ಮಡಿಕೇರಿ, ಸೆ. 9: ಕೊಡಗು ಜಿಲ್ಲೆಯಲ್ಲಿ ಕಂಡು ಕೇಳರಿಯದ ಪ್ರಾಕೃತಿಕ ವಿಕೋಪ ಸಂಭವಿಸಿ, ಈಗಾಗಲೇ 20 ಮಂದಿಯ ಸಾವುನೋವಿನ ನಡುವೆ, ನೂರಾರು ಮನೆಗಳು ನೆಲಸಮಗೊಂಡು ಸಾವಿರಾರು ಮಂದಿ ಸ್ವಂತ ನೆಲೆ ಸಹಿತ ಆಸ್ತಿಪಾಸ್ತಿ ಕಳೆದುಕೊಂಡಿದ್ದಾರೆ. ನಾಲ್ಕಾರು ದಿನಗಳಿಂದ ಮಳೆ ದೂರವಾಗಿ ಬಿಸಿಲಿನ ವಾತಾವರಣ ವಿದ್ದರೂ, ನೊಂದವರ ಬವಣೆ ನೀಗಿಲ್ಲ. ಬದಲಾಗಿ ಅಳಿದುಳಿದಿರುವ ತಮ್ಮ ಊರಿನತ್ತ ಮುಖ ಮಾಡಿರು ವವರಿಗೆ ಸ್ವಂತ ಸೂರಿನೊಂದಿಗೆ ರಸ್ತೆ, ಕುಡಿಯುವ ನೀರಿನ ಸಮಸ್ಯೆ ಎದುರಾಗಿದೆ.ಪ್ರಾಕೃತಿಕ ವಿಕೋಪಕ್ಕೆ ಸಿಲುಕಿರುವ ಮದೆ, ಗಾಳಿಬೀಡು, ಮಕ್ಕಂದೂರು, ಮಾದಾಪುರ, ಕೆದಕಲ್, ಕೆ. ನಿಡುಗಣೆ ಗ್ರಾ.ಪಂ. ವ್ಯಾಪ್ತಿಯ ಸಂತ್ರಸ್ತ ಕುಟುಂಬಗಳ ಬದುಕು ಇಂದಿಗೂ ಬವಣೆಯಿಂದ ಸಾಗಿದೆ. ಹಾಲೇರಿ, ಕಾಂಡನಕೊಲ್ಲಿ (ಕಡಂದಾಳು) ಹೆಮ್ಮೆತ್ತಾಳು, ಕೊಪ್ಪತ್ತೂರು ಇತರೆಡೆಯ ಗ್ರಾಮಸ್ಥರು ಸಂಕಷ್ಟದಲ್ಲೇ ದಿನ ಕಳೆಯುತ್ತಿದ್ದಾರೆ.ಪ್ರಾಕೃತಿಕ ವಿಕೋಪದಿಂದ ಶ್ರೀಮಂತ-ಬಡವನೆಂಬ ಬೇಧವಿಲ್ಲದೆ ಅನೇಕರು ಸಂಕಷ್ಟ ಅನುಭವಿಸುತ್ತಿದ್ದಾರೆ. ಮಕ್ಕಂದೂರು ಬಳಿಯ ಸಿಂಕೋನ ತೋಟಕ್ಕೆ ಹೊಂದಿಕೊಂಡು ಸುಮಾರು 300 ಮೀಟರ್‍ಗೂ ಅಧಿಕ ಅಂತರದಲ್ಲಿ ಹೆದ್ದಾರಿ ಕುಸಿದು ಹೋಗಿದೆ. ಪರಿಣಾಮ ಈ ರಸ್ತೆಯ ಅಂಚಿನಲ್ಲಿದ್ದ ಅನೇಕರ ಮನೆಗಳು ಗುರುತು ಪತ್ತೆಯಾಗದಂತೆ ಮಣ್ಣುಪಾಲಾಗಿರುವ ದೃಶ್ಯ ಎದುರಾಗಿದೆ.

ಮಾದಾಪುರ ಗ್ರಾ.ಪಂ. ವ್ಯಾಪ್ತಿಯ ಕಾಂಡನಕೊಲ್ಲಿ ಹೆದ್ದಾರಿ ಬಳಿ ಸಿಂಕೋನ ತೋಟ ಬದಿಯ ರಸ್ತೆ ಮೇಲ್ಭಾಗ ನಿವಾಸಿ ಲಾರೆನ್ಸ್, ರಶ್ಮಿ, ಲಲಿತಾ ಎಂಬವರ ಮನೆಗಳು ಕೊಚ್ಚಿ ಹೋಗಿ, ರಸ್ತೆ ಬದಿ ಗೃಹೋಪಯೋಗಿ ವಸ್ತುಗಳ ಅವಶೇಷ ಗೋಚರಿಸ ತೊಡಗಿವೆ. ಪಕ್ಕದಲ್ಲೇ ಎ.ಡಿ. ನಾಣಯ್ಯ ಎಂಬವರ ಮನೆ ಯಾವದೇ ಕ್ಷಣ ಕುಸಿಯುವ ಸ್ಥಿತಿಯಲ್ಲಿ ಎದುರಾಗಲಿದೆ.

ಕಾಂಡನಕೊಲ್ಲಿಯ ಮರುವಂಡ, ಬಿಜ್ಜಂಡ, ವಡ್ಡಚೆಟ್ಟಿರ, ಅಯಿರಣಿಯಂಡ, ಮನಿಯಪ್ಪನ, ಲಕ್ಕಪ್ಪನ ಮುಂತಾದವರ ಕುಟುಂಬಸ್ಥರ ಗದ್ದೆ, ಕಾಫಿ ತೋಟಗಳಲ್ಲಿ ಸಾಲು ಸಾಲು ಭೂಕುಸಿತದೊಂದಿಗೆ ಭಯಾನಕ ಚಿತ್ರಣ ಗೋಚರಿಸ ತೊಡಗಿದೆ. ಈ ರಸ್ತೆ ಅಂಚಿನಲ್ಲಿ ಉಳಿದಿರುವ ಏಕೈಕ ಮನೆಯ ನಿವಾಸಿ ಸುಮಿತ್ರ ಸೋಮಣ್ಣ ಎಂಬವರಿಗೆ ಕುಡಿಯಲೂ ನೀರಿಲ್ಲದೆ ರಸ್ತೆ ಬದಿ ಕುಸಿದಿರುವ ಗೊಸರಿನ ನಡುವೆ ನೀರು ಹಿಡಿದುಕೊಂಡು ಬದುಕು ಸಾಗಿಸುತ್ತಿದ್ದಾರೆ. ಇಷ್ಟು ದಿನ ಮಳೆ ನೀರಿನಲ್ಲಿ ಬದುಕಿದ್ದಾಗಿ ಅಳಲು ತೋಡಿಕೊಂಡಿದ್ದಾರೆ.

ಬಾಗಿಲು ಮುಚ್ಚಿದೆ: ಕೊಪ್ಪತ್ತೂರು ನಿವಾಸಿ ಸುಬ್ರಮಣ್ಯ ಭಟ್ ಅವರ ಮನೆಯ ಹಿತ್ತಲಿನಲ್ಲಿ ಬರೆ ಕುಸಿದು ಹಿಂಬದಿಯ ಬಾಗಿಲು ತೆರೆಯಲಾರದೆ ಹಾಗೆಯೇ

(ಮೊದಲ ಪುಟದಿಂದ) ಬದುಕು ಕಂಡುಕೊಂಡಿದ್ದಾರೆ. ಇವರ ಗದ್ದೆಯಲ್ಲಿ ನಾಟಿಗೆಂದು ಸಿದ್ಧಗೊಳಿಸಿದ್ದ ಸಸಿಮಡಿ ಮತ್ತು ಉಳುಮೆ ಮಾಡಿದ ಹೊಲ ನಾಟಿಯಾಗದೆ ಮುಳುಗಡೆಯಾಗಿದ್ದರೆ, ಈಗ ನೀರು ಇಳಿದು ಬರಡು ಭೂಮಿಯಂತೆ ಗೋಚರಿಸುತ್ತಿದೆ. ಕಾಫಿ ತೋಟವೂ ಹಲವೆಡೆ ಮಣ್ಣು ಪಾಲಾಗಿದೆ.

ಭೀಕರ ದೃಶ್ಯ: ಹಾಲೇರಿ ನಿವಾಸಿ ಕೋಡಿಮಣಿಯಂಡ ರಾಜನ್ ಅಪ್ಪಣ್ಣ, ಭಂಡಾರಿ ಎಂಬವರಿಗೆ ಸೇರಿದ ಹಿಮಗಿರಿ ತೋಟ ಭಾರೀ ಭೂಕುಸಿತದಿಂದ ಅತ್ಯಂತ ಭಯಾನಕ ಸನ್ನಿವೇಶ ಅಲ್ಲಲ್ಲಿ ಕಂಡುಬರುತ್ತಿದೆ.

ರಸ್ತೆ ಅಗೋಚರ: ಕಾಂಡನಕೊಲ್ಲಿ-ಕೆದಕಲ್ ನಡುವೆ ಸುಂಟಿಕೊಪ್ಪ ಸಂಪರ್ಕ ಮಾರ್ಗದ ‘ವೆಂಕಿಡ್ಸ್ ವ್ಯಾಲಿ’ ಎಂಬಲ್ಲಿ ಅಂದಾಜು 250 ಮೀಟರ್ ಡಾಮರು ರಸ್ತೆ ನಾಪತ್ತೆಯಾಗಿ ನೂರಾರು ಅಡಿ ಆಳದ ಪ್ರಪಾತ ಸೃಷ್ಟಿಯಾಗಿದೆ.

ಮನೆಗಳು ನೆಲಸಮ: ಜಲ ಸ್ಫೋಟದೊಂದಿಗೆ ಹಿಮಗಿರಿ ತೋಟದ ಭೂಕುಸಿತದಿಂದ ತಾತಿಬಾಣೆ ಪೈಸಾರಿ ಎಂಬಲ್ಲಿ ಶೇಖರ್, ನಾರಾಯಣ, ಕೇಶವ, ಪುಷ್ಪ, ಸುಬ್ರಮಣಿ ಮೊದಲಾದವರ ಮನೆಗಳು ಕೊಚ್ಚಿಕೊಂಡು ಹೋಗಿ, ಪ್ರವಾಹದ ನಡುವೆ ಗೃಹೋಪಯೋಗಿ ವಸ್ತುಗಳ ಸಹಿತ ದನಗಳು ಜೀವಂತ ಹೂತು ಹೋಗಿರುವ ಘೋರ ದೃಶ್ಯ ಕಣ್ಣು ಕಟ್ಟಲಿವೆ. ಈ ಪ್ರದೇಶದಲ್ಲಿ ಅನೇಕರ ಮನೆಯೊಂದಿಗೆ ತೋಟ, ಗದ್ದೆಗಳಿಗೂ ಹಾನಿಯಾಗಿವೆ.

ರೋಟರಿ ನೆರವು: ಮಡಿಕೇರಿ ರೋಟರಿ ಮಿಸ್ಟಿಹಿಲ್ ಅಧ್ಯಕ್ಷ ರವಿಶಂಕರ್ ತಂಡ ಇಂದು ಹಟ್ಟಿಹೊಳೆ, ಕಾಂಡನಕೊಲ್ಲಿ ನಡುವೆ ಕಾಲ್ನಡಿಗೆಯಲ್ಲಿ ಸಂಚರಿಸಿ, ಸಂತ್ರಸ್ತ ಕುಟುಂಬಗಳಿಗೆ ದಿನಸಿ ಸಾಮಗ್ರಿ ವಿತರಿಸುತ್ತಿದ್ದದ್ದು ಗೋಚರಿಸಿತು. ಈ ತಂಡದಲ್ಲಿ ಡಾ. ಪ್ರಶಾಂತ್, ಲವಿನ್, ಶ್ರೀಹರಿ, ಡಿಸೋಜಾ ಮೊದಲಾದವರು ಹಾಜರಿದ್ದರು.

ಗ್ರಾ.ಪಂ. ಅಧ್ಯಕ್ಷೆ ಭೇಟಿ: ಮಾದಾಪುರ ಗ್ರಾ.ಪಂ. ಅಧ್ಯಕ್ಷೆ ಲತಾ ನಾಗರಾಜ್, ಕೆದಕಲ್ ಗ್ರಾ.ಪಂ. ಅಧ್ಯಕ್ಷ ಬಾಲಕೃಷ್ಣ ರೈ ಮೊದಲಾದವರು ಪ್ರಾಕೃತಿಕ ವಿಕೋಪಕ್ಕೆ ತುತ್ತಾಗಿರುವ ಪ್ರದೇಶಗಳಿಗೆ ಪ್ರತ್ಯೇಕ ತಂಡಗಳಲ್ಲಿ ತೆರಳಿ, ಆತಂಕದಲ್ಲಿರುವ ಕುಟುಂಬಗಳಿಗೆ ಸರಕಾರದಿಂದ ನೆರವಿನ ಭರವಸೆಯೊಂದಿಗೆ ಆಹಾರ ಕಿಟ್‍ಗಳನ್ನು ವಿತರಿಸಲು ಮಾಹಿತಿ ಪಡೆಯುತ್ತಿದ್ದುದು ಗೋಚರಿಸಿತು.