ಮಡಿಕೇರಿ, ಸೆ. 10 : ಇತ್ತೀಚೆಗೆ ಕೊಡಗು ಜಿಲ್ಲೆಯಲ್ಲಿ ಸಂಭವಿಸಿದ ಅತಿವೃಷ್ಟಿ ಹಾನಿಯಿಂದ ಸಂಕಷ್ಟಕ್ಕೆ ಸಿಲುಕಿರುವ ಮೊಗೇರ ಸಮಾಜದ ಸಂತ್ರಸ್ತ ಕುಟುಂಬಗಳಿಗೆ ಕೊಡಗು ಜಿಲ್ಲಾ ಮೊಗೇರ ಸೇವಾ ಸಮಾಜದ ವತಿಯಿಂದ ಆಹಾರ ಪದಾರ್ಥಗಳ ಕಿಟ್‍ನ್ನು ವಿತರಿಸಲಾಯಿತು.

ನಗರದ ಅರಸು ಭವನದಲ್ಲಿ ನಡೆದ ಸರಳ ಕಾರ್ಯಕ್ರಮದಲ್ಲಿ ಸುಮಾರು 140 ಕುಟುಂಬಗಳಿಗೆ ಅಕ್ಕಿ, ಬೇಳೆ, ರಾಗಿ, ಎಣ್ಣೆ, ಉಪ್ಪು, ಸಕ್ಕರೆ ಇನ್ನಿತರ ದಿನಸಿ ವಸ್ತುಗಳನ್ನು ಸಮಾಜದ ಪ್ರಮುಖರು ವಿತರಿಸುವ ಮೂಲಕ ಸಂತ್ರಸ್ತರಿಗೆ ಅಭಯ ನೀಡಿದರು.

ಮೊಗೇರ ಸೇವಾ ಸಮಾಜದ ಜಿಲ್ಲಾಧ್ಯಕ್ಷ ಬಿ.ಶಿವಪ್ಪ ಮಾತನಾಡಿ ಮಹಾಮಳೆಯ ಹೊಡೆತಕ್ಕೆ ಸಿಲುಕಿ ಮೊಗೇರ ಸಮಾಜದ ಅನೇಕ ಕುಟುಂಬಗಳು ಸಂಕಷ್ಟದಲ್ಲಿವೆ. ಇವರಿಗೆ ಸಹಾಯ ಹಸ್ತ ಚಾಚುವದು ನಮ್ಮೆಲ್ಲರ ಜವಬ್ದಾರಿಯಾಗಿದೆ ಎಂದರು. ಸಂತ್ರಸ್ತರು ಆತ್ಮಸ್ಥೈರ್ಯ ಕಳೆದುಕೊಳ್ಳದೆ ಧೈರ್ಯದಿಂದ ಜೀವನ ಸಾಗಿಸುವಂತೆ ಕರೆ ನೀಡಿದರು.

ರಾಜ್ಯದಿಂದ ಸಾಕಷ್ಟು ಪ್ರಮಾಣದಲ್ಲಿ ಆಹಾರ ಸಾಮಗ್ರಿಗಳು ಬಂದಿದ್ದರೂ ಇತರ ಸಮುದಾಯದ ವರಿಗೆ ಸಿಕ್ಕಂತೆ ನಮ್ಮ ಸಮುದಾಯದ ವರಿಗೆ ಸಾಮಗ್ರಿಗಳು ಸಿಗಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

ಗೌರವ ಅಧ್ಯಕ್ಷ ಪಿ.ಎಂ.ರವಿ ಮಾತನಾಡಿ ನಾವೇ ನಮ್ಮ ಸಮಾಜದಿಂದ ಪ್ರತ್ಯೇಕವಾಗಿ ಪರಿಹಾರ ಕೇಂದ್ರವನ್ನು ಆರಂಭಿಸಿದ್ದರೆ ಬಹುಶಃ ಸಾಕಷ್ಟು ಪರಿಹಾರ ಸಾಮಗ್ರಿಗಳು ಸಿಗುತ್ತಿತ್ತು. ನಾವು ಹಾಗೆ ಮಾಡದೆ, ನೊಂದ ಜನರಲ್ಲಿ ನಾವೂ ಕೂಡ ಒಂದು ಎಂದು ಭಾವಿಸಿದ್ದೆವು. ಆದರೆ ನಮಗೆ ನ್ಯಾಯ ಸಿಗಲಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ವಿವಿಧ ಸಂಘ, ಬ್ಯಾಂಕ್‍ಗಳಿಂದ ಸಾಲ ಮಾಡಿ ಕಷ್ಟಪಟ್ಟು ಮನೆಗಳನ್ನು ನಿರ್ಮಿಸಿಕೊಂಡಿದ್ದ ಮೊಗೇರ ಕುಟುಂಬಗಳು ಇಂದು ಪ್ರಕೃತಿ ವಿಕೋಪಕ್ಕೆ ಸಿಲುಕಿ ಅತಂತ್ರ ಸ್ಥಿತಿಯನ್ನು ಅನುಭವಿಸುತ್ತಿವೆ. ಆದರೆ ಅದೃಷ್ಟವಶಾತ್ ಪ್ರಾಣ ಹಾನಿ ಸಂಭವಿಸಿಲ್ಲವೆಂದು ಸಮಾಧಾನ ವ್ಯಕ್ತಪಡಿಸಿದ ರವಿ, ಮೊಗೇರ ಸೇವಾ ಸಮಾಜದ ಮೂಲಕ ಸಂತ್ರಸ್ತರಿಗೆ ಸಂಪೂರ್ಣ ಸಹಕಾರ ನೀಡಲಾಗುವದೆಂದು ಭರವಸೆ ನೀಡಿದರು.

ಸಮಾಜದ ಪ್ರಧಾನ ಕಾರ್ಯದರ್ಶಿ ಎಂ.ಜಿ.ಚಂದ್ರು, ಹಿರಿಯ ಸದಸ್ಯ ಬಾಬು, ಮಡಿಕೇರಿ ತಾಲೂಕು ಅಧ್ಯಕ್ಷ ಸುರೇಶ್, ರಾಜ್ಯ ಪ್ರಧಾನ ಕಾರ್ಯದರ್ಶಿ ಮಂಜು, ಪಿ.ಸಿ.ರಮೇಶ್, ಸಿದ್ದಾಪುರದ ಅಮೃತ ಫ್ರೆಂಡ್ಸ್ ಅಧ್ಯಕ್ಷ ಚಂದ್ರು, ವೀರಾಜಪೇಟೆ ತಾಲೂಕು ಅಧ್ಯಕ್ಷ ಮೋಹನ ಮತ್ತಿತರರು ಉಪಸ್ಥಿತರಿದ್ದರು.