ಮಡಿಕೇರಿ, ಸೆ. 11: ಜಿಲ್ಲೆಯಲ್ಲಿ ಸಂಭವಿಸಿದ ಪ್ರಕೃತಿ ವಿಕೋಪ ಪರಿವೀಕ್ಷಣೆಗಾಗಿ ಕೇಂದ್ರ ಸರಕಾರದ ಉನ್ನತ ಅಧಿಕಾರಿಗಳ ತಂಡ ತಾ. 12ರಂದು (ಇಂದು) ಜಿಲ್ಲೆಗ ಭೇಟಿ ನೀಡಲಿದೆ. ರಾಜ್ಯಕ್ಕೆ 2 ತಂಡ ಭೇಟಿ ನೀಡಲಿದ್ದು, ಒಂದು ತಂಡ ಕೊಡಗು ಜಿಲ್ಲೆಗೆ ಹಾಗೂ ಮತ್ತೊಂದು ತಂಡ ಹಾಸನ ಹಾಗೂ ದ. ಕನ್ನಡ ಜಿಲ್ಲೆಗೆ ಭೇಟಿ ನೀಡಲಿದೆ.

ಪ್ರಕೃತಿ ವಿಕೋಪ ಸಂಭವಿಸಿದ ಬಳಿಕ ಕೇಂದ್ರ ಗೃಹ ಸಚಿವೆ ಜಿಲ್ಲೆಗೆ ಭೇಟಿ ನೀಡಿ ಅವಲೋಕಿಸಿ ಕೇಂದ್ರ ಸರಕಾರದ ಗಮನಕ್ಕೆ ತರುವದಾಗಿ ಹೇಳಿದ್ದರು. ನಿನ್ನೆ ರಾಜ್ಯ ಮುಖ್ಯಮಂತ್ರಿ ಹೆಚ್.ಡಿ. ಕುಮಾರಸ್ವಾಮಿ ಅವರು ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ ಕೊಡಗಿನಲ್ಲುಂಟಾದ ದುರಂತದ ಬಗ್ಗೆ ಮನವರಿಕೆ ಮಾಡಿಕೊಟ್ಟಿದ್ದರು. ಪ್ರಧಾನಮಂತ್ರಿಗಳು ಮನವಿಗೆ ಸ್ಪಂದಿಸಿ ರಾಜ್ಯಕ್ಕೆ ಎರಡು ತಂಡಗಳನ್ನು ಕಳುಹಿಸಿಕೊಟ್ಟಿದ್ದಾರೆ.ಕೇಂದ್ರದ ತಂಡ ಇಂದು ಸಂಜೆ ಬೆಂಗಳೂರಿಗೆ ತಲಪಿದ್ದು, ತಾ. 12ರಂದು (ಇಂದು) ಬೆಳಿಗ್ಗೆ ಜಿಲ್ಲೆಗೆ ಆಗಮಿಸಲಿದೆ. ಮೂವರು ಮಂದಿ ಇರುವ ತಂಡ ಮಧ್ಯಾಹ್ನ ಕುಶಾಲನಗರಕ್ಕೆ ಆಗಮಿಸಲಿದ್ದು, ಹಾನಿಗೀಡಾದ ಕುಶಾಲನಗರದ ಸುತ್ತಮುತ್ತಲಿನ ಪ್ರದೇಶ, ಹಾರಂಗಿ ಜಲಾಶಯ ವೀಕ್ಷಣೆ ಮಾಡಲಿದೆ. ನಂತರ ಜಿಲ್ಲಾಧಿಕಾರಿಗಳನ್ನು ಭೇಟಿ ಮಾಡಿ ಮಾಹಿತಿ ಸಂಗ್ರಹಿಸಲಿದೆ. ತಾ. 13ರಂದು ವಿಕೋಪಕ್ಕೆ ತುತ್ತಾದ ಮಕ್ಕಂದೂರು ಗ್ರಾಮ ಪಂಚಾಯಿತಿ, ಮದೆ ಗ್ರಾಮ ಪಂಚಾಯಿತಿಯ ಪ್ರದೇಶಗಳಿಗೆ ಭೇಟಿ ನೀಡಿ ಪರಿವೀಕ್ಷಣೆ ಮಾಡಿ ಬೆಂಗಳೂರಿಗೆ ಹಿಂತಿರುಗಲಿರುವದಾಗಿ ಮಾಹಿತಿ ಲಭ್ಯವಾಗಿದೆ.