ಕುಶಾಲನಗರ, ಸೆ. 8: ಕಾವೇರಿ ನದಿ ತುಂಬಿ ಹರಿದ ಸಂದರ್ಭ ಕೆಲವು ಬಡಾವಣೆಗಳು ನೀರಿನಿಂದ ಆವೃತಗೊಂಡು ಸಮಸ್ಯೆ ತಲೆದೋರುವದರೊಂದಿಗೆ ಕುಶಾಲನಗರ ಪಟ್ಟಣ ಸೇರಿದಂತೆ ಸುತ್ತಮುತ್ತಲ ವ್ಯಾಪ್ತಿಯಲ್ಲಿ ನಡೆಸಿದ ಒಳಚರಂಡಿ ಯೋಜನೆ ಕಾಮಗಾರಿ ಕೂಡ ಬಹುತೇಕ ಕಾವೇರಿ ನದಿ ಪಾಲಾಗಿರುವ ದೃಶ್ಯ ಕಂಡುಬಂದಿದೆ.

ಅಂದಾಜು ರೂ. 53 ಕೋಟಿ ವೆಚ್ಚದ ಯೋಜನೆ ಮೂಲಕ ಪಟ್ಟಣದ ನೈರ್ಮಲ್ಯ ಕಾಪಾಡುವದು ಸೇರಿದಂತೆ ಜೀವನದಿ ಕಾವೇರಿ ಕಲುಷಿತವಾಗುವದನ್ನು ತಡೆಗಟ್ಟುವ ಪ್ರಮುಖ ಪಾತ್ರ ವಹಿಸುವ ಯೋಜನೆಯೊಂದು ಇದೀಗ ನೇರವಾಗಿ ನದಿ ಯನ್ನು ಕಲುಷಿತ ಗೊಳಿಸಲು ನಿರ್ಮಾಣ ವಾದ ಯೋಜನೆಯಂತೆ ಭಾಸವಾಗುತ್ತಿದೆ.

ಕುಶಾಲನಗರದ ತಾವರೆಕೆರೆ ಬಳಿಯಿಂದ ಮುಳ್ಳುಸೋಗೆವರೆಗೆ ಸುಮಾರು 3 ಕಿ.ಮೀ. ಉದ್ದದ ತನಕ ಯೋಜನೆಗೆ ಸಂಬಂಧಿಸಿ ದಂತೆ ಕಾಮಗಾರಿ ಬಹುತೇಕ ನಿಯಮಬಾಹಿರವಾಗಿ ನಡೆದಿದ್ದು ನದಿಯ ಬದಿಯಲ್ಲಿ ಶೌಚ ತ್ಯಾಜ್ಯ ಹರಿಸುವ ಪೈಪ್‍ಗಳನ್ನು ಹಾಗೂ ಬೃಹತ್ ಗಾತ್ರದ ಆಳುಗುಂಡಿಗಳನ್ನು ಅಳವಡಿಸಲಾಗಿತ್ತು. ಕಾಮಗಾರಿಯ ಯೋಜನೆಯನ್ನು ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಕೈಗೆತ್ತಿಕೊಂಡಿದ್ದು ಇನ್ನೂ ಕಾಮಗಾರಿ ಪೂರ್ಣಗೊಂಡಿಲ್ಲ. ಆದರೆ ಪೈಪ್ ಮೂಲಕ ಕೆಲವೆಡೆ ತ್ಯಾಜ್ಯಗಳು ಹರಿದು ಆವಾಂತರ ಉಂಟಾಗುತ್ತಿರುವದು ಗೋಚರಿಸಿದೆ. ಕಾವೇರಿ ನದಿ ತುಂಬಿ ಹರಿಯುತ್ತಿದ್ದ ಸಂದರ್ಭ ಬಹುತೇಕ ಯೋಜನೆಯ ಕಾಮಗಾರಿ ನೀರಿನಿಂದ ಆವೃತಗೊಂಡು ಕುಸಿದಿರುವ ದೃಶ್ಯಗಳು ಅಲ್ಲಲ್ಲಿ ಕಂಡುಬಂದಿವೆ. ಪೈಪ್‍ಗಳಿಂದ ಮತ್ತು ಆಳುಗುಂಡಿಗಳಿಂದ ತ್ಯಾಜ್ಯಗಳು ಹೊರಸೂಸುತ್ತಿರುವ ದೃಶ್ಯಗಳು ಸಾಮಾನ್ಯವಾಗಿದೆ.

ಕಾಮಗಾರಿ ಕಳಪೆ ಮಟ್ಟದಲ್ಲಿರುವ ದೂರುಗಳೊಂದಿಗೆ ಅಳವಡಿಸಿರುವ ಪೈಪ್‍ಗಳು, ಆಳುಗುಂಡಿಗಳು ಒಡೆದು ಪೈಪ್‍ನ ಒಳಭಾಗದಿಂದ ಕಲುಷಿತ ನೀರು ಹೊರಬರುತ್ತಿರುವ ದೃಶ್ಯ ಅಲ್ಲಲ್ಲಿ ಕಂಡುಬರುತ್ತಿದೆ. ಆಳುಗುಂಡಿಗಳಿಂದ ಕಲುಷಿತ ತ್ಯಾಜ್ಯಗಳು ನೇರವಾಗಿ ನದಿ ಸೇರುತ್ತಿದ್ದರೂ ಅಧಿಕಾರಿಗಳು ಮಾತ್ರ ಮೌನವಹಿಸಿರುವದು ಕಾಣಬಹುದು.

ಈ ಬಗ್ಗೆ ಪರಿಶೀಲನೆ ನಡೆಸಿ ಸಂಬಂಧಿಸಿದ ಅಧಿಕಾರಿಗಳ ಮೇಲೆ ಕ್ರಮ ಕೈಗೊಳ್ಳುವಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನದ ಪ್ರಮುಖರು ಜಿಲ್ಲಾಧಿಕಾರಿಗಳಿಗೆ, ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿ ಗಳಿಗೆ ದಾಖಲೆ ಸಹಿತ ಮನವಿ ಸಲ್ಲಿಸಿದ್ದರು. ಆದರೆ ಇದುವರೆಗು ಯಾವದೇ ಸ್ಪಂದನೆ ದೊರಕಿಲ್ಲ ಎನ್ನಲಾಗಿದೆ.

ತಜ್ಞರ ಸಮಿತಿ ಮೂಲಕ ಯೋಜನೆಯ ಬಗ್ಗೆ ಪರಿಶೀಲನೆ ನಡೆಸಿ ಸಮಗ್ರ ತನಿಖೆ ಯೊಂದಿಗೆ ನೀರು ಪಾಲಾಗಿರುವ ಬಗ್ಗೆ ಸಂಬಂಧಿಸಿದವರ ಮೇಲೆ ಕ್ರಮ ಕೈಗೊಳ್ಳಬೇಕು ಎಂದು ನಾಗರಿಕರು ಆಗ್ರಹಿಸಿದ್ದಾರೆ.

ಕುಶಾಲನಗರದ ಅಯ್ಯಪ್ಪಸ್ವಾಮಿ ದೇವಾಲಯದ ಬಳಿ ಮತ್ತು ಮಾರುಕಟ್ಟೆ ಆವರಣದಲ್ಲಿ ನದಿ ಅಂತರದಲ್ಲಿ ನಿರ್ಮಿಸಿದ ಎರಡು ವೆಟ್‍ವೆಲ್ ಕಾಮಗಾರಿ ಕೂಡ ಕಾವೇರಿ ನದಿ ನೀರಿನಿಂದ ಸಂಪೂರ್ಣ ಆವೃತಗೊಂಡಿತ್ತು. ನದಿ ಬದಿಯಲ್ಲಿ ನಿರ್ಮಿಸಿದ ಕೆಲವು ಆಳುಗುಂಡಿಗಳು ಕುಸಿದು ಅದರ ಒಳಗೆ ಸರಬರಾಜಾಗುವ ಕಲುಷಿತ ನೀರು ನದಿ ಸೇರುತ್ತಿದೆ. ಯೋಜನೆ ಅನುಷ್ಠಾನಗೊಂಡ ನಂತರ ಭಾರೀ ಅನಾಹುತಗಳು ಸಂಭವಿಸುವ ಸಾಧ್ಯತೆ ಅಧಿಕ ಎನ್ನುವದು ಖಚಿತವಾಗಿದೆ.

ಸಾಯಿ ಬಡಾವಣೆ ಸೇರಿದಂತೆ ಹಲವೆಡೆ ನದಿ ತಟದಲ್ಲಿ ನಿರ್ಮಿಸಿದ ಪೈಪ್‍ಲೈನ್ ಸೇತುವೆ ಪೂರ್ಣ ಕುಸಿದಿದ್ದು ಪೈಪ್ ಹಾನಿಗೊಂಡು ಕಲುಷಿತ ತ್ಯಾಜ್ಯಗಳು ಹೊರಬರುತ್ತಿರುವ ದೃಶ್ಯ ಅಲ್ಲಲ್ಲಿ ಗೋಚರಿಸಿದೆ. ನಗರದ ಬಡಾವಣೆಗಳಲ್ಲಿ ರಸ್ತೆಗಳಲ್ಲಿ ನಿರ್ಮಿಸಿದ ಮ್ಯಾನ್‍ಹೋಲ್ ಕಾಮಗಾರಿ ಕುಸಿದು ಅದರಿಂದ ತ್ಯಾಜ್ಯಗಳು ಹೊರಬರುತ್ತಿರುವ ದೃಶ್ಯ ಕಂಡುಬಂದಿದೆ.

ಜೀವನದಿ ಕಾವೇರಿ ತಟದಲ್ಲಿ ನಿಯಮ ಬಾಹಿರವಾಗಿ ಅಳವಡಿಸಿರುವ ಒಳಚರಂಡಿ ಕಾಮಗಾರಿಯನ್ನು ಸ್ಥಳಾಂತರಿಸಿ ಮುಂದೆ ಉಂಟಾಗಲಿರುವ ಅನಾಹುತವನ್ನು ತಪ್ಪಿಸಬೇಕೆಂದು ಕಾವೇರಿ ನದಿ ಸ್ವಚ್ಛತಾ ಆಂದೋಲನ ಮೂಲಕ ಜಿಲ್ಲಾಧಿಕಾರಿಗಳಿಗೆ ಲಿಖಿತ ಮನವಿ ಮೂಲಕ ಸಲ್ಲಿಸಲಾಗಿದೆ.

ಒಳಚರಂಡಿ ಕಾಮಗಾರಿ ಅವ್ಯವಸ್ಥೆ ಬಗ್ಗೆ ಪ.ಪಂ. ಮೂಲಕ ಜಿಲ್ಲಾಧಿಕಾರಿಗಳಿಗೆ ವರದಿ ಸಲ್ಲಿಸಲಾಗಿದ್ದು ಕಾಮಗಾರಿಯಲ್ಲಿ ನಡೆದ ನ್ಯೂನತೆಗಳ ಬಗ್ಗೆ ಸಂಪೂರ್ಣ ಮಾಹಿತಿ ಒದಗಿಸಲಾಗಿದೆ ಎಂದು ಕುಶಾಲನಗರ ಪ.ಪಂ. ಮುಖ್ಯಾಧಿಕಾರಿ ಎ.ಎಂ. ಶ್ರೀಧರ್ ಪ್ರತಿಕ್ರಿಯಿಸಿದ್ದಾರೆ.

ಒಟ್ಟಾರೆ ಪಟ್ಟಣದ ಶುಚಿತ್ವ ಕಾಪಾಡಲು ಮತ್ತು ಕಾವೇರಿ ನದಿ ಸಂರಕ್ಷಣೆಗೆ ಒತ್ತು ನೀಡಿ ನಿರ್ಮಾಣಗೊಳ್ಳುತ್ತಿರುವ ಒಳಚರಂಡಿ ಯೋಜನೆ ನದಿ ಪಾಲಾಗುತ್ತಿದೆ ಎಂದರೆ ತಪ್ಪಾಗಲಾರದು.

- ಚಂದ್ರಮೋಹನ್