ಸೋಮವಾರಪೇಟೆ, ಸೆ. 11: ಕಳೆದೊಂದು ತಿಂಗಳಿನಿಂದ ಭಾರೀ ಮಳೆ, ಪ್ರವಾಹಕ್ಕೆ ಒಳಗಾಗಿದ್ದ ಸೋಮವಾರಪೇಟೆ ವ್ಯಾಪ್ತಿಯಲ್ಲಿ ಕಳೆದ ಕೆಲ ದಿನಗಳಿಂದ ಜನಜೀವನ ಯಥಾಸ್ಥಿತಿಗೆ ಮರಳುತ್ತಿದ್ದು, ಸಂತೆ ದಿನವಾದ ಸೋಮವಾರದಂದು ಪಟ್ಟಣದಲ್ಲಿ ಹೆಚ್ಚಿನ ಜನಸಂಚಾರ ಕಂಡುಬಂತು.
ಕಳೆದ ಆಗಸ್ಟ್ ಮೊದಲ ವಾರದಿಂದ ಶುರುವಾದ ಮಳೆ, ಜನಜೀವನವನ್ನು ಅಸ್ತವ್ಯಸ್ತವನ್ನಾಗಿಸಿದ್ದರೆ, ಗ್ರಾಮೀಣ ಭಾಗದಿಂದ ಪಟ್ಟಣಕ್ಕೆ ಆಗಮಿಸುವ ಜನಸಂಖ್ಯೆ ವಿರಳವಾಗಿತ್ತು. ಹಲವು ಗ್ರಾಮಗಳಿಗೆ ಸಂಪರ್ಕ ಇಲ್ಲದ್ದರಿಂದ ಪಟ್ಟಣದಲ್ಲಿ ಸಂತೆ ಸೇರಿದಂತೆ ಜನನಿಬಿಡ ಪ್ರದೇಶಗಳೂ ಬಿಕೋ ಎನ್ನುತ್ತಿದ್ದವು.
ಕಳೆದ ಮೂರು ಸಂತೆ ದಿನಗಳಂದು ಮಾರುಕಟ್ಟೆಯಲ್ಲಿ ಗ್ರಾಹಕರ ಕೊರತೆ ಕಂಡುಬಂದಿದ್ದರೆ, ಅನೇಕ ವರ್ತಕರು ಅಂಗಡಿಯನ್ನೇ ಹಾಕಿರಲಿಲ್ಲ. ಭಾರೀ ಮಳೆಯಿಂದ ಮನೆಯಿಂದ ಹೊರಬಾರಲೂ ಹಿಂದೇಟು ಹಾಕುತ್ತಿದ್ದ ಮಂದಿ ಸಂತೆ, ಪಟ್ಟಣದಿಂದ ದೂರ ಉಳಿದಿದ್ದರು.
ಇನ್ನು ಮಹಾಮಳೆಗೆ ಕೆಲ ಭಾಗಗಳಲ್ಲಿ ಕಾಫಿ ತೋಟಗಳೇ ಕೊಚ್ಚಿಕೊಂಡು ಹೋಗಿದ್ದು, ಉಳಿದ ಪ್ರದೇಶಗಳಲ್ಲಿ ಬೆಟ್ಟ, ಬರೆ ಕುಸಿತದಿಂದ ಸಾಕಷ್ಟು ಹಾನಿಯಾಗಿತ್ತು. ಭಾರೀ ಮಳೆ ಹಿನ್ನೆಲೆ ಮೂರು ವಾರಗಳ ಕಾಲ ತೋಟದಲ್ಲಿ ಕೂಲಿ ಕೆಲಸವೂ ಇರಲಿಲ್ಲ. ಇದರಿಂದಾಗಿ ತೋಟ ಕಾರ್ಮಿಕರು ಕೆಲಸವಿಲ್ಲದೇ ಸಾಕಷ್ಟು ಪರದಾಟ ಅನುಭವಿಸಿದ್ದರು. ಕೈಯಲ್ಲಿ ಹಣ ಇಲ್ಲದ್ದರಿಂದ ಸಂತೆಗೂ ಮುಖ ಮಾಡಿರಲಿಲ್ಲ.
ಕಳೆದ ಒಂದು ವಾರದಿಂದ ಮಳೆ ಕಡಿಮೆಯಾಗಿರುವದರಿಂದ ಕಾಫಿ ತೋಟಗಳಲ್ಲಿ ಕೆಲಸ ಪ್ರಾರಂಭವಾಗಿದ್ದು, ಕಾರ್ಮಿಕರು ವಾರದಲ್ಲಿ ನಾಲ್ಕೈದು ದಿನಗಳು ಕೂಲಿ ಕೆಲಸ ಮಾಡಿದ್ದಾರೆ. ಇದರೊಂದಿಗೆ ಗೌರಿ ಗಣೇಶ ಹಬ್ಬವೂ ಆಗಮಿಸಿರುವದರಿಂದ ಇಂದು ಸೋಮವಾರಪೇಟೆ ಪಟ್ಟಣ ಸೇರಿದಂತೆ ಮಾರುಕಟ್ಟೆಯಲ್ಲಿ ಹೆಚ್ಚಿನ ಜನಸಂಚಾರ ಕಂಡುಬಂತು. ಕಳೆದೊಂದು ತಿಂಗಳಿನಿಂದ ಪಟ್ಟಣದತ್ತ ಮುಖ ಮಾಡದ ಗ್ರಾಮೀಣ ಭಾಗದ ಜನರು ಇಂದು ಸಂತೆಗೆ ಆಗಮಿಸಿ ದಿನೋಪಯೋಗಿ ವಸ್ತುಗಳನ್ನು ಖರೀದಿಸಿದರು.
ಖಾಸಗಿ ಬಸ್ ಇಲ್ಲದೆ ಪರದಾಟ: ಕೇಂದ್ರ ಸರ್ಕಾರದ ವಿರುದ್ಧ ಕಾಂಗ್ರೆಸ್ ಕರೆ ನೀಡಿದ್ದ ಭಾರತ್ ಬಂದ್‍ಗೆ ಜಿಲ್ಲೆಯ ಖಾಸಗಿ ಬಸ್ ಮಾಲೀಕರ ಸಂಘ ಬೆಂಬಲ ಸೂಚಿಸಿ, ಬಸ್‍ಗಳ ಓಡಾಟವನ್ನು ಸ್ಥಗಿತಗೊಳಿಸಿದ್ದರಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳೂ ಸೇರಿದಂತೆ ಅನೇಕ ಮಂದಿ ಪರದಾಟ ಅನುಭವಿಸಬೇಕಾಯಿತು. ಖಾಸಗಿ ಬಸ್‍ಗಳನ್ನೇ ನಂಬಿಕೊಂಡಿರುವ ಗ್ರಾಮೀಣ ಭಾಗದ ವಿದ್ಯಾರ್ಥಿಗಳು ಬಸ್ ಇಲ್ಲದ್ದರಿಂದ ಇತರ ವಾಹನಗಳ ಮೊರೆ ಹೋಗಬೇಕಾಯಿತು. ಕೆಎಸ್‍ಆರ್‍ಟಿಸಿಯಿಂದ ಕೆಲ ಬಸ್‍ಗಳು, ಖಾಸಗಿ ವಾಹನಗಳು, ಆಟೋಗಳು ರಸ್ತೆಗೆ ಇಳಿದಿದ್ದರಿಂದ ಒಂದಿಷ್ಟು ಪರದಾಟ ತಪ್ಪಿದಂತಾಯಿತು. ಉಳಿದಂತೆ ಜನಜೀವನ ಎಂದಿನಂತೆ ಸಾಗಿತು.