*ವೀರಾಜಪೇಟೆ, ಸೆ. 11: ಭಾರತೀಯ ಸೇನೆಯಲ್ಲಿ ಸೇರ್ಪಡೆ ಗೊಂಡು ತಮ್ಮ ಸೇವಾವಧಿಯ ಸಂದರ್ಭದಲ್ಲಿ ಕ್ರೀಡೆಯಲ್ಲಿ ತೋರಿರುವ ಉತ್ತಮ ಸೇವೆಯನ್ನು ಪರಿಗಣಿಸಿ ಪ್ರಸ್ತುತ ನಿವೃತ್ತರಾಗಿರುವ ಕೊಡಗಿನ ಅಧಿಕಾರಿಯೊಬ್ಬರಿಗೆ ಸಿಕಂದರಾಬಾದ್ ನಲ್ಲಿ ಗೌರವ ಸ್ಥಾನವೊಂದು ಲಭಿಸಿದೆ.ಸಿಕಂದರಾಬಾದ್‍ನಲ್ಲಿ ಇರುವ ಆರ್ಟ್‍ಲರಿ ಸೆಂಟರ್‍ನಲ್ಲಿ ಕ್ರೀಡಾ ಸಾಧನೆಗಾಗಿ ಈ ಸೆಂಟರ್‍ನ ಜಿಮ್ನಾಸ್ಟಿಕ್ ಸಭಾಂಗಣಕ್ಕೆ ನಿವೃತ್ತ ಸುಬೇದಾರ್ ಚೇಂದ್ರಿಮಾಡ ಕೆ. ನಂಜಪ್ಪ ಅವರ ಹೆಸರನ್ನು ನಾಮಕರಣ ಮಾಡಲಾಗಿದೆ.1977ರಲ್ಲಿ ಭೂಸೇನೆಗೆ ಸೇರ್ಪಡೆಗೊಂಡ ನಂಜಪ್ಪ ಅವರು 21 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ಜೆ.ಸಿ.ಓ. ಆಗಿ 1997ರಲ್ಲಿ ನಿವೃತ್ತಿ ಹೊಂದಿದ್ದಾರೆ. ಕರ್ತವ್ಯದಲ್ಲಿದ್ದ ಸಂದರ್ಭದಲ್ಲಿ ಇವರು ಅಥ್ಲೆಟಿಕ್ಸ್‍ನಲ್ಲಿ ಸರ್ವೀಸಸ್ ತಂಡದಲ್ಲಿ ಸ್ಥಾನ ಪಡೆದು ಡೆಕ್ಲಥಾನ್, ಹೈಜಂಪ್, ಬಾಕ್ಸಿಂಗ್, ವೆಯ್ಟ್ ಲಿಫ್ಟಿಂಗ್‍ನಂತಹ ಕ್ರೀಡೆಯಲ್ಲಿ ಅಪ್ರತಿಮ ಸಾಧನೆ ತೋರಿದ್ದಾರೆ. (ಮೊದಲ ಪುಟದಿಂದ) 1990 ರಿಂದ 1997ರ ವರೆಗೆ ಸೆಂಟ್ರಲ್ ಕಮಾಂಡ್ ಕೋಚ್ ಆಗಿಯೂ ಕಾರ್ಯನಿರ್ವಹಿಸಿದ್ದಾರೆ.1943ರಲ್ಲಿ ಸಿಕಂದರಾಬಾದ್‍ನಲ್ಲಿ ಪ್ರಾರಂಭಗೊಂಡ ಈ ಘಟಕಕ್ಕೆ ಇದೀಗ ರಜತಮಹೋತ್ಸವ ಸಂಭ್ರಮ. 75 ವರ್ಷ ತುಂಬಿದ ಈ ಸಂದರ್ಭದಲ್ಲಿ ಈ ಘಟಕದಲ್ಲಿ ಉತ್ತಮ ಸಾಧನೆ ಮಾಡಿದವರಲ್ಲಿ ಮೊದಲಿಗರಾದವರ ಹೆಸರು-ಸಾಧನೆಯನ್ನು ಇಡಲು ತೀರ್ಮಾನಿಸಲಾಗಿದ್ದು, ಇದರಂತೆ ಸಾಧಕರಾದ ಸಿ.ಕೆ. ನಂಜಪ್ಪ ಅವರ ಹೆಸರನ್ನು ಇಡಲಾಗಿದೆ. ಜಿಮ್ನಾಸ್ಟಿಕ್ ಘಟಕಕ್ಕೆ ನಂಜಪ್ಪ ಅವರ ಹೆಸರನ್ನು ನಾಮಕರಣ ಮಾಡಲಾಗಿದ್ದು, ಗಣ್ಯರ ಸಾಲಿನಲ್ಲಿ ಇವರ ಭಾವಚಿತ್ರವನ್ನೂ ಇಡಲಾಗಿದೆ. ಕಾರ್ಯಕ್ರಮದಲ್ಲಿ ನಂಜಪ್ಪ ಅವರು ಭಾಗಿಯಾಗಿದ್ದರು.

ಈ ಸಂದರ್ಭ ಲೆ.ಜ. ವರ್ಮಾ, ಬಿ.ಕೆ. ರತ್, ಮೇಜರ್ ಲಕ್ವಿಂದರ್ ಸಿಂಗ್, ಬ್ರಿಗೇಡಿಯರ್ ಎ.ಕೆ. ಗರ್ಗ್, ಕೋಶೀಕೊಟ್ಟಲ್, ಕೆ.ಪಿ. ರಂಜನ್, ಕಪಿಲ್ ಭಾರಾಧ್ವಾಜ್ ಹಾಜರಿದ್ದರು. ನಂಜಪ್ಪ ವಿ. ಬಾಡಗದ ಚೇಂದ್ರಿಮಾಡ ಕುಟ್ಟಪ್ಪ ಹಾಗೂ ಬೋಜಮ್ಮ ಅವರ ಪುತ್ರರಾಗಿದ್ದು, ಪತ್ನಿ ದೇವಕಿ, ಪುತ್ರ ಉತ್ತಪ್ಪ, ಪುತ್ರಿ ರಚಿತಾರೊಂದಿಗೆ ಜಿಲ್ಲೆಯಲ್ಲಿ ನೆಲೆಸಿದ್ದಾರೆ.