ಕುಶಾಲನಗರ, ಸೆ. 11: ತೈಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರಕಾರದ ವಿರುದ್ಧ ಕರೆ ನೀಡಿದ್ದ ಬಂದ್‍ಗೆ ಕುಶಾಲನಗರದಲ್ಲಿ ನೀರಸ ಪ್ರತಿಕ್ರಿಯೆ ವ್ಯಕ್ತಗೊಂಡಿತು. ಕೊಪ್ಪ ವ್ಯಾಪ್ತಿಯಲ್ಲಿ ಶಾಲಾ-ಕಾಲೇಜು ವಿದ್ಯಾರ್ಥಿಗಳಿಗೆ ರಜೆ ಘೋಷಣೆಯಾಗಿತ್ತು.

ಬಂದ್ ಹಿನ್ನೆಲೆ ಜೆಡಿಎಸ್ ಪಕ್ಷದ ವತಿಯಿಂದ ಸಾಂಕೇತಿಕ ಪ್ರತಿಭಟನೆ ನಡೆಯಿತು. ಕುಶಾಲನಗರ ಸಮೀಪ ಕೊಪ್ಪ ಅರಣ್ಯ ತಪಾಸಣಾ ಗೇಟ್ ಬಳಿ ಪ್ರತಿಭಟನೆ ನಡೆಸಿದ ಜೆಡಿಎಸ್ ಪ್ರಮುಖರು ಹಾಗೂ ಕಾರ್ಯಕರ್ತರು ಕೇಂದ್ರದ ಬಿಜೆಪಿ ಸರಕಾರದ ವಿರುದ್ಧ ಘೋಷಣೆ ಕೂಗಿದರು. ನರೇಂದ್ರ ಮೋದಿಗೆ ಧಿಕ್ಕಾರ ಕೂಗಿದ ಪ್ರತಿಭಟನಾಕಾರರು ತೈಲ ಬೆಲೆ ಇಳಿಸುವಂತೆ ಆಗ್ರಹಿಸಿ ಸ್ವಲ್ಪಕಾಲ ಮಾನವ ಸರಪಳಿ ರಚಿಸಿ ಘೋಷಣೆಗಳನ್ನು ಕೂಗಿದರು.

ಈ ಸಂದರ್ಭ ಸುದ್ದಿಗಾರರೊಂದಿಗೆ ಮಾತನಾಡಿದ ರಾಜ್ಯ ಜೆಡಿಎಸ್ ಪರಿಶಿಷ್ಟ ಪಂಗಡದ ಉಪಾಧ್ಯಕ್ಷರಾದ ಎಸ್.ಎನ್.ರಾಜಾರಾವ್, ಪ್ರಧಾನಿ ಮೋದಿ ಕಳೆದ 4 ವರ್ಷದಿಂದ ಮಾತಿನಲ್ಲೇ ದಿನದೂಡುತ್ತಿದ್ದು ದೇಶದ ಬಡಜನರ ಸಮಸ್ಯೆಗೆ ಸ್ಪಂದಿಸುತ್ತಿಲ್ಲ ಎಂದು ಆರೋಪಿಸಿದರು.

ಪೆಟ್ರೋಲ್, ಡೀಸೆಲ್, ಗ್ಯಾಸ್, ಸೀಮೆ ಎಣ್ಣೆ ಬೆಲೆಗಳು ಗಗನಕೇರುತ್ತಿದ್ದು ಜನಸಾಮಾನ್ಯರ ಮೇಲೆ ಅಧಿಕ ಹೊರೆಯಾಗುತ್ತಿದೆ. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಜನತೆ ಬಿಜೆಪಿಗೆ ತಕ್ಕ ಪಾಠ ಕಲಿಸಿ ಕೇಂದ್ರದಲ್ಲಿ ಪರ್ಯಾಯ ಸರಕಾರ ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದರು.

ಪ್ರತಿಭಟನೆಯಲ್ಲಿ ಕೊಡಗು ಜಿಲ್ಲಾ ಜೆಡಿಎಸ್ ಯುವ ಘಟಕದ ಅಧ್ಯಕ್ಷ ಸಿ.ಎಲ್. ವಿಶ್ವ, ಪ್ರಮುಖರಾದ ಬಿ.ಎಸ್. ಚಂದ್ರಶೇಖರ್, ಎಂ.ಎಸ್. ರಾಜೇಶ್, ಪ್ರಕಾಶ್, ಗಣೇಶ್, ಚಂದ್ರಯ್ಯ, ರಾಮಚಂದ್ರ, ಶಿವಪ್ಪ, ಶುಭಶೇಖರ್, ಹೆಚ್.ಟಿ. ವಸಂತ, ರಫೀಕ್ ಮತ್ತಿತರರು ಇದ್ದರು.

ನಾಪೆÇೀಕ್ಲು: ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಕೇಂದ್ರ ಸರಕಾರದ ವಿರುದ್ಧ ಕಾಂಗ್ರೆಸ್ ಮತ್ತು ಮಿತ್ರ ಪಕ್ಷಗಳು ಕರೆ ನೀಡಿದ ಭಾರತ್ ಬಂದ್ ಪರಿಣಾಮ ನಾಪೆÇೀಕ್ಲುವಿನಲ್ಲಿ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ, ಖಾಸಗಿ ಬಸ್‍ಗಳ ಓಡಾಟ ಸ್ಥಗಿತಗೊಂಡಿತ್ತು.

ನಾಪೆÇೀಕ್ಲು ಪಟ್ಟಣದ ಆಟೋ ಚಾಲಕರು ಮತ್ತು ಮಾಲಿಕರು ಸ್ವಇಚ್ಛೆಯಿಂದ ಆಟೋಗಳನ್ನು ರಸ್ತೆಗಿಳಿಸದೆ ಬೆಂಬಲ ವ್ಯಕ್ತಪಡಿಸಿದರು. ಬಸ್‍ಗಳ ಸಂಚಾರ ಮತ್ತು ಆಟೋ ಸಂಚಾರವಿಲ್ಲದ ಕಾರಣ ವಾರದ ಸಂತೆಗೆ ಆಗಮಿಸಿದ ಸಾರ್ವಜನಿಕರು ಪರದಾಡುತ್ತಿರುವ ದೃಶ್ಯ ಕಂಡು ಬಂತು.

ಉಳಿದಂತೆ ಯಾವದೇ ಅಹಿತಕರ ಘಟನೆ ಸಂಭವಿಸಿದ ಬಗ್ಗೆ ವರದಿಯಾಗಿಲ್ಲ. ನಾಪೆÇೀಕ್ಲು ಠಾಣಾಧಿಕಾರಿ ನಂಜುಂಡ ಸ್ವಾಮಿ ಸೂಕ್ತ ಭದ್ರತೆ ಕ್ರಮಕೈಗೊಂಡಿದ್ದರು.

ಸಿದ್ದಾಪುರ: ಕೇಂದ್ರ ಸರಕಾರ ತೈಲ ಬೆಲೆ ಏರಿಕೆ ಮಾಡಿರುವದನ್ನು ಖಂಡಿಸಿ ಭಾರತ್ ಬಂದ್ ಬೆಂಬಲಿಸಿ ಸಿದ್ದಾಪುರದಲ್ಲಿ ಸಿ.ಪಿ.ಐ.(ಎಂ) ಪಕ್ಷದ ವತಿಯಿಂದ ಪ್ರತಿಭಟನೆ ನಡೆಸಲಾಯಿತು. ಸಿ.ಪಿ.ಐ.(ಎಂ) ಪಕ್ಷದ ಮುಖಂಡರಾದ ಡಾ. ದುರ್ಗಾ ಪ್ರಸಾದ್ ಮಾತನಾಡಿ ಕೇಂದ್ರ ಸರಕಾರವು ತೈಲ ಬೆಲೆ ಏರಿಕೆ ಮಾಡಿತ್ತಿರುವ ಹಿನ್ನೆಲೆಯಲ್ಲಿ ಜನಸಾಮಾನ್ಯರು ಸಂಕಷ್ಟಕ್ಕೆ ಸಿಲುಕುತ್ತಿದ್ದಾರೆ ಎಂದರು. ಪ್ರತಿಭಟನೆಯಲ್ಲಿ ಸಿ.ಪಿ.ಐ.(ಎಂ) ಪಕ್ಷದ ಪದಾಧಿಕಾರಿಗಳಾದ ಎನ್.ಡಿ. ಕುಟ್ಟಪ್ಪ, ಹೆಚ್.ಬಿ. ರಮೇಶ್, ಅನಿಲ್, ವೈಜು, ಶಾಲಿಪೌಲಸ್ ಇನ್ನಿತರರು ಹಾಜರಿದ್ದರು.

ಸಿದ್ದಾಪುರ: ತೈಲ ಬೆಲೆ ಏರಿಕೆ ವಿರೋಧಿಸಿ ಕಾಂಗ್ರೆಸ್ ಸೇರಿದಂತೆ ವಿವಿಧ ಪಕ್ಷಗಳು ಕರೆ ನೀಡಿದ್ದ ಭಾರತ್ ಬಂದ್‍ಗೆ ಬೆಂಬಲ ವ್ಯಕ್ತಪಡಿಸಿ ಎಸ್‍ಡಿಪಿಐ ಪಕ್ಷದ ಕಾರ್ಯಕರ್ತರು ಸಿದ್ದಾಪುರದಲ್ಲಿ ಪ್ರತಿಭಟನೆ ನಡೆಸಿದರು.

ಸಿದ್ದಾಪುರ ಘಟಕದ ಅಧ್ಯಕ್ಷ ಹಸ್ಸನ್, ಜಿಲ್ಲಾ ಸಮಿತಿ ಸದಸ್ಯ ಶೌಕತ್ ಅಲಿ, ಪ್ರಮುಖರಾದ ಹನೀಫ್, ಶಾಹುಲ್, ಬಶೀರ್ ಇದ್ದರು.

ಶನಿವಾರಸಂತೆ: ಬಂದ್ ಕರೆ ಹಿನ್ನೆಲೆಯಲ್ಲಿ ಶನಿವಾರಸಂತೆ, ಕೊಡ್ಲಿಪೇಟೆ ಹೋಬಳಿಯಲ್ಲಿ ಸರಕಾರಿ ಬಸ್, ಖಾಸಗಿ ಬಸ್ ಸಂಚಾರ ಸ್ಥಗಿತಗೊಂಡಿದೆ. ಶಾಲಾ-ಕಾಲೇಜುಗಳು ಎಂದಿನಂತೆ ಕಾರ್ಯನಿರ್ವಹಿಸಿದವು. ಅಂಗಡಿಮುಂಗಟ್ಟುಗಳು, ಕಚೇರಿಗಳು, ಬ್ಯಾಂಕ್‍ಗಳು, ಮದ್ಯದ ಅಂಗಡಿಗಳು ಎಂದಿನಂತೆ ತೆರೆದಿದ್ದವು.

ಕೂಡಿಗೆ: ಹೆಬ್ಬಾಲೆಯ ಸರ್ಕಲ್‍ನಲ್ಲಿ ಜೆಡಿಎಸ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಹೆಬ್ಬಾಲೆ ಜೆಡಿಎಸ್‍ನ ಮುಖಂಡ ಗ್ರಾಮ ಪಂಚಾಯಿತಿ ಸದಸ್ಯ ಮಧುಸೂದನ್ ನೇತೃತ್ವದಲ್ಲಿ ಹೆಬ್ಬಾಲೆಯಲ್ಲಿ ಅರ್ಧ ಗಂಟೆಯ ಕಾಲ ರಸ್ತೆ ತಡೆ ನಡೆಸಿ, ತೈಲ ಬೆಲೆ ಏರಿಕೆಯ ವಿರುದ್ಧ ಘೋಷಣೆಗಳನ್ನು ಕೂಗಿ ಪ್ರತಿಭಟನೆ ನಡೆಸಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯ ದಿನೇಶ್, ಅಶೋಕ್ ಮುಖಂಡರಾದ ರವಿ, ಮಂಜುನಾಥ್, ವಿಶ್ವನಾಥ್, ರವಿಚಂದ್ರ ಸೇರಿದಂತೆ ಕಾರ್ಯಕರ್ತರು ಪ್ರತಿಭಟನೆಯಲ್ಲಿದ್ದರು.

ಕುಶಾಲನಗರ : ತೈಲ ಬೆಲೆ ಏರಿಕೆ ಖಂಡಿಸಿ ಕೇಂದ್ರ ಸರಕಾರದ ವಿರುದ್ದ ನಡೆದ ಭಾರತ್ ಬಂದ್ ಹಿನ್ನೆಲೆಯಲ್ಲಿ ಸ್ಥಳೀಯ ಕಾಂಗ್ರೆಸ್ ಪಕ್ಷದ ಕಾರ್ಯಕರ್ತರಿಂದ ಪ್ರತಿಭಟನೆ ನಡೆಯಿತು. ಬೈಚನಹಳ್ಳಿಯ ಮಾರಿಯಮ್ಮ ದೇವಾಲಯದಿಂದ ಹೊರಟ ಪಕ್ಷದ ಪ್ರಮುಖರು, ಕಾರ್ಯಕರ್ತರು ಹೆದ್ದಾರಿಯಲ್ಲಿ ಮೆರವಣಿಗೆ ತೆರಳಿ ಕೇಂದ್ರ ಸರಕಾರದ ವಿರುದ್ಧ ಘೋಷಣೆಗಳನ್ನು ಕೂಗಿದರು. ಕಾರೊಂದಕ್ಕೆ ಹಗ್ಗ ಕಟ್ಟಿ ಎಳೆದು ಸಾಗುವ ಮೂಲಕ ತೈಲ ಬೆಲೆ ಏರಿಕೆ ವಿರುದ್ದ ಆಕ್ರೋಷ ವ್ಯಕ್ತಪಡಿಸಿದರು. ಪಟ್ಟಣದ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ವೃತ್ತದಲ್ಲಿ ಮಾನವ ಸರಪಳಿ ರಚಿಸಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಷ ವ್ಯಕ್ತಪಡಿಸಿದರು.

ನಾಡ ಕಛೇರಿಗೆ ತೆರಳಿದ ಪ್ರತಿಭಟನಾಕಾರರು, ತೈಲ ಬೆಲೆ ಇಳಿಸುವಂತೆ ಆಗ್ರಹಿಸಿ ಕಂದಾಯಾಧಿಕಾರಿಗಳ ಮೂಲಕ ಸರಕಾರಕ್ಕೆ ಮನವಿ ಪತ್ರ ಸಲ್ಲಿಸಿದರು.

ಕುಶಾಲನಗರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಿ.ಪಿ. ಶಶಿಧರ್, ನೇತೃತ್ವದಲ್ಲಿ ನಡೆದ ಪ್ರತಿಭಟನೆಯಲ್ಲಿ ಪ್ರಮುಖರಾದ ಹೆಚ್.ಜೆ. ಕರಿಯಪ್ಪ, ಪ್ರಮೋದ್ ಮುತ್ತಪ್ಪ, ಕೆ.ಕೆ. ಮಂಜುನಾಥ್ ಕುಮಾರ್, ಅಬ್ದುಲ್ ಖಾದರ್, ಹೆಚ್.ಕೆ. ಶಿವಶಂಕರ್, ಹೆಚ್.ಕೆ. ಪಾರ್ವತಿ, ಕೆ.ಎನ್. ಅಶೋಕ್ ಮತ್ತಿತರರು ಇದ್ದರು.

ಪಟ್ಟಣದ ಕಾರು ನಿಲ್ದಾಣದ ಬಹಿರಂಗ ವೇದಿಕೆಯಲ್ಲಿ ಸಭಾ ಕಾರ್ಯಕ್ರಮ ನಡೆಯಿತು.

ತಿತಿಮತಿ: ತೈಲ ಬೆಲೆ ವಿರೋಧಿಸಿ ನಡೆದ ಭಾರತ್ ಬಂದ್‍ಗೆ ತಿತಿಮತಿಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಸ್ಥಳೀಯ ಕಾಂಗ್ರೆಸ್ ಪ್ರಮುಖರಿಂದ ಪಟ್ಟಣದಲ್ಲಿ ಮಾನವ ಸರಪಳಿ ನಿರ್ಮಿಸಿ ಪ್ರತಿಭಟಿಸಲಾಯಿತು. ಕಾಂಗ್ರೆಸ್ ಸ್ಥಳೀಯ ಮುಖಂಡ ವಿನಯ್‍ಕುಮಾರ್, ಜಿ.ಪಂ. ಸದಸ್ಯೆ ಪಂಕಜ, ತಾ.ಪಂ. ಸದಸ್ಯೆ ಆಶಾಜೇಮ್ಸ್, ತಿತಿಮತಿ ಗ್ರಾ.ಪಂ ಅಧ್ಯಕ್ಷೆ ಶಿವಕುಮಾರ್ ಪ್ರಮುಖರು ಪಾಲ್ಗೊಂಡಿದ್ದರು.

ಖಾಸಗಿ ಬಸ್ ಸಂಚಾರ ಇಲ್ಲದ ಕಾರಣ ಗ್ರಾಮಗಳಿಂದ ಬರುವ ವಿದ್ಯಾರ್ಥಿಗಳು ತೊಂದರೆ ಅನುಭವಿಸಿದರು. ರಸ್ತೆಯಲ್ಲಿ ಬಸ್‍ಗಾಗಿ ಕಾದು ಸುಸ್ತಾದರು. ಒಂದಷ್ಟು ವಿದ್ಯಾರ್ಥಿಗಳು ಖಾಸಗಿ ವಾಹನದ ಮೂಲಕ ಆಗಮಿಸಿದರು. ಸರ್ಕಾರಿ ಬಸ್ ಓಡಾಟ ಸ್ವಲ್ಪ ಮಟ್ಟಿಗೆ ಕಂಡು ಬಂತು.

ಪ್ರಯಾಣಿಕರ ಹಿತದೃಷ್ಟಿಯಿಂದ ಅಮ್ಮತ್ತಿ, ಗೋಣಿಕೊಪ್ಪ, ಪೊನ್ನಂಪೇಟೆ ಭಾಗಗಳಲ್ಲಿ ಒಂದೆರಡು ಬಸ್‍ಗಳು ಬೆಳಗ್ಗೆ ಸಂಚರಿಸಲು ಅರಂಭಿಸಿತ್ತಾದರೂ ನಂತರ ಸ್ಥಗಿತಗೊಂಡಿತು. ಬಸ್ ಮಾಲೀಕರ ಸಂಘದ ನಿರ್ಧಾರಕ್ಕೆ ಅಲ್ಲಲ್ಲಿ ವಿರೋಧ ವ್ಯಕ್ತವಾಯಿತು. ಉಳಿದಂತೆ ಅಂಗಡಿ-ಮುಂಗಟ್ಟು ತೆರೆದಿತ್ತು. ಆಟೋ, ಬಾಡಿಗೆ ವಾಹನ ಸಂಚರಿಸಿದವು.

ಬಸ್ ಸಂಚಾರ ಸ್ಥಗಿತ

ಗೋಣಿಕೊಪ್ಪಲು: ಬಂದ್ ದಿನವಾದ ಸೋಮವಾರ ಗೋಣಿಕೊಪ್ಪಲಿನಲ್ಲಿ ಕೆಲ ಸರ್ಕಾರಿ ಬಸ್‍ಗಳು ಓಡಾಡಿದವು. ಬೆಳಿಗ್ಗೆ ಬೆರಳೆಣಿಕೆಯಷ್ಟು ಖಾಸಗಿ ಬಸ್‍ಗಳು ಓಡಾಡಿದೆಯಾದರೂ 10ರ ಬಳಿಕ ಸಂಚಾರ ಸ್ಥಗಿತಗೊಳಿಸಿದವು. ಜಿಲ್ಲೆಯ ಹೊರಭಾಗದಿಂದ ಬರುತ್ತಿದ್ದ ಸಾರಿಗೆ ಬಸ್‍ಗಳ ಓಡಾಟ ಸಂಪೂರ್ಣ ಸ್ಥಗಿತಗೊಂಡಿತ್ತು.

ಖಾಸಗಿ ವಾಹನಗಳು ಎಂದಿನಂತೆ ಸಂಚರಿಸಿದವು. ಅಂಗಡಿ ಮುಂಗಟ್ಟುಗಳು ಬೆಳಗ್ಗಿನಿಂದ ಸಹಜವಾಗಿ ತೆರೆದಿದ್ದವು. ಎಂದಿನಂತೆ ಖಾಸಗಿ ಬಸ್‍ಗಳಿಲ್ಲದೆ ಶಾಲಾ ಕಾಲೇಜಿನ ವಿದ್ಯಾರ್ಥಿಗಳು ಪರದಾಡಿದರು. ಬ್ಯಾಂಕ್ ಮೊದಲಾದ ಸರ್ಕಾರಿ ಕಚೇರಿಗಳು ಕಾರ್ಯನಿರ್ವಹಿಸಿದ್ದವು. ಆದರೆ ಜನರ ಓಡಾಟ ಕಡಿಮೆಯಿತ್ತು.

ಶ್ರೀಮಂಗಲ: ಪೆಟ್ರೋಲ್ ಬೆಲೆ ಏರಿಕೆ ಖಂಡಿಸಿ ಕಾಂಗ್ರೆಸ್ ಪಕ್ಷ ಕರೆ ನೀಡಿದ್ದ ಭಾರತ ಬಂದ್ ಕರೆಗೆ ದಕ್ಷಿಣ ಕೊಡಗಿನಲ್ಲಿ ಖಾಸಗಿ ಬಸ್ ಸಂಚಾರ ಸಂಪೂರ್ಣ ಸ್ಥಗಿತವಾಗಿದ್ದು, ಹೊರತು ಪಡಿಸಿದಂತೆ ಬಂದ್ ನೀರಸವಾಗಿತ್ತು.

ದಕ್ಷಿಣ ಕೊಡಗಿನ ಪ್ರಮುಖ ಪಟ್ಟಣಗಳಲ್ಲಿ ಎಂದಿನಂತೆ ಅಂಗಡಿ ಮುಂಗಟ್ಟುಗಳು ತೆರೆದಿದ್ದವು. ಖಾಸಗಿ ವಾಹನ ಸಂಚಾರ ಸಹ ಎಂದಿನಂತೆ ಇತ್ತು. ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ವಿರಳವಾಗಿತ್ತು.

ಶ್ರೀಮಂಗಲ, ಟಿ. ಶೆಟ್ಟಿಗೇರಿ, ಬಿರುನಾಣಿ, ಹುದಿಕೇರಿಯಲ್ಲಿ ಸೋಮವಾರದ ಸಂತೆ ನಡೆಯಿತು. ಅದರೆ ವ್ಯಾಪಾರ ಮಳಿಗೆಗಳ ಸಂಖ್ಯೆ ಮತ್ತು ಜನ ಸಂದಣಿ ಕಡಿಮೆ ಇತ್ತು.

ಕೊಡಗು ಪ್ರಕೃತಿ ವಿಕೋಪ ಕ್ಕೆ ನಲುಗಿರುವ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಶಿವು ಮಾದಪ್ಪ ಅವರು, ಕೊಡಗು ಬಂದ್ ಆಚರಣೆಗೆ ಮುಂದಾಗುವದಿಲ್ಲ ಎಂದು ಹೇಳಿಕೆ ನೀಡಿದ್ದರು.

ದಕ್ಷಿಣ ಕೊಡಗಿನಲ್ಲಿ ಬಂದ್ ಬೆಂಬಲಿಸಿ ಅಂಗಡಿ ಮಳಿಗೆ ಮುಚ್ಚಿಸುವ, ರಸ್ತೆ ತಡೆ ಮಾಡಿರುವ ಯಾವದೇ ಪ್ರಕರಣ ಇದುವರೆಗೆ ವರದಿಯಾಗಿಲ್ಲ. ಖಾಸಗಿ ಬಸ್‍ಗಳು ಸಂಚಾರ ಸ್ಥಗಿತಗೊಳಿಸಿ ರಸ್ತೆಯುದ್ದಕ್ಕೂ ನಿಂತಿದ್ದವು. ವಿದ್ಯಾರ್ಥಿಗಳು ಶಾಲಾ-ಕಾಲೇಜಿಗೆ ತೆರಳಲು ಖಾಸಗಿ ಬಸ್ ಅವಲಂಬಿಸಿರುವದರಿಂದ ವಿದ್ಯಾರ್ಥಿಗಳಿಗೆ ಪರ್ಯಾಯ ವ್ಯವಸ್ಥೆ ಇಲ್ಲದ ಕಾರಣ, ಹಲವು ವಿದ್ಯಾಸಂಸ್ಥೆಗಳು ರಜೆ ಘೋಷಣೆ ಮಾಡಿದ್ದವು.

ಸಿದ್ದಾಪುರ: ಬಂದ್ ಬೆಂಬಲಿಸಿ ಸಿದ್ಧಾಪುರ ವಲಯ ಕಾಂಗ್ರೆಸ್ ವತಿಯಿಂದ ಸಿದ್ದಾಪುರ ಪಟ್ಟಣದಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಲಾಯಿತು. ಕೇಂದ್ರ ಸರಕಾರದ ವಿರುದ್ಧ ಘೋಷಣೆ ಕೂಗಿದ ಪ್ರತಿಭಟನಾಕಾರರು ಸಿದ್ದಾಪುರ ಬಸ್ ನಿಲ್ದಾಣಕ್ಕೆ ಜಮಾಯಿಸಿದರು.

ಈ ಸಂದರ್ಭ ಮಾತನಾಡಿದ ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಜಾನ್ಸನ್ ಹಾಗೂ ಗ್ರಾ.ಪಂ. ಅಧ್ಯಕ್ಷ ಮಣಿ ಕೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು. ಕೂಡಲೇ ತೈಲ ಬೆಲೆ ಇಳಿಸಬೇಕೆಂದು ಒತ್ತಾಯಿಸಿದರು.

ಈ ಸಂದರ್ಭ ವಲಯ ಅಧ್ಯಕ್ಷ ಮೂಸ, ಯುವ ಕಾಂಗ್ರೆಸ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ರೆಜಿತ್ ಕುಮಾರ್ ಗುಹ್ಯ, ನೆಲ್ಲಿಹುದಿಕೇರಿ ವಲಯ ಅಧ್ಯಕ್ಷ ರಜಾಕ್, ಗ್ರಾ.ಪಂ. ಸದಸ್ಯರು, ಕಾರ್ಯಕರ್ತರು ಇದ್ದರು.