ಸೋಮವಾರಪೇಟೆ, ಸೆ. 11: ಸಾಕ್ಷಾತ್ ಜಲದೇವತೆಯಾಗಿ ಬೃಹತ್ ಕೆರೆಗೆ ಹಾರವಾದ ದೈವಿಕ ಇತಿಹಾಸ ಹೊಂದಿರುವ ತಾಲೂಕಿನ ಹೊನ್ನಮ್ಮನ ಕೆರೆಗೆ ಗೌರಿ ಹಬ್ಬದ ದಿನವಾದ ಇಂದು ಬಾಗಿನ ಅರ್ಪಣೆ ನಡೆಯಲಿದೆ.

ಶತಮಾನಗಳ ಹಿಂದೆ ಏಳುಸಾವಿರ ಸೀಮೆಯೆಂದು ಕರೆಯಲ್ಪಡುತ್ತಿದ್ದ ಪ್ರದೇಶದಲ್ಲಿ ಒಮ್ಮಿಂದೊಮ್ಮೆಲೆ ಭೀಕರ ಬರಗಾಲ ಬಂದು ಊರಿನಲ್ಲಿದ್ದ ಬೃಹತ್ ಕೆರೆಯಲ್ಲೂ ಹನಿ ನೀರು ಸಿಗದಾದಾಗ ಕೆರೆಗೆ ಹಾರವಾದ ಮುತ್ತಿನ ಗುಣದ ಹೊನ್ನಮ್ಮ ದೇವಿ ಸನ್ನಿಧಿಯಲ್ಲಿ ಪ್ರತಿ ವರ್ಷದಂತೆ ಈ ಬಾರಿಯೂ ವಿಶೇಷ ಪೂಜಾ ವಿಧಿವಿಧಾನಗಳು ನಡೆಯಲಿವೆ.

ದೊಡ್ಡಮಳ್ತೆ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿರುವ ಎಂದೂ ಬತ್ತದ ಹೊನ್ನಮ್ಮನ ಕೆರೆಗೆ ತಾ. 12ರಂದು (ಇಂದು) ಊರಿನ ಪ್ರಮುಖರು, ಜನಪ್ರತಿನಿಧಿಗಳು, ನವವಿವಾಹಿತ ದಂಪತಿಗಳು ಬಾಗಿನ ಅರ್ಪಿಸಲಿದ್ದು, ಕಾರ್ಯಕ್ರಮದಲ್ಲಿ ಭಾಗಿಯಾಗುವ ಭಕ್ತಾದಿಗಳಿಗೆ ಸಮಿತಿಯಿಂದ ಅನ್ನದಾನ ಏರ್ಪಡಿಸಲಾಗಿದೆ.

ವರ್ಷಂಪ್ರತಿ ಗೌರಿ ಹಬ್ಬದ ದಿನದಂದು ನೂರಾರು ನವ ದಂಪತಿಗಳು ಸೇರಿದಂತೆ ಸಾವಿರಾರು ಮಂದಿ ಆಗಮಿಸಿ ಹೊನ್ನಮ್ಮನ ಕೆರೆಗೆ ಬಾಗಿನ ಅರ್ಪಿಸಿ ಸರ್ವಮಂಗಳಕ್ಕಾಗಿ ಪ್ರಾರ್ಥಿಸುವದು ಹಿಂದಿನಿಂದಲೂ ನಡೆದುಕೊಂಡು ಬಂದ ಪದ್ದತಿ. ಇಂದಿನವರೆಗೂ ಈ ದೈವಿಕ ಕಾರ್ಯಗಳನ್ನು ಗ್ರಾಮಸ್ಥರು ಅಚ್ಚುಕಟ್ಟಾಗಿ ಪಾಲಿಸಿಕೊಂಡು ಬಂದಿದ್ದಾರೆ.

ಪ್ರಸಕ್ತ ಸಾಲಿನಲ್ಲಿ ಉಂಟಾದ ಪ್ರವಾಹ ಪರಿಸ್ಥಿತಿಯಿಂದಾಗಿ ಈ ಬಾರಿ ಅನ್ನದಾನ ಹೊರತುಪಡಿಸಿ ಉಳಿದೆಲ್ಲಾ ಪೂಜಾ ವಿಧಿವಿಧಾನಗಳನ್ನು ನೆರವೇರಿಸಲು ಈ ಹಿಂದೆ ತೀರ್ಮಾನಿಸಲಾಗಿತ್ತು. ನಂತರದ ದಿನಗಳಲ್ಲಿ ಸಮಿತಿಯವರು ಮತ್ತು ಗ್ರಾಮಸ್ಥರು ಸಮಾಲೋಚನೆ ನಡೆಸಿ, ಭಕ್ತಾದಿಗಳಿಗೆ ಅನ್ನದಾನ ಏರ್ಪಡಿಸುವ ಬಗ್ಗೆ ತೀರ್ಮಾನಿಸಲಾಗಿದೆ.