ಮಡಿಕೇರಿ, ಸೆ. 11: ಜಿಲ್ಲೆಯಲ್ಲಿ ಇತ್ತೀಚೆಗೆ ಸಂಭವಿಸಿರುವ ಪ್ರಾಕೃತಿಕ ವಿಕೋಪದಿಂದ ಸಂಕಷ್ಟಕ್ಕೆ ಸಿಲುಕಿರುವ ಕುಟುಂಬಗಳಿಗೆ ಮುಂದಿನ ಆರು ತಿಂಗಳೊಳಗೆ ವಸತಿ ಸೌಲಭ್ಯ ಕಲ್ಪಿಸಲು ಆದ್ಯತೆ ಮೇರೆಗೆ ಸರಕಾರ ಹಾಗೂ ಜಿಲ್ಲಾಡಳಿತದಿಂದ ಗಮನ ಹರಿಸಲಾಗುವದು ಎಂದು ಮಡಿಕೇರಿ ಕ್ಷೇತ್ರದ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್ ಸ್ಪಷ್ಟಪಡಿಸಿದ್ದಾರೆ. ಇಂದು ವಿವಿಧೆಡೆ ಸಂತ್ರಸ್ತರ ಪುನರ್ವಸತಿಗಾಗಿ ಗುರುತಿಸಲಾಗಿರುವ ಪರ್ಯಾಯ ನಿವೇಶನಗಳನ್ನು ಪರಿಶೀಲಿಸಿದ ಅವರು ಮಾಧ್ಯಮದೊಂದಿಗೆ ಮಾತ ನಾಡುತ್ತಿದ್ದರು.ಈ ವೇಳೆ ಪುನರ್ವಸತಿ ಸಂಬಂಧ ನಿಯೋಜನೆಗೊಂಡಿರುವ ಹೆಚ್ಚುವರಿ ಜಿಲ್ಲಾಧಿಕಾರಿ ಜಗದೀಶ್ ಹಾಗೂ ತಾಂತ್ರಿಕ ಸಂಸ್ಥೆಗಳ ಪ್ರಮುಖರೊಂದಿಗೆ ಚರ್ಚಿಸಿದ ಅವರು, ಪುನರ್ವಸತಿ ಕಲ್ಪಿಸುವ ವೇಳೆ ಭವಿಷ್ಯದಲ್ಲಿ ಮತ್ತೆ ಸಮಸ್ಯೆಗಳು ಎದುರಾಗದ ರೀತಿಯಲ್ಲಿ ಕಾಳಜಿ ವಹಿಸಬೇಕೆಂದು ಸಲಹೆ ನೀಡಿದರು. ಈಗಾಗಲೇ ಜಿಲ್ಲಾ ಉಸ್ತುವಾರಿ ಸಚಿವರು ಮತ್ತು ಮುಖ್ಯಮಂತ್ರಿಗಳು ಪುನರ್ವಸತಿ ಕಲ್ಪಿಸಲು ತಲಾ ರೂ. 7 ಲಕ್ಷ ನೆರವು ಪ್ರಕಟಿಸಿದ್ದು, ಆ ಮೊತ್ತಕ್ಕೆ ಪೂರಕವಾಗಿ ಬೇರೆ ಬೇರೆ ಉದ್ದಿಮೆ ದಾರರ ನೆರವಿನಿಂದ ಮನೆಗಳನ್ನು ನಿರ್ಮಿಸಿ ಬಳಿಕ ಸಂತ್ರಸ್ತರಿಗೆ ಕಲ್ಪಿಸಲಾಗುವದು ಎಂದರು.
ಈ ದಿಸೆಯಲ್ಲಿ ಕಂದಾಯ ಇಲಾಖೆಯಿಂದ ಗುರುತಿಸಿರುವ ನಿವೇಶನಗಳ ಮಣ್ಣಿನ ಪರೀಕ್ಷೆ ಯೊಂದಿಗೆ, ನುರಿತ ತಜ್ಞರ ಅಭಿಪ್ರಾಯ ಪಡೆದು ಸಮ್ಮತಿಸಿದರೆ ಮಾತ್ರ ಸಂಬಂಧಿಸಿದ ಜಾಗಗಳಲ್ಲಿ ವಸತಿ ಯೋಜನೆ ಕೈಗೊಳ್ಳಲಾಗುವದು ಎಂದರು.
ಪುನರ್ವಸತಿ ಅಧಿಕಾರಿ ಜಗದೀಶ್ ಮಾತನಾಡಿ, ಸರಕಾರ ವಸತಿ ಯೋಜನೆಗೆ ಕಲ್ಪಿಸುವ ಅನುದಾನ ಬಗ್ಗೆ ಇನ್ನಷ್ಟೇ ಖಾತರಿಯಾ ಗಬೇಕಿದ್ದು, ಮೂರ್ನಾಲ್ಕು ಉದ್ದಿಮೆಗಳ ತಜ್ಞರ ಅಭಿಪ್ರಾಯ ದೊಂದಿಗೆ ಜಾಗ ಮತ್ತು ಮಣ್ಣಿನ ಗುಣಲಕ್ಷಣ ಖಾತರಿಪಡಿಸಿಕೊಂಡು ನಿರ್ಮಾಣ ಕಾರ್ಯವನ್ನು ಆರಂಭಿಸಲಾಗುವದು ಎಂದು ವಿವರಿಸಿದರು.
ನಿವೇಶನ ಜಾಗ: ಮಡಿಕೇರಿ ತಾಲೂಕಿನ ಕರ್ಣಂಗೇರಿ ಗ್ರಾಮದ ಸರ್ವೆ ನಂ. 178ರಲ್ಲಿ 4 ಎಕರೆ ಹಾಗೂ ಕೆ. ನಿಡುಗಣೆಯ ಆರ್.ಟಿ.ಓ. ಕಚೇರಿ ಬಳಿ 4.80 ಎಕರೆ ಜಾಗ ಗುರುತಿಸ¯ Áಗಿದೆ. ಗಾಳಿಬೀಡು ಗ್ರಾ.ಪಂ. ವ್ಯಾಪ್ತಿಯ ಸರ್ವೆ ನಂ. 99/3, 100/3 ಹಾಗೂ 4ರಲ್ಲಿ ಒಟ್ಟು 13 ಎಕರೆ ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ ಅಧಿಕಾರಿ, ಮದೆ ಗ್ರಾ.ಪಂ. ವ್ಯಾಪ್ತಿಯಲ್ಲಿ ಸ.ನಂ. 399ರಲ್ಲಿ 10 ಎಕರೆ, ಬಿಳಿಗೇರಿಯ ಸ.ನಂ. 347/3ರಲ್ಲಿ 1.88 ಎಕರೆ, ಸಂಪಾಜೆಯ ಸ.ನಂ. 54/1ರಲ್ಲಿ 1.50 ಎಕರೆ ನಿವೇಶನ ಪತ್ತೆ ಮಾಡಲಾಗಿದೆ ಎಂದರು.
ಮಾದಾಪುರ ತೋಟಗಾರಿಕಾ ಕ್ಷೇತ್ರದ ಜಾಗ ಜಂಬೂರುವಿನ ಸ.ನಂ. 13/1ರಲ್ಲಿ 50 ಎಕರೆಗೂ ಅಧಿಕ ನಿವೇಶನವನ್ನು ಗುರುತಿಸಿದ್ದು, ಆಯಾ ಭಾಗದ ಸಂತ್ರಸ್ತರಿಗೆ ಹತ್ತಿರದ ಸ್ಥಳಗಳಲ್ಲಿ ಮನೆ ಕಟ್ಟಿಕೊಟ್ಟು
(ಮೊದಲ ಪುಟದಿಂದ) ಆಸರೆ ಕಲ್ಪಿಸಲಾಗುವದು ಎಂದು ವಿವರಿಸಿದರು.
ಎಲ್ಲೆಲ್ಲಿ ಯಾರಿಗೆ: ಕರ್ಣಂಗೇರಿಯ 4 ಎಕರೆಯಲ್ಲಿ ಆ ಗ್ರಾಮದ 13 ಕುಟುಂಬಗಳು, ಮಕ್ಕಂದೂರುವಿನ 99, ಹಚ್ಚಿನಾಡು 1, ಹೊದಕಾನ 9 ಹಾಗೂ ಮಡಿಕೇರಿ ನಗರದ 43 ಕುಟುಂಬಗಳಿಗೆ ವಸತಿ ಕಲ್ಪಿಸಲು ನಿರ್ಧರಿಸಲಾಗಿದೆ. ಕಾಲೂರಿನ 22 ಕುಟುಂಬಗಳಿಗೆ ಕೆ. ನಿಡುಗಣೆಯಲ್ಲಿ, ಹೆಬ್ಬೆಟ್ಟಗೇರಿಯ 90 ಕುಟುಂಬಗಳಿಗೆ ಗಾಳಿಬೀಡುವಿನಲ್ಲಿ 7 ಎಕರೆ ಗುರುತಿಸಲಾಗಿದೆ. ಅದೇ ರೀತಿ ನಿಡುವಟ್ಟುವಿನ 26, ಬಾರಿಬೆಳ್ಳಚ್ಚು 2, 2ನೇ ಮೊಣ್ಣಂಗೇರಿಯ 188 ಕುಟುಂಬಗಳಿಗೆ ಮತ್ತು 1ನೇ ಮೊಣ್ಣಂಗೇರಿಯ 9 ಕುಟುಂಬಗಳಿಗೆ ಗಾಳಿಬೀಡು ವ್ಯಾಪ್ತಿ ನಿವೇಶನ ಗುರುತಿಸಲಾಗಿದೆ. ಸಂಪಾಜೆ, ಬಿಳಿಗೇರಿ, ಮದೆ ವ್ಯಾಪ್ತಿಯಲ್ಲಿ 93 ಕುಟುಂಬಗಳಿಗೆ ಪುನರ್ವಸತಿಗೆ ನಿರ್ಧರಿಸಲಾಗಿದೆ.
ಜಂಬೂರುವಿನಲ್ಲಿ ಮಕ್ಕಂದೂರುವಿನ 99, ಹೆಮ್ಮೆತ್ತಾಳುವಿನ 39, ಮುಕ್ಕೋಡ್ಲು 9, ಮೇಘತ್ತಾಳುವಿನ 26 ಕುಟುಂಬಗಳಿಗೆ ಮತ್ತು ಸೋಮವಾರಪೇಟೆ ತಾಲೂಕು ವ್ಯಾಪ್ತಿಯ 84 ಸಂತ್ರಸ್ತರ ಕುಟುಂಬಗಳಿಗೆ ವಸತಿ ಯೋಜನೆ ರೂಪಿಸಲಾಗಿದೆ.
ಇಂದು ಶಾಸಕರಿಂದ ವಿವಿಧೆಡೆಗಳಲ್ಲಿ ನಿವೇಶನ ಪರಿಶೀಲನೆ ವೇಳೆ ತಹಶೀಲ್ದಾರ್ ಕುಸುಮ, ತಾ.ಪಂ. ಸದಸ್ಯ ರಾಯ್ ತಮ್ಮಯ್ಯ, ಮದೆ ಗ್ರಾ.ಪಂ. ಅಧ್ಯಕ್ಷ ಚಂದ್ರಶೇಖರ್ ಮೊದಲಾದವರು ಹಾಜರಿದ್ದರು.