ಮಡಿಕೇರಿ, ಸೆ. 11: ಶತದಿನಕ್ಕೂ ಅಧಿಕ ಸಮಯಗಳಿಂದ ವಾಯು - ವರುಣನ ಅಬ್ಬರದೊಂದಿಗೆ ಪ್ರಾಕೃತಿಕ ವಿಕೋಪದಿಂದ ನಲುಗಿದ್ದ ಜನತೆ ಕಳೆದ ಒಂದು ವಾರದಿಂದ ಕಂಡು ಬಂದ ಬಿಸಿಲಿನ ವಾತಾವರಣದಿಂದ ಒಂದಷ್ಟು ಚೇತರಿಕೆ ಕಾಣುತ್ತಿದ್ದ ಬೆನ್ನಲ್ಲೇ ಸೆ. 11 ರಂದು ಅಪರಾಹ್ನ ಜಿಲ್ಲಾ ಕೇಂದ್ರ ಮಡಿಕೇರಿಯೂ ಸೇರಿದಂತೆ ಹಲವೆಡೆ ಉಂಟಾದ ವಾತಾವರಣ ದಿಢೀರ್ ಬದಲಾವಣೆ ಯಿಂದ ಮತ್ತೊಮ್ಮೆ ಆತಂಕಗೊಳ್ಳು ವಂತಾಗಿತ್ತು.ನಿನ್ನೆ ಇಡೀ ದಿನ ಸುಡುಬಿಸಿಲಿದ್ದು, ಇಂದು ಅಪರಾಹ್ನದ ತನಕ ನಿನ್ನೆಯಷ್ಟು ಪ್ರಖರತೆ ಇಲ್ಲದಿದ್ದರೂ ಬಿಸಿಲಿನ ವಾತಾವರಣ ಮಡಿಕೇರಿ ಯಲ್ಲಿತ್ತು. ಆದರೆ ಅಪರಾಹ್ನ 3 ಗಂಟೆಯ ಸುಮಾರಿಗೆ ಈ ವಾತಾವರಣ ಮರೆಯಾಯಿತು. ಸಂಜೆಯಾದ ರೀತಿಯಲ್ಲಿ ಮಂದ ಬೆಳಕು ಆವರಿಸಿತಲ್ಲದೆ, ಗುಡುಗಿನ ಶಬ್ದ ಕೇಳಲಾರಂಭಿಸಿತು. ಇದರೊಂದಿಗೆ ಹನಿಹನಿಯಾಗಿ ಬೀಳತೊಡಗಿದ ಮಳೆ ಹೆಚ್ಚಾಗತೊಡಗಿತು. ಏಕಾಏಕಿ ಪ್ರಕೃತಿಯಲ್ಲಿ ಉಂಟಾದ ಈ ಬದಲಾವಣೆ ಮೊದಲೇ ಹೆದರಿಕೆಯ ಛಾಯೆ, ಆತಂಕದಲ್ಲಿರುವ ಜನತೆಯನ್ನು ಮತ್ತೆ ಬೆಚ್ಚಿ ಬೀಳುವಂತೆ ಮಾಡಿತ್ತು. ಸಾಧಾರಣವಾಗಿ ಸೆಪ್ಟೆಂಬರ್‍ನ ಈ ಅವಧಿಯಲ್ಲಿ ಗುಡುಗಿನ ಶಬ್ದ ಕೇಳದು. ಆದರೆ ಗುಡುಗು ಸಹಿತವಾಗಿ ಮಳೆ ಸುರಿಯಲಾರಂಭಿಸಿದ್ದು, ಇದು ಇನ್ನೇನು ಅನಾಹುತ ಸೃಷ್ಟಿಸಲಿದೆ ಎಂಬ ಭಾವನೆ ಮೂಡಿಸಿದಂತಾಗಿತ್ತು.

ಬೆಳಿಗ್ಗೆ ಬಿಸಿಲಿನ ಸನ್ನಿವೇಶವಿದ್ದ ರಿಂದ ಯಾರೂ ಕೊಡೆ, ಚಳಿ - ಮಳೆಯಿಂದ ರಕ್ಷಣೆ ಪಡೆಯುವ ಬೆಚ್ಚನೆಯ

(ಮೊದಲ ಪುಟದಿಂದ) ಉಡುಪುಗಳನ್ನು, ಮಳೆ ಕೋಟ್‍ಗಳನ್ನು ತಂದಿರಲಿಲ್ಲ. ಇದರಿಂದ ರಸ್ತೆಯಲ್ಲಿ ನಡೆಯುತ್ತಿದ್ದವರು ಅಲ್ಲಲ್ಲಿ ಆಶ್ರಯ ಪಡೆಯಲು ಪರದಾಡಬೇಕಾಯಿತು. ಶಾಲಾ - ಕಾಲೇಜು ವಿದ್ಯಾರ್ಥಿಗಳು ಮಳೆಯಿಂದ ನೆನೆದು ಓಡೋಡಿ ಸಿಕ್ಕಿದ ಕಟ್ಟಡ - ಕಚೇರಿಗಳ ಬದಿಯಲ್ಲಿ ಆಶ್ರಯ ಪಡೆದರು. ದ್ವಿಚಕ್ರವಾಹನ ಸವಾರರೂ ಪರದಾಡಬೇಕಾಯಿತು. ಪ್ರಕೃತಿಯ ಮುನಿಸಿನಿಂದ ಹೆಚ್ಚು ಅನಾಹುತ ಸಂಭವಿಸಿರುವ ಮಕ್ಕಂದೂರು, ಮುಕ್ಕೋಡ್ಲು, ಹೆಮ್ಮೆತ್ತಾಳು, ಮೇಘತ್ತಾಳು ಮತ್ತಿತರ ಕಡೆಗಳಲ್ಲಿಯೂ ಇದೇ ರೀತಿಯ ವಾತಾವರಣ ಸೃಷ್ಟಿಯಾದ ಕುರಿತು ವರದಿಯಾಗಿದೆ.

ಈ ಸಂದರ್ಭದಲ್ಲಿ ಕುಶಾಲನಗರದಿಂದ ದೂರವಾಣಿ ಮೂಲಕ ಮಾತನಾಡುತ್ತಿದ್ದ ಅಲ್ಲಿನ ನಿವಾಸಿ, ಚಂದ್ರು ಅವರು ಕುಶಾಲನಗರ ವಿಭಾಗದಲ್ಲಿ ಮೂರುಗಂಟೆಯ ವೇಳೆ ಸುಡು ಬಿಸಿಲು ಕಾಯುತ್ತಿರುವದಾಗಿ ಅಲ್ಲಿನ ಸನಿವೇಶವನ್ನು ತಿಳಿಸಿದರು. ಇಂದು ಬೆಳಿಗ್ಗೆಯಿಂದಲೇ ಈ ವ್ಯಾಪ್ತಿಯಲ್ಲಿ ಬಿಸಿಲು ಜೋರಾಗಿದ್ದು, ಮಂಗಳೂರಿನ ರೀತಿಯಲ್ಲಿ ಬೆವರು ಸುರಿಯುತ್ತಿದೆ. ಈ ಹಿಂದೆ ಬಿಸಿಲು ತುಸು ಹೆಚ್ಚಿದ್ದರೂ ಹೆಚ್ಚು ಬಳಲಿಕೆಯಾಗುತ್ತಿರಲಿಲ್ಲ ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದರು.

ವೀರಾಜಪೇಟೆಯಲ್ಲಿಯೂ ಸ್ವಲ್ಪ ಮೋಡ ಕಂಡು ಬಂತಾದರೂ ವಾತಾವರಣ ಎಂದಿನಂತೆಯೇ ಇತ್ತು ಎಂದು ಅಲ್ಲಿನ ಚಿಣ್ಣಪ್ಪ ಎಂಬವರು ತಿಳಿಸಿದರು. ಪ್ರಸಕ್ತ ವರ್ಷ ಗೌರಿ ಗಣೇಶೋತ್ಸವದಲ್ಲಿ ಪೂರ್ವ ತಯಾರಿ ನಡೆಸುತ್ತಿದ್ದವರೂ ವಾತಾವರಣದ ಬದಲಾವಣೆಯಿಂದ ಪರದಾಡಬೇಕಾಯಿತು.