ಮಡಿಕೇರಿ, ಸೆ. 9: ಕೊಡಗು ಜಿಲ್ಲೆ ಕಂಡು ಕೇಳರಿಯದಂತಹ ಪ್ರಕೃತಿ ವಿಕೋಪಕ್ಕೆ ತುತ್ತಾಗಿದೆ; ಊರಿಗೆ ಊರೇ ನಾಶವಾಗಿದೆ; ಭೂಕುಸಿತದೊಂದಿಗೆ ರಸ್ತೆ, ಮನೆ, ತೋಟ, ಗದ್ದೆ ಎಲ್ಲವೂ ಕೊಚ್ಚಿ ಹೋಗಿದೆ. ಮನೆಯೊಂದಿಗೆ ಜನ, ಜಾನುವಾರುಗಳ ಜೀವ ಹಾರಿ ಹೋಗಿದೆ. 25 ದಿನಗಳ ಹಿಂದಿನ ಹಚ್ಚ ಹಸುರಿನ ಸಿರಿ ತನ್ನ ಕಳೆಯನ್ನು ಕಳೆದುಕೊಂಡು ಕೆಸರಿನ ಕೂಪವಾಗಿ ಪರಿಣಮಿಸಿದೆ. ನೂರಾರು ವರ್ಷಗಳಿಂದ ನೆಲೆಸಿದ್ದ ಮಂದಿ ನೋವಿನೊಂದಿಗೆ ಮನೆ, ಗ್ರಾಮ ತೊರೆದು ಎಲ್ಲೆಲ್ಲೋ ಚದುರಿ ಹೋಗಿದ್ದಾರೆ. ಊರಲೆಲ್ಲ ಸ್ಮಶಾನ ಮೌನ ಆವರಿಸಿದ್ದು, ನೊಂದವರ ಕಣ್ಣೀರು ಸುಡುತ್ತಿರುವ ಬಿಸಿಲಲ್ಲಿ ಇಂಗಿ ಹೋಗುತ್ತಿದೆ.ಆದರೆ, ಈ ಪ್ರದೇಶಗಳೀಗ ಪ್ರವಾಸಿಗರಿಗೆ, ಸ್ಥಳ ನೋಡಲು ಬರುವವರಿಗೆ ಪ್ರವಾಸಿ ತಾಣಗಳಾಗಿ ಮಾರ್ಪಟ್ಟಿವೆ. ಪ್ರತಿನಿತ್ಯ ಸಾವಿರಾರು ಮಂದಿ ಈ ಅಪಾಯಕಾರಿ ಸ್ಥಳಗಳಿಗೆ ತೆರಳಿ ಮೋಜು ಅನುಭವಿಸುತ್ತಿರುವದು ದುರಂತವೇ ಸರಿ...!ಪ್ರಕೃತಿ ವಿಕೋಪಕ್ಕೆ ತುತ್ತಾಗಿ ಅತಿ ಹೆಚ್ಚು ಹಾನಿಗೀಡಾಗಿರುವ ಪ್ರದೇಶ ಗಳೆಂದರೆ ಹೆಮ್ಮೆತ್ತಾಳು, ಮಕ್ಕಂದೂರು, ಹಾಲೇರಿ, ಮೇಘತ್ತಾಳು, ಕಾಲೂರು, ದೇವಸ್ತೂರು, ಮೊಣ್ಣಂಗೇರಿ, ಜೋಡುಪಾಲ.., ಇಲ್ಲಿ ಬೆಟ್ಟಗಳೇ ಜಾರಿ ಬರಡಾಗಿದೆ. ಸಹಸ್ರಾರು ಮಂದಿ ಕಷ್ಟಪಟ್ಟು ಕಟ್ಟಿಕೊಂಡ ಬದುಕು ಇನ್ನಿಲ್ಲದಂತಾಗಿದೆ. ಘಟನೆ ನಡೆದ ಕರಾಳ ದಿನದಂದು ಅಧಿಕಾರಿ ವರ್ಗ, ಜನಪ್ರತಿನಿಧಿಗಳು, ಸೇನಾಪಡೆ ಸಂಘ-ಸಂಸ್ಥೆಗಳು, ಸ್ವಯಂ ಸೇವ ಯುವಕರ ಪಡೆ ಸಂತ್ರಸ್ತರ ನೆರವಿಗೆ ಬಂದಿತ್ತು. ಅಪಾಯವನ್ನು ದಾಟಿ ಜೀವ ರಕ್ಷಣೆ ಮಾಡಿದ್ದಾರೆ. ಅದೆಷ್ಟೋ ಮಂದಿ ನೊಂದವರಿಗೆ ಕಣ್ಣೀರು ಮಿಡಿದಿದ್ದಾರೆ.
ಆದರೆ ಇದೀಗ ಟಿವಿ, ಅಂತರ್ಜಾಲಗಳಲ್ಲಿ ಮಾಹಿತಿ ಪಡೆದವರು ಸ್ಥಳ ನೋಡಲೆಂದು ತಂಡೋಪ ತಂಡವಾಗಿ ಬರುತ್ತಿದ್ದಾರೆ. ಮಕ್ಕಂದೂರು ಗ್ರಾಮ ವ್ಯಾಪ್ತಿಯಲ್ಲಿ ಸಾಕಷ್ಟು ಹಾನಿಯೊಂದಿಗೆ ಜೀವ ಹಾನಿ ಕೂಡ ಆಗಿದೆ. ಸಂಪೂರ್ಣ ಗ್ರಾಮದ ಸಂಪರ್ಕ ಕಡಿತಗೊಂಡಿದೆಯಾದರೂ ಎರಡು ಜೀವ ಹಾನಿಯಾದ ದುರಂತ ಸ್ಥಳವಾದ ಹೆಮ್ಮೆತ್ತಾಳು ಗ್ರಾಮದ ರಸ್ತೆ ಮಾತ್ರ ಉಳಿದುಕೊಂಡಿದೆ. ಸದ್ಯಕ್ಕೆ ಸುತ್ತ ಮುತ್ತಲ ಅಳಿದುಳಿದ ಮನೆಗಳಿಗೆ ಇದೊಂದೇ ರಸ್ತೆಯಾಗಿದೆ. ಆದರೆ ಇದೀಗ ಈ ರಸ್ತೆಯಲ್ಲಿ ಗ್ರಾಮಸ್ಥರು ತೆರಳಲು ಸಾಧ್ಯವಾಗುತ್ತಿಲ್ಲ. ದಿನನಿತ್ಯ ಸಾವಿರಾರು ಮಂದಿ ಬರುತ್ತಿರುವದ ರಿಂದ ಇರುವ ರಸ್ತೆ ಕೂಡ ಹಾನಿಗೀಡಾಗುತ್ತಿದೆ. ಗ್ರಾಮಸ್ಥರೇ ಸೇರಿ ರಸ್ತೆ ಸರಿಪಡಿಸಿಕೊಂಡು ತಮ್ಮ ಮನೆಗಳಿಗೆ ತೆರಳುವ ಪ್ರಯತ್ನದಲ್ಲಿ ರುವಾಗ ವೀಕ್ಷಕರ ಹಾವಳಿಯಿಂದಾಗಿ ತೀರಾ ತೊಂದರೆಯಾಗುತ್ತಿದೆ.
(ಮೊದಲ ಪುಟದಿಂದ)
ನೋಡಲು ಬಾಡಿಗೆ
ಇದುವರೆಗೆ ಈ ರಸ್ತೆಯಲ್ಲಿ ಕೇವಲ ಜೀಪ್‍ಗಳಿಗೆ ಮಾತ್ರ ಸಂಚರಿಸಲು ಸಾಧ್ಯವಾಗುತ್ತಿತ್ತು. ಇದನ್ನೇ ಬಳಸಿಕೊಂಡ ಕೆಲವರು ಜೀಪ್‍ನಲ್ಲಿ ‘ಟ್ರಿಪ್’ ಆರಂಭಿಸಿದರು. 500+1000ದಷ್ಟು ಬಾಡಿಗೆ ಪಡೆದು ವೀಕ್ಷಕರನ್ನು ಕರೆದೊಯ್ಯಲಾಗುತ್ತಿದೆ. ಇದೀಗ ಬಿಸಿಲು ಬಂದ ಪರಿಣಾಮ ಕಾರುಗಳು ತೆರಳುವಂತಾಗಿದ್ದು, ಕಿರಿದಾದ ದಾರಿಯಲ್ಲಿ ಕಿರಿಕಿರಿ ಅನುಭವಿಸುವಂತಾಗಿದೆ. ರಜಾ ದಿನವಾದ ಭಾನುವಾರದಂದು ನೂರಾರು ವಾಹನಗಳು ರಸ್ತೆಯುದ್ದಕ್ಕೂ ಕಂಡು ಬಂದವು. ಭೂಕುಸಿತವಾದ ಪ್ರದೇಶದಲ್ಲಿ ವಾಹನ ದಟ್ಟಣೆಯಾಗಿ ಯಾವದೇ ವಾಹನಗಳಿಗೆ ಸಂಚರಿಸಲೂ ಸಾಧ್ಯವಿಲ್ಲದಂತಾಗಿತ್ತು.
ಟ್ಯಾಕ್ಸಿ ವಾಹನಗಳು ಕೂಡ ಪ್ರವಾಸಿಗರನ್ನು ಕರೆತಂದು ಹಾನಿಗೀಡಾದ ಪ್ರದೇಶವನ್ನು ಪ್ರವಾಸಿ ತಾಣವನ್ನಾಗಿ ತೋರಿಸುತ್ತಿದ್ದುದು ಕಂಡುಬಂದಿತು. ವಾಹನ ದಟ್ಟಣೆ ನಡುವೆ ಸ್ಥಳೀಯರು ಹಾಗೂ ವಾಹನ ಚಾಲಕರ ನಡುವೆ ಮಾತಿನ ಚಕಮಕಿ ಕೂಡ ನಡೆಯಿತು. ಮನೆಗಳಿಗೆ ತೆರಳುವ ಅಲ್ಲಿನ ನಿವಾಸಿಗಳಿಗೂ ತೆರಳಲಾರದಂತಹ ಪರಿಸ್ಥಿತಿ ಏರ್ಪಟ್ಟಿತ್ತು. ಈ ನಡುವೆ ಸಂತ್ರಸ್ತರಿಗೆ ನೆರವು ನೀಡುವ ಸಂಬಂಧ ಆಗಮಿಸಿದ್ದ ವಾಹನಗಳೂ ಕೂಡ ತೆರಳಲಾಗದಂತಹ ಪರಿಸ್ಥಿತಿ ನಿರ್ಮಾಣವಾಗಿತ್ತು. ನೊಂದವರನ್ನು ಸಂತೈಸುವ ಬದಲಿಗೆ ಮೋಜು, ಸೆಲ್ಫಿ ತೆಗೆಯುತ್ತಿರುವವರನ್ನು ಕಂಡು ಆಕ್ರೋಶಗೊಂಡ ಸ್ಥಳೀಯರು ಪ್ರತಿರೋಧ ವ್ಯಕ್ತಪಡಿಸಿದ ಘಟನೆಯೂ ನಡೆಯಿತು.
ನಿಷೇಧಕ್ಕೆ ಆಗ್ರಹ: ಹಾನಿಗೀಡಾದ ಪ್ರದೇಶಗಳು ಅಪಾಯಕಾರಿ ಯಾಗಿದ್ದು, ಗ್ರಾಮಸ್ಥರೇ ಇಳಿಯಲು ಹೆದರುತ್ತಿದ್ದಾರೆ. ಅಲ್ಲದೆ ಎಷ್ಟೋ ಮಂದಿಯ ನೋವು ಅಡಗಿದೆ. ಅಂತದ್ದರಲ್ಲಿ ಯಾರೆಲ್ಲೋ ಬಂದು ಇಳಿಯುತ್ತಿರುವದು ಇನ್ನಷ್ಟು ಅಪಾಯ ಆಹ್ವಾನಿಸಿದಂತಾಗುತ್ತಿದೆ. ಒಂದಿಷ್ಟು ಮಳೆ-ಗಾಳಿ ಬಂದರೂ ಕುಸಿಯುವಂತಿದೆ. ಈ ನಿಟ್ಟಿನಲ್ಲಿ ಈ ಪ್ರದೇಶಗಳಿಗೆ ಯಾವದೇ ವಾಹನಗಳಿಗೆ, ವೀಕ್ಷಕರಿಗೆ ತೆರಳಲು ಅವಕಾಶ ನೀಡಬಾರದು. ಜಿಲ್ಲಾಡಳಿತ ಈ ಬಗ್ಗೆ ಗಮನ ಹರಿಸಿ, ಗ್ರಾ.ಪಂ. ಮೂಲಕ ಸೂಕ್ತ ಕ್ರಮಕೈಗೊಂಡು ಸ್ಥಳೀಯ ನಿವಾಸಿಗಳಿಗೆ ಹಾಗೂ ಸಂತ್ರಸ್ತರಿಗೆ ನೆರವು ನೀಡಲು ಬರುವವರಿಗೆ ಮಾತ್ರ ಅವಕಾಶ ನೀಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.
-ಸಂತೋಷ್