗಿ ಮಿನಿ ಬಸ್‍ಗಳ ಸೌಲಭ್ಯ ಕಲ್ಪಿಸಿಕೊಡುವಂತೆ ಮನವಿ ಮಾಡಿಕೊಂಡರು. ಅತಿವೃಷ್ಟಿಯಿಂದ ಮನೆಗಳನ್ನು ತೊರೆದು ಬಂದಿದ್ದು, ಕಳ್ಳರು ವಸ್ತುಗಳನ್ನು ದೋಚುತ್ತಿದ್ದಾರೆ ಎಂದು ಅಳಲು ತೋಡಿಕೊಂಡರು.

ಜನತೆಯ ಅಹವಾಲು ಆಲಿಸಿದ ಅಪ್ಪಚ್ಚು ರಂಜನ್ ಅವರು, ದೂರವಾಣಿ ಮೂಲಕ ಹೆದ್ದಾರಿ ಅಧಿಕಾರಿಗಳನ್ನು ಸಂಪರ್ಕಿಸಿ, ಕೂಡಲೇ ಲಘು ವಾಹನಗಳಿಗೆ ಅನುವು ಮಾಡಿಕೊಡುವಂತೆ ತಾಕೀತು ಮಾಡಿದರು. ಅಲ್ಲದೆ ಅಲ್ಲಲ್ಲಿ ಹೆದ್ದಾರಿ ಸರಿ ಇರುವೆಡೆಗಳಲ್ಲಿ ಹಾನಿಗೊಳಿಸಿ ಬದಲಿ ಕೆಲಸ ನಿರ್ವಹಿಸುತ್ತಾ ಕಾಲಹರಣ ಮಾಡುತ್ತಿರುವ ಗುತ್ತಿಗೆದಾರರ ವಿರುದ್ಧ ಅಸಮಾಧಾನ ವ್ಯಕ್ತಪಡಿಸಿದರು.

ಈ ಬಗ್ಗೆ ಪರಿಶೀಲಿಸಿ ಸಾರ್ವಜನಿಕರಿಗೆ ತೊಂದರೆ ಆಗದಂತೆ ತುರ್ತು ಕೆಲಸ ಪೂರೈಸಿಕೊಡಲಾಗು ವದು ಎಂದು ಸಂಬಂಧಿಸಿದವರು ಶಾಸಕರಿಗೆ ಭರವಸೆ ನೀಡಿದರು. ತಾ.ಪಂ. ಸದಸ್ಯ ರಾಯ್ ತಮ್ಮಯ್ಯ, ಮದೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್ ಸೇರಿದಂತೆ ಗ್ರಾಮದ ಯುವಕರು ಅಧಿಕ ಸಂಖ್ಯೆಯಲ್ಲಿದ್ದು, ಗುತ್ತಿಗೆದಾರರು ಕೆಲಸ ವಿಳಂಬ ಮಾಡಿದರೆ ಪ್ರತಿಭಟಿಸುವದಾಗಿ ಮಾರ್ನುಡಿದರು.