ಮಡಿಕೇರಿ, ಸೆ. 9: ಭಾರತ ಸರಕಾರವು, ರಾಜ್ಯ ಸರಕಾರದ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮೂಲಕ ಗರ್ಭಿಣಿ ತಾಯಂದಿರು, ಹಾಲುಣಿಸುವ ತಾಯಿಯಂದಿರು ಮತ್ತು ನವಜಾತ ಶಿಶುಗಳ ಲಾಲನೆ - ಪಾಲನೆಯ ವಿಚಾರಕ್ಕೆ ಸಂಬಂಧಿಸಿದಂತೆ ಮನೆ ಮನೆಯಲ್ಲಿ ಪೋಷಣೆಯ ಹಬ್ಬ... ಪೋಷಣ ಅಭಿಯಾನ ಜನಾಂದೋಲನ ಯೋಜನೆಯೊಂದನ್ನು ಜಾರಿಗೆ ತಂದಿದೆ.ಇದರಂತೆ ಪೋಷಣ ಅಭಿಯಾನ ಯೋಜನೆಯಡಿಯಲ್ಲಿ 2018ರ ಸೆಪ್ಟೆಂಬರ್ ತಿಂಗಳನ್ನು ‘ಪೋಷಣ ಮಾಸ’ ವಾಗಿ ಆಚರಿಸಲು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಮುಂದಾಗಿದೆ. ರಾಜ್ಯ ಸರಕಾರದ ಈ ಇಲಾಖೆಯ ನಿರ್ದೇಶನದಂತೆ ಕೊಡಗು ಜಿಲ್ಲೆಯಲ್ಲಿಯೂ ಈ ಕಾರ್ಯಕ್ರಮ ನಡೆಯಬೇಕಿದ್ದು, ಪ್ರಥಮ ಕಾರ್ಯಕ್ರಮ ಮಡಿಕೇರಿ ತಾಲೂಕಿನ ಬೆಟ್ಟಗೇರಿಯಲ್ಲಿ ಶುಕ್ರವಾರದಂದು ನಡೆದಿದೆ.

ಇದೀಗ ಈ ಯೋಜನೆಯ ಎರಡನೆಯ ಕಾರ್ಯಕ್ರಮ ಕೂಡ ಇದೇ ತಾಲೂಕಿನ ನಾಪೋಕ್ಲು ಹಳೇ ತಾಲೂಕಿನಲ್ಲಿ ತಾ. 10 ರಂದು (ಇಂದು) ನಿಗದಿಯಾಗಿದೆ. ಜಿಲ್ಲೆಯ ಮೂರು ತಾಲೂಕುಗಳಲ್ಲಿ ಈ ಕಾರ್ಯಕ್ರಮದಂತೆ ಜನಾಂದೋಲನ ನಡೆಯಬೇಕಾಗಿದೆ. ಸೆಪ್ಟೆಂಬರ್ ತಿಂಗಳಿನಲ್ಲಿ ನಾಲ್ಕು ವಾರಗಳಲ್ಲಿ ನಿರ್ದಿಷ್ಟ ಮಾರ್ಗಸೂಚಿಯಂತೆ

(ಮೊದಲ ಪುಟದಿಂದ) ಈ ಕಾರ್ಯಕ್ರಮ ನಡೆಸಬೇಕಿದೆ.

ಹಮ್ಮಿಕೊಳ್ಳಬೇಕಾದ ಚಟುವಟಿಕೆಗಳು

ಹೊಸ ಯೋಜನೆಗಳಾದ ಪೋಷಣ್ ಅಭಿಯಾನ, ಪ್ರಧಾನಮಂತ್ರಿ ಮಾತೃ ವಂದನಾ ಯೋಜನೆ ಮತ್ತು ಮಾತೃಪೂರ್ಣ ಯೋಜನೆಗಳ ಪ್ರಯೋಜನಗಳ ಬಗ್ಗೆ ವಿವರಿಸುವದು, ಅಪೌಷ್ಠಿಕ ಮಕ್ಕಳ ಆರೋಗ್ಯ ಮಟ್ಟವನ್ನು ಉತ್ತಮ ಪಡಿಸಲು ಕ್ರಿಯಾಯೋಜನೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸೂಚನೆ ಪಾಲನೆ, ಎಲ್ಲಾ ಮಕ್ಕಳನ್ನು ಕಡ್ಡಾಯವಾಗಿ ಅಂಗನವಾಡಿಗೆ ಕರೆತಂದು ಅಪೌಷ್ಠಿಕ ಮಕ್ಕಳನ್ನು ಗುರುತಿಸುವದು, ಆರೋಗ್ಯ ತಪಾಸಣೆ ನಡೆಸಬೇಕಿದೆ. ತಾಯಂದಿರುಗಳು ಪೌಷ್ಟ್ಟಿಕ ಆಹಾರ ಪದಾರ್ಥ ತಯಾರಿಸಲು ಸ್ಪರ್ಧೆ, ವಿಧಾನದ ಬಗ್ಗೆ ಪ್ರಾತ್ಯಕ್ಷಿಕೆ, ಮಕ್ಕಳಿಂದ ಸಾಂಸ್ಕøತಿಕ ಕಾರ್ಯಕ್ರಮ ಆಯೋಜನೆ, ಸ್ವಚ್ಛತೆ ಮತ್ತು ನೈರ್ಮಲ್ಯದ ಅರಿವು, ಪಂಚಾಯಿತಿಮಟ್ಟದಲ್ಲಿ ಜಾಥಾ, ಬಾಲ್ಯವಿವಾಹ ನಿಷೇಧ ಮಾಹಿತಿ, ಹದಿಹರೆಯದ ಹೆಣ್ಣು ಮಕ್ಕಳಿಗೆ ಸೂಕ್ತ ಅರಿವು ಮೂಡಿಸುವಂತಹ ಚಟುವಟಿಕೆಗಳು ಇದರಲ್ಲಿ ಒಳಗೊಂಡಿವೆ.

ಅಭಿಯಾನದ ಉದ್ದೇಶ

ದೇಶದಲ್ಲಿ ಕುಬ್ಜತೆ, ಅಪೌಷ್ಟಿಕತೆ, ರಕ್ತ ಹೀನತೆ (ಎನಿಮಿಯಾ) ಹಾಗೂ ಹುಟ್ಟುವಾಗ ತೂಕ ಕಡಿಮೆ ಇರುವ ಶಿಶುಗಳ ಸಂಖ್ಯೆಯಲ್ಲಿ ಇಳಿಕೆ ಸಾಧಿಸುವದಕ್ಕಾಗಿ ವಿವಿಧ ಖಾತೆಗಳು ಮತ್ತು ವಿಭಾಗಗಳು ಕಳೆದ ಕೆಲವು ವರ್ಷಗಳಿಂದ ಸಕ್ರಿಯವಾಗಿ ಕೆಲಸ ಮಾಡುತ್ತಿವೆ. ಈ ನಿಟ್ಟಿನಲ್ಲಿ ನಿರೀಕ್ಷಿತ ಪರಿಣಾಮಗಳನ್ನು ಕಾಣುವದು, ಇನ್ನೂ ಬಾಕಿ ಇದೆ. ಪೋಷಣ ಅಭಿಯಾನ ತಾಂತ್ರಿಕತೆಯ ಸಹಾಯದಿಂದ ಜನರ ಆಹಾರ ಮತ್ತು ವ್ಯವಹಾರಗಳಲ್ಲಿ ಸಕಾರಾತ್ಮಕ ಬದಲಾವಣೆಯನ್ನು ತರಲಿವೆ, ಈ ಯೋಜನೆಯಲ್ಲಿ ವಿವಿಧ ಖಾತೆಗಳು ಮತ್ತು ವಿಭಾಗಗಳು, ಪರಸ್ಪರ ಹೊಂದಾಣಿಕೆಯೊಂದಿಗೆ ತಮ್ಮ ಸಹಕಾರವನ್ನು ನೀಡಲಿವೆ. ಈ ಅಭಿಯಾನವನ್ನು ಯಶಸ್ವಿಗೊಳಿಸಲು ಪಂಚಾಯಿತಿ ಮಟ್ಟದವರೆಗೆ ಒಂದು ಬಲಿಷ್ಠವಾದ ಸಹಭಾಗಿತ್ವದ ಅಗತ್ಯವಿದೆ. ಈ ನಿಟ್ಟಿನಲ್ಲಿ ಪಂಚಾಯಿತಿ ಪ್ರತಿನಿಧಿಗಳು ತಮ್ಮ ಪಾತ್ರವನ್ನು ಸಮರ್ಥವಾಗಿ ನಿಭಾಯಿಸಬೇಕಿದೆ ಮತ್ತು ಅಪೌಷ್ಟಿಕತೆಯನ್ನು ದೂರಗೊಳಿಸಲು ದೇಶಕ್ಕೆ ಶಕ್ತಿಶಾಲಿ ತಳಪಾಯ ಹಾಕಬೇಕಿದೆ ಎಂಬದು ಇದರ ಮುಖ್ಯ ಉದ್ದೇಶವಾಗಿದೆ.

ಬೆಟ್ಟಗೇರಿಯಲ್ಲಿ ಪ್ರಥಮ ಕಾರ್ಯಕ್ರಮ

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ, ಶಿಶು ಅಭಿವೃದ್ದಿ ಯೋಜನೆ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮತ್ತು ವಕೀಲರ ಸಂಘ, ಮಡಿಕೇರಿ ಇವರ ಸಂಯುಕ್ತ ಆಶ್ರಯದಲ್ಲಿ ಬೆಟ್ಟಗೇರಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ “ಪೌಷ್ಟಿಕ ಆಹಾರ ಸಪ್ತಾಹ ಪೋಷಣ್ ಮಾಸ ಅಭಿಯಾನ, ಮಾತೃ ವಂದನಾ ಸಪ್ತಾಹ ಹಾಗೂ ಮಾತೃ ಪೂರ್ಣ ಯೋಜನೆ ಕಾನೂನಿನ ಕುರಿತು ಅರಿವು ಕಾರ್ಯಾಗಾರ” ತಾ. 7 ರಂದು ನಡೆಯಿತು. ಕಾರ್ಯಕ್ರಮವನ್ನು ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಸಿವಿಲ್ ನ್ಯಾಯಾಧೀಶರಾದ ನೂರುನ್ನೀಸಾ ಅವರು ಉದ್ಘಾಟಿಸಿದರು.

ಇತರೆ ಜಿಲ್ಲೆಗಳಿಗೆ ಹೋಲಿಸಿದಾಗ ಕೊಡಗಿನಲ್ಲಿ ಅಪೌಷ್ಟಿಕತೆ ಕಡಿಮೆ ಇದ್ದು, ಪೌಷ್ಟಿಕತೆಯ ಅರಿವು ಮೂಡಿಸುವದರಿಂದ ಹಾಗೂ ಗರ್ಭಿಣಿ,ಬಾಣಂತಿ,ಮಕ್ಕಳಲ್ಲಿ ಪೌಷ್ಟಿಕಾಂಶ ಭರಿತ ಸಮತೋಲನ ಆಹಾರವನ್ನು ಸೇವಿಸುವ ಕುರಿತು ಕುಟುಂಬದವರು ಜಾಗೃತರಾದಲ್ಲಿ ಅಪೌಷ್ಟಿಕತೆಯನ್ನು ಸಂಪೂರ್ಣವಾಗಿ ತಡೆಗಟ್ಟಬಹುದು. ಈ ನಿಟ್ಟಿನಲ್ಲಿ ಅಂಗನವಾಡಿ ಕಾರ್ಯಕರ್ತೆಯರು, ಆಶಾ ಕಾರ್ಯಕರ್ತೆಯರು, ಇಲಾಖೆಯವರು ಶ್ರಮ ಪಡುತ್ತಿದ್ದು ಕುಟುಂಬದವರು ಹೆಚ್ಚಿನ ಕಾಳಜಿ ವಹಿಸುವ ಅವಶ್ಯಕತೆ ಇದೆ ಎಂದು ಅವರು ತಿಳಿಸಿದರು. ಮಕ್ಕಳು ಅಪೌಷ್ಟಿಕತೆಯಿಂದ ಸಾಯುವದನ್ನು ತಡೆಗಟ್ಟಲು ಪರಿಹಾರೋಪಾಯವನ್ನು ಸೂಚಿಸುವ ಕಾರ್ಯಯೋಜನೆಯ ಬಗ್ಗೆ 2011ರಲ್ಲಿ ಮುಖ್ಯ ನ್ಯಾಯಮೂರ್ತಿಗಳಾದ ಎನ್.ಕೆ. ಪಾಟೀಲ್ ಅವರು ಕೈಗೊಂಡ ಕ್ರಮಗಳ ಬಗ್ಗೆ ಸಮಿತಿಗಳ ಬಗ್ಗೆ, ಸೂಚನೆಗಳ ಬಗ್ಗೆ, ಮಾಹಿತಿಯನ್ನು ವಿವರವಾಗಿ ತಿಳಿಸಿದರು.

ಪ್ರೋಬೇಷನರಿ ನ್ಯಾಯಮೂರ್ತಿಗಳಾದ ಮಲ್ಲಿಕಾರ್ಜುನ ಮಾತನಾಡಿ ಆಧುನಿಕತೆಯ ಸೋಗಿನಲ್ಲಿ ಪೌಷ್ಟಿಕ ಆಹಾರ ಸೇವಿಸದೇ ಅಪೌಷ್ಟಿಕತೆಗೆ ಗುರಿಯಾಗುತ್ತಿರುವ ಬಗ್ಗೆ ಎಚ್ಚರ ವಹಿಸಬೇಕಾಗಿದೆ ಅಪೌಷ್ಟಿಕತೆ ನಿವಾರಣೆ ಕೇವಲ ಅಧಿಕಾರಿಗಳಿಂದ ಮಾತ್ರ ಸಾಧ್ಯವಾಗುವದಿಲ್ಲ ತಳಮಟ್ಟದಲ್ಲಿ ಕರ್ತವ್ಯ ನಿರ್ವಹಿಸುವ ಸಿಬ್ಬಂದಿಗಳ ಪ್ರಯತ್ನದಿಂದ ಮಹಿಳೆಯರ ಸಹಕಾರದಿಂದ ಮಾತ್ರ ಸಾಧ್ಯವೆಂದು ತಿಳಿಸಿದರು.

ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ಮೇಪಾಡಂಡ ಸವಿತ ಕೀರ್ತನ್ ಅವರು ತಿಳಿಸಿದರು. ಅಪೌಷ್ಠಿಕತೆಯನ್ನು ಹೋಗಲಾಡಿಸಲು ಕಿಶೋರ ಅವಸ್ಥೆಯಿಂದ ಎಚ್ಚರಿಕೆ ವಹಿಸುವದು ಸಮತೋಲನ ಆಹಾರ ಸೇವಿಸುವದು ಮುಖ್ಯವಾಗಿದೆ ಸ್ತನ್ಯಪಾನದ ಮಹತ್ವ ಅರಿತು 2ವರ್ಷದವರೆಗೂ ಸ್ತನ್ಯಪಾನ ಮಾಡಿಸುವದು ಮುಖ್ಯವಾಗಿದೆ. ಪ್ರತಿನಿತ್ಯ ಎಲ್ಲಾ ಪೌಷ್ಠಿಕಾಂಶವನ್ನು ಒಳಗೊಂಡ ಆಹಾರವÀನ್ನು ತಪ್ಪದೇ ಸೇವಿಸಿ ಸ್ವಚ್ಚತೆ ಕಾಪಾಡಿಕೊಂಡು ವ್ಯಾಯಾಮವನ್ನು ರೂಡಿಸಿಕೊಳ್ಳುವದರ ಮೂಲಕ ಆರೋಗ್ಯವಂತ ಜೀವನವನ್ನು ನಡೆಸಲು ಸಹಕಾರವಾಗಲಿದೆ ಎಂದು ತಿಳಿಸಿದರು.

ಮಾತೃವಂದನಾ, ಮಾತೃ ಪೂರ್ಣ ಬಗ್ಗೆಯೂ ಅವರು ವಿವರ ನೀಡಿದರು. ಹೊಸ ಕಾರ್ಯಕ್ರಮವಾದ ಪೋಷಣ್ ಅಭಿಯಾನದಡಿ ಸೆಪ್ಟೆಂಬರ್ ತಿಂಗಳನ್ನು ಪೋಷಣ್ ಮಾಸ ಎಂದು ಆಚರಿಸಲಾಗುತ್ತಿದೆ. ಇದರಲ್ಲಿ 2ವರ್ಷದೊಳಗಿನ ಮಕ್ಕಳ ತಾಯಂದಿರು ಪತಿ ಮತ್ತು ಕುಟುಂಬದವರಿಗೆ ಆರೋಗ್ಯ ಮತ್ತು ಪೌಷ್ಟಿಕತೆ ಬಗ್ಗೆ ಚುಚ್ಚುಮದ್ದು, ತಾಯಿ ಕಾರ್ಡ್‍ನ, ಅರಿವು ಮೂಡಿಸುವ ಹಾಗೂ ಅಂಗನವಾಡಿಗೆ ದಾಖಲೆ ಬಗ್ಗೆ ಮಾತೃ ಪೂರ್ಣ ಮತ್ತು ಮಾತೃ ವಂದನಾ ಇಲಾಖೆ ಸೌಲಭ್ಯಗಳ ಬಗ್ಗೆ ಕಬ್ಬಿಣಾಂಶ ಮಾತ್ರೆ, ತೂಕ ಆರೋಗ್ಯ ತಪಾಸಣೆ, ಅನ್ನಪ್ರಾಶನದ ಬಗ್ಗೆ ಚಟುವಟಿಕೆಗಳನ್ನು ಎಲ್ಲಾ ಅಂಗನವಾಡಿ ಕೇಂದ್ರದಲ್ಲಿ ಹಮ್ಮಿಕೊಳ್ಳಲಾಗುವದು ಇದರ ಸದುಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕೆಂದು ಕರೆ ನೀಡಿದರು

ಹಿರಿಯ ಮಹಿಳಾ ಆರೋಗ್ಯ ಸಹಾಯಕಿ ಸೀತಮ್ಮ ಅವರು ಆರೋಗ್ಯ ಇಲಾಖೆಯ ಸವಲತ್ತುಗಳ ಬಗ್ಗೆ, ಚುಚ್ಚುಮದ್ದಿನ ಬಗ್ಗೆ ಹಾಗೂ ಪೌಷ್ಟಿಕ ಆಹಾರದ ಬಗ್ಗೆ ಮಾಹಿತಿ ನೀಡಿದರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗ್ರಾಮ ಪಂಚಾಯತ್ ಅಧ್ಯಕ್ಷೆ ಬಿ.ಎಸ್ ಶಾಂತಿ ವಹಿಸಿದ್ದರು. ಕಾರ್ಯಕ್ರಮದಲ್ಲಿ ಗ್ರಾ.ಪಂ. ಸದಸ್ಯ ಕಮಲ ಉತ್ತಯ್ಯ, ಮುಖ್ಯೋಪಾಧ್ಯಾಯರಾದ ಸೀತಮ್ಮ, ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಲಲಿತ ಹಾಜರಿದ್ದರು. ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಜಯಪ್ಪ ನಿರೂಪಿಸಿ, ಶೈಲಾ ಪ್ರಾರ್ಥಿಸಿದರು. ಅಂಗನವಾಡಿ ಕಾರ್ಯಕರ್ತೆಯರಾದ ಪುಷ್ಷ, ಶೈಲಜ, ಶೈಲಾ, ಲೈಲಾ, ರೋಹಿಣಿ, ಮನುಜ, ಆಶಾ ಕಾರ್ಯಕರ್ತೆಯರು ಕಾರ್ಯಕ್ರಮದ ಯಶಸ್ವಿಗೆ ಶ್ರಮಿಸಿದರು.

ಇಂದು ನಾಪೋಕ್ಲು ಹಳೇ ತಾಲೂಕಿನಲ್ಲಿ

ಪೋಷಣೆ ಮಾಸ ಯೋಜನೆಯ ಕಾರ್ಯಕ್ರಮ ತಾ. 10 ರಂದು (ಇಂದು) ನಾಪೋಕ್ಲು ಹಳೇ ತಾಲೂಕಿನ ಮಹಿಳಾ ಸಮಾಜದಲ್ಲಿ ನಡೆಯಲಿದೆ.